ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ರಿಯಲ್‌ ಎಸ್ಟೇಟ್‌ ದಂಧೆಕೋರರ ಓಡಿಸಿ: ಶಾಸಕ ಕೆ.ಆರ್‌. ರಮೇಶ್‌ಕುಮಾರ್‌

ಹೊಳಲಿಯಲ್ಲಿ ಅಧಿಕಾರಿಗಳಿಗೆ ಶಾಸಕ ರಮೇಶ್‌ಕುಮಾರ್‌ ಸೂಚನೆ
Last Updated 26 ಜೂನ್ 2020, 17:38 IST
ಅಕ್ಷರ ಗಾತ್ರ

ಕೋಲಾರ: ‘ತಾಲ್ಲೂಕಿನ ಹೊಳಲಿ ಗ್ರಾಮದ ಸರ್ವೆ ನಂಬರ್‌ 103ರಲ್ಲಿ ಕೋಚಿಮುಲ್‌, ಕ್ರಿಕೆಟ್ ಕ್ರೀಡಾಂಗಣ ಹಾಗೂ ವಸತಿ ಶಾಲೆಗೆ ಜಮೀನು ಮಂಜೂರಾಗಿದೆ. ಈ ಜಮೀನಿನ ಸರ್ವೆ ಮಾಡಿ ರೈತರಿಗೆ ತೊಂದರೆಯಾಗದಂತೆ ಒತ್ತುವರಿ ತೆರವುಗೊಳಿಸಿ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಹೊಳಲಿ ಗ್ರಾಮದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕೋಚಿಮುಲ್‌ಗೆ 50 ಎಕರೆ, ಕ್ರಿಕೆಟ್ ಕ್ರೀಡಾಂಗಣಕ್ಕೆ 16 ಎಕರೆ ಮತ್ತು ವಸತಿ ಶಾಲೆಗೆ 10 ಎಕರೆ ಮಂಜೂರಾಗಿದೆ’ ಎಂದು ವಿವರಿಸಿದರು.

‘ರೈತರು ಜಮೀನು ಒತ್ತುವರಿ ಮಾಡಿಕೊಂಡು ಕೃಷಿ ಮಾಡಿಕೊಂಡು ಬಂದಿದ್ದಾರೆ. ಇದೀಗ ಕೋಚಿಮುಲ್‌, ಕ್ರಿಕೆಟ್‌ ಕ್ರೀಡಾಂಗಣ ಮತ್ತು ವಸತಿ ಶಾಲೆಗೆ ಕೂಡಲೇ ಜಮೀನು ನೀಡಬೇಕಿದೆ. ರೈತರನ್ನು ಹಾಳು ಮಾಡಿದರೆ ಅಥವಾ ಅವರ ಬೆಳೆ ನಾಶಪಡಿಸಿದರೆ ನಮಗೆ ನಿದ್ದೆ ಬರುವುದಿಲ್ಲ. ಬೆಳೆ ಕಟಾವು ಆಗುವವರೆಗೆ ಅವಕಾಶ ನೀಡಿ. ಬಳಿಕ ವಿನಯದಿಂದ ಹೇಳಿ ಒತ್ತುವರಿ ತೆರವುಗೊಳಿಸಿ’ ಎಂದರು.

‘ಜಮೀನು ಎಂದರೆ ರಾಜಕಾರಣಿಗಳ ನಾಲಿಗೆ ಜಾಸ್ತಿ ಬೆಳೆಯುತ್ತದೆ. ಅದಾದ ಬಳಿಕ ಅಧಿಕಾರಿಗಳು, ವ್ಯಾಪಾರಸ್ಥರ ಜಾಲವೇ ಕಾಣಿಸುತ್ತದೆ. ಸೂಕ್ತ ದಾಖಲೆಪತ್ರವಿಲ್ಲದೆ, ಕೃಷಿ ಮಾಡದೆ ಬೆಂಗಳೂರಿನಲ್ಲಿ ಇದ್ದುಕೊಂಡು ಜಮೀನು ಒತ್ತುವರಿ ಮಾಡಿ ದರ್ಪ ತೋರುವ ರಿಯಲ್‌ ಎಸ್ಟೇಟ್‌ ದಂಧೆಕೋರರನ್ನು ಹತ್ತಿರಕ್ಕೂ ಸೇರಿಸಬೇಡಿ. ಅವರ ಮೇಲೆ ಲಾಠಿ ಪ್ರಹಾರ ಮಾಡಿ, ಇಲ್ಲಿಂದ ಓಡಿಸಿ’ ಎಂದು ಗುಡುಗಿದರು.

2ನೇ ಸ್ಥಾನ: ‘ಡಿ.ಕೆ.ರವಿ ಅವರು ಜಿಲ್ಲಾಧಿಕಾರಿ ಆಗಿದ್ದಾಗ ಕೋಚಿಮುಲ್‌ಗೆ ಜಮೀನು ನೀಡುವಂತೆ ಪ್ರಸ್ತಾವ ಸಲ್ಲಿಸಿದ್ದೆವು. ಆಗ ಅವರು  50 ಎಕರೆ ಜಮೀನು ಮಂಜೂರು ಮಾಡಿದ್ದರು. ಜಿಲ್ಲೆಯಲ್ಲಿ ನೀರು ಇಲ್ಲದಿದ್ದರೂ ಹಾಲು ಉತ್ಪಾದನೆಯಲ್ಲಿ ಜಿಲ್ಲೆಯು 2ನೇ ಸ್ಥಾನದಲ್ಲಿದೆ’ ಎಂದು ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.

‘ಎಂವಿಕೆ ಗೋಲ್ಡನ್ ಡೇರಿ ವಿಚಾರವಾಗಿ ತಡೆಯಾಜ್ಞೆ ಇರುವುದರಿಂದ ಕಾಮಗಾರಿ ತಡವಾಗಿದೆ. ಸದ್ಯದಲ್ಲೇ ಎಲ್ಲವೂ ಇತ್ಯರ್ಥಗೊಂಡು ಕಾಮಗಾರಿ ಆರಂಭಿಸಲಾಗುವುದು. ಹೊಳಲಿ ಗ್ರಾಮದ ಡೇರಿ ಕಟ್ಟಡಕ್ಕೆ ₹ 35 ಲಕ್ಷ ಅನುದಾನ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

ಬಡಾವಣೆ ನಿರ್ಮಾಣ: ‘ಡೇರಿಗೆ 36 ಎಕರೆ ಎಂಬುದನ್ನು ಕೈಬಿಟ್ಟು 50 ಎಕರೆ ಸ್ಪಷ್ಟವಾಗಿ ನೀಡಬೇಕು. ಕ್ರೀಡಾಂಗಣ, ವಸತಿ ಶಾಲೆ ಜತೆಗೆ 50 ಎಕರೆಯನ್ನು ಪ್ರತ್ಯೇಕವಾಗಿ ನೀಡಿದರೆ ಈ ಭಾಗದ ನಿವೇಶನರಹಿತರಿಗೆ ಹೊಸ ಬಡಾವಣೆ ನಿರ್ಮಿಸಲು ಸಾಧ್ಯವಾಗುತ್ತದೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಲಹೆ ನೀಡಿದರು.

‘ಕೋಚಿಮುಲ್‌ಗೆ ನೀಡಿರುವ 50 ಎಕರೆ ಜಮೀನಿನಲ್ಲಿ ಪ್ರಾತ್ಯಕ್ಷಿಕೆ ಕೇಂದ್ರ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ನಡೆಸುತ್ತೇವೆ. ಈ ಜಮೀನಿನ ಪಕ್ಕದಲ್ಲೇ ಕೆ.ಸಿ ವ್ಯಾಲಿ ನೀರು ಹರಿಯಲಿದ್ದು, ಕೋಚಿಮುಲ್‌ಗೆ ಅಗತ್ಯವಿರುವ ನೀರು ಖರೀದಿಗಾಗಿ ಪ್ರತಿ ತಿಂಗಳು ₹ 15 ಲಕ್ಷ ವೆಚ್ಚವಾಗುತ್ತಿದೆ. ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದರೆ ಈ ಹಣ ಉಳಿತಾಯವಾಗುತ್ತದೆ’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಹೇಳಿದರು.

ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯ ನಜೀರ್ ಅಹಮ್ಮದ್‌, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಆರ್.ಶೋಭಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT