ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನು ಸಾಕಿ ಆದಾಯ ಗಳಿಸಿ

ತರಬೇತಿಯಲ್ಲಿ ರೈತರಿಗೆ ತಾ.ಪಂ ಸದಸ್ಯ ಗೋಪಾಲಗೌಡ ಸಲಹೆ
Last Updated 18 ಡಿಸೆಂಬರ್ 2019, 15:31 IST
ಅಕ್ಷರ ಗಾತ್ರ

ಕೋಲಾರ: ‘ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ಸಿಗದ ಕಾರಣ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಾಲಗೌಡ ಕಳವಳ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆಯು ಮಧುವನ ಮತ್ತು ಜೇನು ಕೃಷಿ ಅಭಿವೃದ್ಧಿ ಯೋಜನೆಯಡಿ ತಾಲ್ಲೂಕಿನ ತೊಂಡಾಲ ಗ್ರಾಮದ ರೈತ ವಿನಯ್ ಅವರ ಜಮೀನಿನಲ್ಲಿ ಬುಧವಾರ ರೈತರಿಗೆ ಹಮ್ಮಿಕೊಂಡಿದ್ದ ಜೇನು ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ರೈತರು ಕೃಷಿ ಅಥವಾ ತೋಟಗಾರಿಕೆ ಬೆಳೆಗಳ ಜತೆಗೆ ಆರ್ಥಿಕಾಭಿವೃದ್ಧಿಗೆ ಪೂರಕವಾದ ಜೇನು ಸಾಕಣೆ, ಹೈನುಗಾರಿಕೆ, ಕುರಿ ಸಾಕಣೆಯಂತಹ ಚಟುವಟಿಕೆ ನಡೆಸಬೇಕು. ದುಂದು ವೆಚ್ಚದ ಬೆಳೆ ಬೆಳೆದು ನಷ್ಟ ಅನುಭವಿಸುವ ಬದಲು ಕಾಲಾವರಿಗೆ ತಕ್ಕ ಬೆಳೆಗಳನ್ನು ಬೆಳೆಯಬೇಕು’ ಎಂದು ಕಿವಿಮಾತು ಹೇಳಿದರು.

‘ರೈತರು ಆರ್ಥಿಕ ಲಾಭದ ದೃಷ್ಟಿಯಿಂದ ಟೊಮೆಟೊ, ಪಪ್ಪಾಯ, ಆಲೂಗಡ್ಡೆ ಬೆಳೆದು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ನೀರಿನ ಅಭಾವದಿಂದ ಜಿಲ್ಲೆಯಲ್ಲಿ ತೋಟಗಾರಿಕೆ, ಕೃಷಿ ಚಟುವಟಿಕೆ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮನೆಯಂಗಳ ಹಾಗೂ ತೋಟದಲ್ಲಿ ಜೇನು ಸಾಕಾಣಿಕೆ ಮಾಡಿ ಆದಾಯ ಗಳಿಸಬಹುದು’ ಎಂದು ಸಲಹೆ ನೀಡಿದರು.

‘ಕಡಿಮೆ ವೆಚ್ಚದ ಆಧುನಿಕ ಸಲಕರಣೆ ಬಳಕೆಯಿಂದ ಜೇನು ಸಾಕಣೆ ಆರಂಭಿಸಿ ಹೆಚ್ಚು ಲಾಭ ಗಳಿಸುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು. ಇಲಾಖೆ ಅಧಿಕಾರಿಗಳು ಸಹ ಕಾಲಕ್ಕೆ ತಕ್ಕಂತೆ ಬೆಳೆಯಬಹುದಾದ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಯುವ ರೈತರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು’ ಎಂದು ಮನವಿ ಮಾಡಿದರು.

ಮಳೆ ಅಡ್ಡಿ: ‘ಗ್ರಾಮದ ಸುತ್ತ ಅರಣ್ಯ ಪ್ರದೇಶವಿದ್ದು, ಜೇನು ಹುಳು ಸಂಗ್ರಹಿಸಿಕೊಂಡು ಸಾಕುತ್ತಿದ್ದೇನೆ. ರೈತರು ಜೇನು ಹುಳು ಸಮೇತ ಪೆಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಪೂರಕ ವಾತಾವರಣದಲ್ಲಿ ಮಾತ್ರ ಜೇನು ಸಾಕಣೆ ಸಾಧ್ಯ’ ಎಂದು ಜೇನು ಕೃಷಿಕ ವಿನಯ್ ಮಾಹಿತಿ ನೀಡಿದರು.

‘ಜೇನು ಸಾಕಣೆ ಜತೆಗೆ ಜಮೀನಿನಲ್ಲಿ ಹೆಬ್ಬೇವು, ನಿಂಬೆ, ಹಿಪ್ಪುನೇರಳೆ, ಜಮ್ಮು ನೇರಳೆ ಬೆಳೆದಿದ್ದು, ಇಳುವರಿ ಚೆನ್ನಾಗಿದೆ. ಮಳೆಗಾಲದಲ್ಲಿ 4 ತಿಂಗಳು ಜೇನು ಕುಟುಂಬಗಳ ನಿರ್ವಹಣೆ ಕಷ್ಟ. ಸಸ್ಯಗಳಲ್ಲಿ ಹೆಚ್ಚಾಗಿ ಹೂವು ಇರುವುದಿಲ್ಲ. ಪರಾಗ ಮತ್ತು ಮಕರಂದ ಸಂಗ್ರಹಣೆಗೆ ಮಳೆ ಅಡ್ಡಿಯಾಗುತ್ತದೆ’ ಎಂದು ವಿವರಿಸಿದರು.

‘ನವೆಂಬರ್‌ ತಿಂಗಳಿಂದ ಫೆಬ್ರುವರಿವರೆಗೆ ಜೇನು ನೊಣಗಳ ವಂಶಾಭಿವೃದ್ಧಿ ಹೆಚ್ಚಾಗುತ್ತದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಹೆಚ್ಚು ಇಳುವರಿ ಪಡೆಯಬಹುದು. ಈ ಭಾಗದಲ್ಲಿ ಹೆಚ್ಚಾಗಿ ಹೆಜ್ಜೇನು, ಕೋಲು ಜೇನು, ಮುಜಂಟಿ ಜೇನು, ತುಡುವೆ ಜೇನು ಮತ್ತು ಯೂರೋಪಿಯನ್ ಜೇನು ಸಾಕಬಹುದು' ಎಂದು ಹೇಳಿದರು.

ರೋಗ ನಿವಾರಣೆ: ‘ಜೇನು ತುಪ್ಪ ಸೇವಿಸುವುದರಿಂದ ಅನೇಕ ರೋಗ ನಿವಾರಣೆ ಆಗುತ್ತವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಕರ್ಯ ಪಡೆದು ಜೇನು ಸಾಕಣೆ ಮಾಡಬೇಕು’ ಎಂದು ಸಂಪನ್ಮೂಲ ವ್ಯಕ್ತಿ ನಟರಾಜ್‌ ತಿಳಿಸಿದರು.

ಐತರಾಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಷಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಿ.ಮಂಜುಳಾ, ಅಧಿಕಾರಿಗಳಾದ ಎಚ್.ಮಂಜುನಾಥ್, ನವೀನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT