ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ವೈದ್ಯ ಸೇವಾ ಇಲಾಖೆಯಲ್ಲಿ ವೈದ್ಯರಿಗೆ ಕೆಲಸ ಮಾಡುವ ಇಚ್ಛಾಶಕ್ತಿಯಿಲ್ಲ

ಸಭೆಯಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಕಿಡಿ
Last Updated 7 ಜುಲೈ 2020, 14:17 IST
ಅಕ್ಷರ ಗಾತ್ರ

ಕೋಲಾರ: ‘ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಿಬ್ಬಂದಿಯಲ್ಲಿ ಶೇ 50ರಷ್ಟು ಮಂದಿ ಕೆಲಸನೇ ಮಾಡುತ್ತಿಲ್ಲ. ವೈದ್ಯರು ಹಳ್ಳಿಗಳಿಗೆ ಹೋಗುತ್ತಿಲ್ಲ. ರೈತರು ಕರೆ ಮಾಡಿದರೆ ವೈದ್ಯರು ಸ್ವೀಕರಿಸುವುದಿಲ್ಲ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ಹುದ್ದೆ ಖಾಲಿಯಿವೆ. ಆದರೆ, ಲಭ್ಯ ವೈದ್ಯರು ಮತ್ತು ಸಿಬ್ಬಂದಿಗೆ ಕೆಲಸ ಮಾಡುವ ಇಚ್ಛಾಶಕ್ತಿಯಿಲ್ಲ. ಈ ಬಗ್ಗೆ ಸಾಕಷ್ಟು ದೂರು ಬಂದಿವೆ’ ಎಂದು ಕೆಂಡಾಮಂಡಲರಾದರು.

‘ಮೂಕ ಪ್ರಾಣಿಗಳನ್ನು ಸಂರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ವೈದ್ಯರು ಗ್ರಾಮಗಳಿಗೆ ಹೋಗಿ ರಾಸುಗಳಿಗೆ ಚಿಕಿತ್ಸೆ ನೀಡಬೇಕು ಪ್ರತಿನಿತ್ಯ ಯಾರು ಎಲ್ಲಿಗೆ ಹೋಗಿದ್ದಿರಿ, ಏನು ಚಿಕಿತ್ಸೆ ನೀಡಿದ್ದೀರಿ ಎಂಬುದನ್ನು ಫೋಟೊ ಸಹಿತ ವಾಟ್ಸ್‌ ಆ್ಯಪ್‌ಗೆ ಮಾಹಿತಿ ಕಳುಹಿಸಬೇಕು’ ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ಸಚಿವರು, ‘ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಏನು ಕೆಲಸ ಮಾಡ್ತಿರಿ, ಸಹಾಯಕ ನಿರ್ದೇಶಕರಿಂದ ಏನು ಕೆಲಸ ಮಾಡಿಸ್ತಿರಿ, ನೀವು ಕೇಂದ್ರ ಸ್ಥಾನ ಬಿಟ್ಟು ಗ್ರಾಮಗಳಿಗೆ ಹೋಗುವುದಿಲ್ಲವಾ?’ ಎಂದು ಪ್ರಶ್ನಿಸಿದರು.

‘ಪಶು ಆಸ್ಪತ್ರೆಗಳಲ್ಲಿ ಹೊರಗೆ ಔಷಧ ಮಾತ್ರೆ ಖರೀದಿಸುವಂತೆ ಚೀಟಿ ಬರೆದು ಕೊಡುತ್ತಿರುವ ಬಗ್ಗೆ ದೂರು ಬಂದಿವೆ. ಯಾವುದೇ ಕಾರಣಕ್ಕೂ ಚೀಟಿ ಬರೆದು ಕೊಡಬಾರದು’ ಎಂದು ಇಲಾಖೆ ಉಪ ನಿರ್ದೇಶಕ ಡಾ.ಜಗದೀಶ್‌ ಅವರಿಗೆ ಸೂಚಿಸಿದರು.

ಹಣ ದುರ್ಬಳಕೆ: ‘ಹಾಲು ಒಕ್ಕೂಟಗಳು ಸರ್ಕಾರದ ಸೌಲಭ್ಯ ಪಡೆಯುತ್ತಿವೆ. ರೈತರು ಡೇರಿಗಳಿಗೆ ಹಾಕಿದ ಹಾಲಿನಲ್ಲಿ ಸಂಗ್ರಹಿಸಿದ ಹಣವನ್ನು ಒಕ್ಕೂಟದ ಮೂಲಕ ಉತ್ಪಾದಕರ ಕ್ಷೇಮಾಭಿವೃದ್ಧಿಗೆ ಬಳಸಬೇಕು. ಆದರೆ, ಕೋವಿಡ್ ಸಂದರ್ಭದಲ್ಲಿ ಕೋಚಿಮುಲ್‌ ಅಧ್ಯಕ್ಷರು ಒಕ್ಕೂಟದ ₹ 3.30 ಕೋಟಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ತಮ್ಮ ಮನೆಯಿಂದ ನೀಡಿದಂತೆ ಆಹಾರದ ಕಿಟ್‌ ವಿತರಿಸಿದ್ದಾರೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಗಂಭೀರ ಆರೋಪ ಮಾಡಿದರು.

‘ಆಯಾ ತಾಲ್ಲೂಕಿಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಆಹಾರ ಪದಾರ್ಥಗಳ ಕಿಟ್‌ ವಿತರಿಸಬೇಕೆಂದು ಹೇಳಿದ್ದರೂ ಕೇಳಿಲ್ಲ. ಹಾಲು ಒಕ್ಕೂಟದ ಹಣ ಅವರ ಮನೆ ಆಸ್ತಿಯೇ?’ ಎಂದು ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ತಿಪ್ಪಾರೆಡ್ಡಿ ವಿರುದ್ಧ ಹರಿಹಾಯ್ದರು.

ಇದಕ್ಕೆ ಪ್ರತಿಕ್ರಿಯಿಸಿದ ತಿಪ್ಪಾರೆಡ್ಡಿ, ‘ಆ ಹಣವನ್ನು 24 ಅಂಶಗಳಿಗೆ ಬಳಸಬಹುದು. ತಾಲ್ಲೂಕು ಮಟ್ಟದಲ್ಲಿ ಎಲ್ಲೆಲ್ಲಿ ಏನು ನೀಡಲಾಗಿದೆ ಎಂದು ಮಾಹಿತಿ ಕೊಡುತ್ತೇವೆ’ ಎಂದು ಸ್ಪಷ್ಟಪಡಿಸಿದರು. ಇದರಿಂದ ಕೆರಳಿದ ಸಂಸದರು. ‘ಕೋವಿಡ್ ವೇಳೆ ಒಕ್ಕೂಟದಿಂದ ಕೈಗೊಂಡ ಕ್ರಮಗಳ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡುವಂತೆ ಸೂಚಿಸಿದ್ದರೂ ಮಾಹಿತಿ ನೀಡುತ್ತಿಲ್ಲ. ಸರ್ಕಾರಿ ಸಂಬಳ ತೆಗೆದುಕೊಳ್ಳುತ್ತೀರಿ, ಸತ್ಯ ಹೇಳುವುದಕ್ಕೆ ಭಯವೆ, ಯಾರನ್ನೋ ಮೆಚ್ಚಿಸುವುದಕ್ಕೆ ಕೆಲಸ ಮಾಡುತ್ತಿದ್ದೀರಿ’ ಎಂದು ರೇಗಿದರು.

ಗಂಭೀರ ಪರಿಣಾಮ: ‘ಕೋಚಿಮುಲ್ ಮೂಲಕ ಉಚಿತವಾಗಿ ವಿತರಿಸಿದ ಹಾಲಿನ ಹಣ ₹ 9 ಕೋಟಿ ಸರ್ಕಾರ ನೀಡಬೇಕಿದೆ. ಇಷ್ಟು ಮೊತ್ತದ ಹಣ ಸರ್ಕಾರ ಭರಿಸುವಾಗ ಸರ್ಕಾರ ಏನು ಅನುಕೂಲ ಮಾಡಿದೆ ಎಂದು ಜನರಿಗೆ ತಿಳಿಸಬೇಕು. ಇನ್ನೊಮ್ಮೆ ದೂರು ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಸಚಿವರು ಕೋಚಿಮುಲ್‌ ವ್ಯವಸ್ಥಾಪಕರಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಆಸ್ತಿ ರಕ್ಷಿಸಿ: ಸಭೆಯಲ್ಲಿ ವಕ್ಫ್ ಬೋರ್ಡ್‌ ಆಸ್ತಿಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ‘ಆಸ್ತಿಗಳಿಗೆ ತಡೆಗೋಡೆ ಹಾಕಿ ರಕ್ಷಣೆ ಮಾಡಿ. ಒತ್ತುವರಿ ಆಗಿದ್ದರೆ ತೆರವು ಮಾಡಿ’ ಎಂದು ಹಜ್‌ ಮತ್ತು ವಕ್ಫ್‌ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌, ಶಾಸಕಿ ಎಂ.ರೂಪಕಲಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT