ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಆಗ ಶೇ 44; ಈ ಬಾರಿ ಶೇ 11 ಬಿತ್ತನೆ!

Published 3 ಆಗಸ್ಟ್ 2023, 6:50 IST
Last Updated 3 ಆಗಸ್ಟ್ 2023, 6:50 IST
ಅಕ್ಷರ ಗಾತ್ರ

ಕೆ.ಓಂಕಾರ ಮೂರ್ತಿ

ಕೋಲಾರ: ಮಳೆ ಕೊರತೆ ಕಾರಣ ಜಿಲ್ಲೆಯ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದು, ಬಿತ್ತನೆಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ.

ಕಳೆದ ವರ್ಷ ಇದೇ ಸಮಯಕ್ಕೆ 35,833 ಹೆಕ್ಟೇರ್‌ನಲ್ಲಿ ಬಿತ್ತನೆ ಮೂಲಕ ಶೇ 44 ಸಾಧನೆ ಮಾಡಲಾಗಿತ್ತು. ಆದರೆ, ಈ ಬಾರಿ 11,728 ಹೆಕ್ಟೇರ್‌ನಲ್ಲಿ ಬಿತ್ತನೆ ಮೂಲಕ ಶೇ 11.43 ಸಾಧನೆ ಆಗಿದ್ದು, ದೊಡ್ಡ ಹಿನ್ನಡೆ ಉಂಟಾಗಿದೆ.

ಆರು ತಾಲ್ಲೂಕುಗಳಿಂದ ಸೇರಿ ಜಿಲ್ಲೆಯಲ್ಲಿ ಈ ವರ್ಷ 1,02,590 ಹೆಕ್ಟೇರ್‌ ಕೃಷಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಜಿಲ್ಲೆಯಲ್ಲಿ ಜುಲೈನಲ್ಲಿ ಮಳೆ ಕೊರತೆಯಿಂದ ಬಿತ್ತನೆಗೆ ಹಿನ್ನಡೆಯಾಗಿದೆ. ಈಗ ಬಿದ್ದಿರುವ ಮಳೆ ಸಾಕಾಗುತ್ತಿಲ್ಲ. ಇನ್ನೂ ಮಳೆ ನಿರೀಕ್ಷೆಯಲ್ಲಿ ಇದ್ದೇವೆ.
ವಿ.ಡಿ.ರೂಪಾದೇವಿ , ಜಂಟಿ ಕೃಷಿ ನಿರ್ದೇಶಕಿ ಕೋಲಾರ

ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆ ಕಂಡಿದ್ದ ಜಿಲ್ಲೆಯಲ್ಲಿ ಈ ಬಾರಿ ಜುಲೈ ತಿಂಗಳಿನಲ್ಲಿ ಶೇ 26ರಷ್ಟು ಮಳೆ ಕೊರತೆ ಉಂಟಾಗಿದೆ. ಬಿತ್ತನೆಯಲ್ಲಿ ಹಿನ್ನಡೆಗೆ ಈ ಕೊರತೆಯೇ ಪ್ರಮುಖ ಕಾರಣ. ಜುಲೈ ಕೊನೆಯ ವಾರ ಒಂದೆರಡು ದಿನ ಮಳೆ ಆಗುತ್ತಿದ್ದಂತೆ ರೈತರು ನೆಲ ಹದ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ, ನೆಲ ತೇವ ಮಾಡಿಕೊಳ್ಳಲು ಆ ಮಳೆಯ ಪ್ರಮಾಣ ಸಾಕಾಗಲಿಲ್ಲ. ಅಷ್ಟರಲ್ಲಿ ಬಹುತೇಕ ಬೆಳೆಗಳ ಬೀಜದ ಬಿತ್ತನೆ ಕಾಲಾವಧಿಯೂ ಮುಗಿದು ಹೋಗಿದೆ.

‘ಬಿತ್ತನೆ ಸಮಯದಲ್ಲಿಯೇ ಮಳೆ ಕೈಕೊಟ್ಟಿದೆ. ರಾಗಿ ಬಿತ್ತನೆಗೆ ಇನ್ನೂ ಕಾಲಾವಕಾಶ ಇದೆ. ಆದರೆ, ಉಳಿದ ಬೆಳೆಗಳ ಬೀಜ ಬಿತ್ತನೆಗೆ ಸಮಯ ಮೀರಿದೆ. ಈ ತಿಂಗಳಲ್ಲಿ ಬೀಳುವ ಮಳೆ ಮೇಲೆ ಎಲ್ಲವೂ ಅವಲಂಬಿತವಾಗಿದೆ’ ಎಂದು ಕೃಷಿ ಜಂಟಿ ನಿರ್ದೇಶಕಿ ವಿ.ಡಿ.ರೂಪಾದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಲಾರ | ಆಗ ಶೇ 44; ಈ ಬಾರಿ ಶೇ 11 ಬಿತ್ತನೆ!

ಜಿಲ್ಲೆಯಲ್ಲಿ ರಾಗಿ ಬಿತ್ತನೆ ಗುರಿಯೇ 68,400 ಹೆಕ್ಟೇರ್‌ ಪ್ರದೇಶವಿದೆ. ಈವರೆಗೆ ಕೇವಲ 6,273 ಹೆಕ್ಟೇರ್‌ ಬಿತ್ತನೆಯಾಗಿದೆ. ಇದು ಆತಂಕ ತಂದೊಡ್ಡಿದೆ. ಏಕೆಂದರೆ ಜಿಲ್ಲೆಯ ಏಕದಳ ಧಾನ್ಯಗಳಲ್ಲಿ ರಾಗಿ ಪ್ರಧಾನ ಆಹಾರ ಧಾನ್ಯ. ರಾಗಿ, ಅವರೆ ಬಿತ್ತನೆಗೆ ಈ ತಿಂಗಳ ಮೂರನೇ ವಾರದವರೆಗೆ ಸಮಯ ಇದೆ.

ತೊಗರಿ, ಅಲಸಂದೆ, ನೆಲಗಡಲೆ ಬಿತ್ತನೆಯೂ ತೀರ ಕಡಿಮೆ ಆಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಆಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಮಳೆ ಕೊರತೆಯಿಂದ ಬಿತ್ತನೆ ಕಡಿಮೆ ಆಗಿದ್ದು, ಮುಂದಿನ ದಿನಗಳಲ್ಲಿ ರಾಗಿ ಸೇರಿದಂತೆ ವಿವಿಧ ಆಹಾರ ‌ಧಾನ್ಯಗಳ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಲಿದೆ’ ಎಂದು ತೊಟ್ಲಿ ಗ್ರಾಮಸ್ಥ ಟಿ.ವಿ.ರಮೇಶ್‌ ತಿಳಿಸಿದ್ದಾರೆ.

ಜುಲೈನಲ್ಲಿ ಶೇ 26ರಷ್ಟು ಮಳೆ ಕೊರತೆ

ಜಿಲ್ಲೆಯಲ್ಲಿ ಈ ವರ್ಷ ಜುಲೈನಲ್ಲಿ ಶೇ 26ರಷ್ಟು ಮಳೆ ಕೊರತೆ ಉಂಟಾಗಿದೆ. 7.9 ಸೆ.ಮೀ ವಾಡಿಕೆ ಮಳೆ ಆಗಿಬೇಕಿತ್ತು. ಆದರೆ 5.8 ಸೆ.ಮೀ.ಮಳೆ ಆಗಿದೆ. ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ಅಂದರೆ ಜನವರಿ 1ರಿಂದ ಮೇ 31ರವರೆಗೆ 21.3 ಸೆ.ಮೀ. ಮಳೆ ಆಗಿದೆ. ಈ ಸಂದರ್ಭದ ವಾಡಿಕೆ ಮಳೆ 11.7 ಸೆ.ಮೀ. ಶೇ 82ರಷ್ಟು ಅಧಿಕವಾಗಿದೆ. ಆದರೆ ಜೂನ್‌ 1ರಿಂದ ಆಗಸ್ಟ್‌ 2ರವರೆಗೆ ಶೇ 27ರಷ್ಟು ಕೊರತೆ ಆಗಿದೆ. ಈ ಅವಧಿಯಲ್ಲಿ 16 ಸೆ.ಮೀ ಮಳೆ ಆಗಬೇಕಿತ್ತು. ಬಂದಿದ್ದು ಕೇವಲ 11.7 ಸೆ.ಮೀ. ಹಾಗೇ ನೋಡಿದರೆ ಜ.1ರಿಂದ ಆಗಸ್ಟ್‌ವರೆಗೆ 35.9 ಸೆ.ಮೀ. ಮಳೆಯಾಗಿದೆ. ಈ ಅವಧಿಯ ವಾಡಿಕೆ ಮಳೆ 27.1 ಸೆ.ಮೀ. ಶೇ 32ರಷ್ಟು ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 73.5 ಸೆ.ಮೀ. 2022ರಲ್ಲಿ 125 ಸೆ.ಮೀ ಮಳೆ ಆಗಿತ್ತು. ಆ ವರ್ಷ ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗೆ 64.9 ಸೆ.ಮೀ ಮಳೆ ಆಗಿತ್ತು. 2021ರಲ್ಲಿ ಸಾರ್ವಕಾಲಿಕ ದಾಖಲೆಯ (131.6 ಸೆ.ಮೀ) ಮಳೆ ಆಗಿತ್ತು.

ಮಾಲೂರು; ಕೇವಲ ಶೇ 2 ಬಿತ್ತನೆ

ಇಡೀ ಜಿಲ್ಲೆಯಲ್ಲಿ ಕಡಿಮೆ ಬಿತ್ತನೆಯಾಗಿರುವುದು ಮಾಲೂರು ತಾಲ್ಲೂಕಿನಲ್ಲಿ. ಶೇ 2.05 ಬಿತ್ತನೆ ಮಾಡಲಾಗಿದೆ. 16090 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದು 330 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ. ನಂತರದ ಸ್ಥಾನದಲ್ಲಿ ಶ್ರೀನಿವಾಸಪುರ ತಾಲ್ಲೂಕು ಇದ್ದು ಕೇವಲ ಶೇ 2.33 ಬಿತ್ತನೆ ಆಗಿದೆ. ಉಳಿದ ತಾಲ್ಲೂಕುಗಳಿಗ ಹೋಲಿಸಿದರೆ ಕೆಜಿಎಫ್‌ ತಾಲ್ಲೂಕಿನಲ್ಲಿ (ಶೇ 21.78) ಹೆಚ್ಚು ಬಿತ್ತನೆಯಾಗಿದೆ. ಎರಡನೇ ಸ್ಥಾನದಲ್ಲಿ ಕೋಲಾರ (21.15) ತಾಲ್ಲೂಕು ಇದೆ.

ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದ ಸಮೀಪ ರೈತ ವೆಂಕಟೇಶಪ್ಪ ರಾಗಿ ಬಿತ್ತನೆ ಮಾಡಿದ್ದು ಮೊಳಕೆ ಬರುವ ಅವಧಿಯಲ್ಲಿ ಮಳೆ ಕೈಕೊಟ್ಟಿದೆ. ಹೀಗಾಗಿ ಸಂಪ್ರದಾಯದಂತೆ ಮೊಳಕೆ ಬರಿಸಲು ಕುರಿಗಳನ್ನು ಹೊಲದಲ್ಲಿ ಬಿಟ್ಟು ಓಡಾಡಿಸಿದರು
ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದ ಸಮೀಪ ರೈತ ವೆಂಕಟೇಶಪ್ಪ ರಾಗಿ ಬಿತ್ತನೆ ಮಾಡಿದ್ದು ಮೊಳಕೆ ಬರುವ ಅವಧಿಯಲ್ಲಿ ಮಳೆ ಕೈಕೊಟ್ಟಿದೆ. ಹೀಗಾಗಿ ಸಂಪ್ರದಾಯದಂತೆ ಮೊಳಕೆ ಬರಿಸಲು ಕುರಿಗಳನ್ನು ಹೊಲದಲ್ಲಿ ಬಿಟ್ಟು ಓಡಾಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT