ಮಂಗಳವಾರ, ಮಾರ್ಚ್ 9, 2021
31 °C

ಕರ್ತವ್ಯ ಲೋಪ: ಬಿಇಒ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಿಯಮಬಾಹಿರವಾಗಿ ಶಿಕ್ಷಕರ ನಿಯೋಜನೆ ಮಾಡಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ಅವರನ್ನು ಅಮಾನತುಗೊಳಿಸಿ ಸಾರ್ವಜನಿಕರ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಡಿ.ನಾಗೇಂದ್ರ ಆದೇಶ ಹೊರಡಿಸಿದ್ದಾರೆ.

ರಘುನಾಥರೆಡ್ಡಿ ಅವರ ವಿರುದ್ಧ ಸಲ್ಲಿಕೆಯಾಗಿದ್ದ ದೂರಿನ ಸಂಬಂಧ ನಾಗೇಂದ್ರ ಅವರು ಇತ್ತೀಚೆಗೆ ವಿಚಾರಣೆ ನಡೆಸಿದ್ದರು. ಆಗ ರಘುನಾಥರೆಡ್ಡಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರನ್ನು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ನಿಯಮಬಾಹಿರವಾಗಿ ನಿಯೋಜಿಸಿರುವುದು, ನಗರ ಹಾಗೂ ಹೊರವಲಯದ ಶಾಲೆಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರನ್ನು ನಿಯೋಜಿಸಿರುವುದು, ನಿಯೋಜನೆ ಪೂರ್ವದಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಅನುಪಾತವನ್ನು ಪರಿಗಣಿಸದೆ ಲೋಪ ಎಸಗಿರುವುದು ತನಿಖೆಯಲ್ಲಿ ಗೊತ್ತಾಗಿತ್ತು.

ರಘುನಾಥರೆಡ್ಡಿ ಅವರು ಒಬ್ಬ ಶಿಕ್ಷಕರ ನಿಯೋಜನೆ ಮಾಹಿತಿಯನ್ನು ಮಾತ್ರ ಕಡತದಲ್ಲಿ ದಾಖಲಿಸಿ ಉಳಿದ 24 ಶಿಕ್ಷಕರ ನಿಯೋಜನೆಯನ್ನು ಕಡತದಲ್ಲಿ ಅನುಮೋದಿಸಿಯೂ ನಿಯೋಜಿಸಿಲ್ಲ. ಕಚೇರಿ ಕಡತದಲ್ಲಿ ಮಾಹಿತಿ ನಮೂದಿಸದೆ ನಿಯೋಜನೆ ಮಾಡಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದ ಸಂಗತಿ ತನಿಖೆ ವೇಳೆ ಬಯಲಾಗಿತ್ತು.

ಇಲಾಖಾ ಮಾರ್ಗಸೂಚಿ ಅನ್ವಯ ಶಿಕ್ಷಕರ ನಿಯೋಜನೆ ಮತ್ತು ಪ್ರತಿ ನಿಯೋಜನೆ ಮಾಡಲು ಅವಕಾಶ ಇಲ್ಲದಿದ್ದರೂ ರಘುನಾಥರೆಡ್ಡಿ ಅವರು ನಿಯಮಬಾಹಿರವಾಗಿ ನಿಯೋಜಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರು ಬಿಇಒ ಹುದ್ದೆಯಲ್ಲಿ ಮುಂದುವರಿದರೆ ಅಕ್ರಮಕ್ಕೆ ಸಂಬಂಧಪಟ್ಟ ದಾಖಲೆಪತ್ರ ತಿದ್ದುವ ಅಥವಾ ನಾಶಪಡಿಸುವ ಸಾಧ್ಯತೆ ಇರುವುದರಿಂದ ಅಮಾನತು ಮಾಡಲಾಗಿದೆ. ಜತೆಗೆ ಅವರ ವಿರುದ್ಧ ಇಲಾಖಾ ತನಿಖೆ ನಡೆಸಲಾಗುತ್ತದೆ ಎಂದು ನಾಗೇಂದ್ರ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.