ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು | ಡ್ರ್ಯಾಗನ್ ಫ್ರೂಟ್: ಲಾಭದತ್ತ ಕೃಷಿಕ

Published 30 ಆಗಸ್ಟ್ 2023, 6:47 IST
Last Updated 30 ಆಗಸ್ಟ್ 2023, 6:47 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನಲ್ಲಿ ಯಾವುದೇ ನದಿ, ನಾಲೆಗಳು ಇಲ್ಲದೆ ಕೇವಲ ಮಳೆಯನ್ನು ನಂಬಿಕೊಂಡು ಇಲ್ಲಿನ ರೈತರು ಬೆಳೆಗಳನ್ನು ಬೆಳೆಯಬೇಕಾಗಿರುವುದರಿಂದ ಹೂ ಬೆಳೆ ಕಡೆ ರೈತರು ಮುಖ ಮಾಡಿದ್ದಾರೆ. ಆದರೆ ಯುವ ರೈತ ಶ್ರೀನಿವಾಸ್ ಅವರು ಕಡಿಮೆ ನೀರು ಮತ್ತು ಕಡಿಮೆ ಖರ್ಚಿನಲ್ಲಿ ಬೆಳೆಯುವ ಡ್ಯ್ರಾಗನ್ ಪ್ರೂಟ್ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ತಾಲ್ಲೂಕಿನ ಅಸಾಂಡಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕುಪ್ಪೂರು ಗ್ರಾಮದ ರೈತ ಶ್ರೀನಿವಾಸ್ ಕೃಷಿಕ ಕುಟುಂಬದವರು. ಟೊಮೆಟೊ, ಆಲೂಗಡ್ಡೆ, ಕ್ಯಾಪ್ಸಿಕಂ, ಕ್ಯಾರೆಟ್ ಬೆಳೆ ಬೆಳೆಯುತ್ತಾರೆ.

ರೈತ ಶ್ರೀನಿವಾಸ್ ಸಾಲ ಮಾಡಿ ಬೆಳೆ ಮಾಡಿದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕದೆ ಸಾಲಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಲಾಭದಾಯಕ ಬೆಳೆ ಮಾಡಬೇಕೆಂದು ಆಲೋಚಿಸಿ ಯುಟ್ಯೂಬ್‌ನಲ್ಲಿ ರೈತರು ಬೆಳೆಯುವ ವಿವಿಧ ಬೆಳೆಗಳ ಬಗ್ಗೆ ಮಾಹಿತಿ ಪಡೆದರು. ಹುಡುಕಾಟದಲ್ಲಿ ಕಂಡಿದ್ದು ಲಾಭದಾಯಕ ಬೆಳೆ ಡ್ರ್ಯಾಗನ್ ಫ್ರೂಟ್ ಬೆಳೆ.

ಅವರು ಒಂದು ಎಕರೆ ಇಪ್ಪತ್ತು ಗುಂಟೆ ಭೂಮಿಯಲ್ಲಿ ಉಳುಮೆ ಮಾಡಿ ಅದರಲ್ಲಿ 6–8 ಅಂತರದಲ್ಲಿ ಕಲ್ಲು ಕಂಬ ನಿರ್ಮಿಸಿ ಇದಕ್ಕೆ ಕಬ್ಬಿಣದ ತಂತಿಯ ಚಪ್ಪರ ಹಾಕಿ ನಾಟಿ ಮಾಡಿದ್ದಾರೆ. ಯಲಹಂಕ ಮತ್ತು ಹೊಸೂರು ಕಡೆಯ ನರ್ಸರಿಗೆ ಭೇಟಿ ನೀಡಿ 2ಸಾವಿರ ನಾರು ತಂದು ನಾಟಿ ಮಾಡಿದ್ದಾರೆ. ಒಂದು ಎಕರೆ ಇಪ್ಪತ್ತು ಗುಂಟೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆ ಮಾಡಲು ₹7.50ಲಕ್ಷ ವೆಚ್ಚ ತಗುಲಿದೆ.

ನಾರು ನಾಟಿ ಮಾಡಿ ನಾಟಿ ಮಾಡಿ ಒಂದು ವರ್ಷ ಪೋಷಣೆ ಮಾಡಲಾಗಿದ್ದು, ಫಸಲು ಆರಂಭವಾಗಿದೆ. ಪ್ರಸ್ತುತ ಹಣ್ಣು ಕಟಾವು ಆರಂಭಿಸಲಾಗಿದೆ. ಮೊದಲ ವರ್ಷ ಕಡಿಮೆ ಇಳುವರಿ ಸಿಗಲಿದ್ದು, ನಂತರದ ದಿನಗಳಲ್ಲಿ ಹೆಚ್ಚಿನ ಲಾಭ ಬರಲಿದೆ ಎನ್ನುತ್ತಾರೆ ರೈತ ಶ್ರೀನಿವಾಸ್.

ಹನಿ ನೀರಾವರಿ ಪದ್ಧತಿ ಬಳಸಿ ಸಾವಯವ ಪದ್ಧತಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆ ಮಾಡಲಾಗಿದೆ. ಪ್ರಸ್ತುತ 100 ಕಾಯಿ ಬಿಡುತ್ತಿದ್ದು, ಸುಮಾರು ಒಂದು ಕಾಯಿ ₹33ರಂತೆ ಮಾಲೂರಿನಲ್ಲಿ ಇರುವ ವೇಕುಲ್ ಕಂಪನಿಗೆ ಸರಬರಾಜು ಮಾಡಲಾಗುತ್ತಿದೆ. ಬೆಂಗಳೂರು ಮಾರುಕಟ್ಟೆಯಲ್ಲೆ ಹೆಚ್ಚಿನ ಬೇಡಿಕೆ ಹೊಂದಿರುವುದರಿಂದ ಸರಬರಾಜು ಮಾಡಲಾಗುವುದು. ಒಣ ಹವೆಯಲ್ಲಿ ಉತ್ತಮ ಫಸಲು ಬರುವ ಈ ಬೆಳೆಯನ್ನು ಇಲ್ಲಿನ ರೈತರು ಬೆಳೆಯಲು ಮುಂದಾಗಬೇಕು ಎನ್ನುತ್ತಾರೆ ರೈತ ಶ್ರೀನಿವಾಸ್.

ರೈತರು ಕಡಿಮೆ ಔಷಧಿ ಮತ್ತು ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭದಾಯಕ ಡ್ರ್ಯಾಗನ್ ಫ್ರೂಟ್ ಬೆಳೆಯಲು ಮುಂದಾಗಬೇಕು. ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆ ಅಡಿ ಸಹಕಾರ ನೀಡಿದ್ದು, ತಾಲ್ಲೂಕಿನ ರೈತರು ಇಂತಹ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಪಡೆಯುವ ಬೆಳೆ ಬೆಳೆಯಲು ಮುಂದಾಗಬೇಕು ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿ ವಿನಯ್ ಕುಮಾರ್.


ಮಾಲೂರು ತಾಲ್ಲೂಕಿನ ಕುಪ್ಪೂರು ಗ್ರಾಮದ ರೈತ ಶ್ರೀ ನಿವಾಸ್ ತಮ್ಮ ಕೃಷಿ ಭೂಮಿಯಲ್ಲಿ ಬೆಳೆದ ಡ್ಯ್ರಾಗನ್ ಪ್ರೂಟ್ ಗಳನ್ನು ಬಿಡಿಸಿ ಮಾರುಕಟ್ಟೆಗೆ ಹಾಕುತ್ತಿರುವುದು
ಮಾಲೂರು ತಾಲ್ಲೂಕಿನ ಕುಪ್ಪೂರು ಗ್ರಾಮದ ರೈತ ಶ್ರೀ ನಿವಾಸ್ ತಮ್ಮ ಕೃಷಿ ಭೂಮಿಯಲ್ಲಿ ಬೆಳೆದ ಡ್ಯ್ರಾಗನ್ ಪ್ರೂಟ್ ಗಳನ್ನು ಬಿಡಿಸಿ ಮಾರುಕಟ್ಟೆಗೆ ಹಾಕುತ್ತಿರುವುದು
ಡ್ಯ್ರಾಗನ್ ಪ್ರೂಟ್
ಡ್ಯ್ರಾಗನ್ ಪ್ರೂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT