ಜಿಲ್ಲೆಯಲ್ಲಿ ವಿದ್ಯುತ್ ಸೇವೆ ವ್ಯತ್ಯಯ

ಕೋಲಾರ: ನಗರದ ಹಾರೋಹಳ್ಳಿ ಬಳಿಯಿರುವ ಕೆಪಿಟಿಸಿಎಲ್‌ನ 220 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿನ 100 ಎಂವಿಎ (ಮೆಗಾ ವೋಲ್ಟ್ ಆ್ಯಂಪರ್ಸ್) ಟ್ರಾನ್ಸ್‌ಫಾರ್ಮರ್‌ಗೆ ಶನಿವಾರ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಹೋಗಿದ್ದು, ಇಡೀ ಜಿಲ್ಲೆಯಲ್ಲಿ ಏಳು ತಾಸಿಗೂ ಹೆಚ್ಚು ಕಾಲ ವಿದ್ಯುತ್ ಸೇವೆಯಲ್ಲಿ ವ್ಯತ್ಯಯವಾಯಿತು.
ಈ ಕೇಂದ್ರದಿಂದ ಶ್ರೀನಿವಾಸಪುರ ಹೊರತುಪಡಿಸಿ ಜಿಲ್ಲೆಯ 5 ತಾಲ್ಲೂಕುಗಳಿಗೆ ವಿದ್ಯುತ್ ಪೂರೈಕೆಯಾಗುತ್ತದೆ. ತುಂಬಾ ಹಳೆಯದಾದ 100 ಎಂವಿಎ ಟ್ರಾನ್ಸ್‌ಫಾರ್ಮರ್ ಅನ್ನು ನಿಯಮಿತವಾಗಿ ಸರ್ವಿಸ್ ಮಾಡಲಾಗುತ್ತಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕಿದ್ದ ಕಾರಣ 3 ತಿಂಗಳಿಂದ ಈ ಟ್ರಾನ್ಸ್‌ಫಾರ್ಮರ್ ಅನ್ನು ಸರ್ವಿಸ್ ಮಾಡಿರಲಿಲ್ಲ.
ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾಖ ನಿರೋಧಕವಾಗಿ ಟ್ರಾನ್ಸಿಲಾ ಆಯಿಲ್ ಬಳಸಲಾಗುತ್ತದೆ. ಟ್ರಾನ್ಸ್‌ಫಾರ್ಮರ್ ಸರ್ವಿಸ್ ಮಾಡಿರದ ಕಾರಣ ಶಾಖದ ಪ್ರಮಾಣ ಹೆಚ್ಚಿ ಟ್ರಾನ್ಸಿಲಾ ಆಯಿಲ್‌ಗೆ ಮಧ್ಯಾಹ್ನ 1.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತು. ನಂತರ ಬೆಂಕಿಯ ಜ್ವಾಲೆ ಹೆಚ್ಚಿ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತು.
ಅಕ್ಕಪಕ್ಕದ ಬಡಾವಣೆಗಳ ಜನರು ದಟ್ಟ ಹೊಗೆ ಕಂಡು ಭಯಭೀತರಾಗಿ ವಿದ್ಯುತ್ ಸ್ವೀಕರಣಾ ಕೇಂದ್ರದ ಬಳಿಗೆ ದೌಡಾಯಿಸಿದರು. ಎಂ.ಬಿ ರಸ್ತೆ, ರಾಷ್ಟ್ರೀಯ ಹೆದ್ದಾರಿ 75 ಮತ್ತು ಪಕ್ಕದ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ದಟ್ಟ ಹೊಗೆ ನೋಡಿ ವಾಹನ ನಿಲ್ಲಿಸಿ ಘಟನೆ ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂತು.
ಹೊತ್ತಿ ಉರಿಯುತ್ತಿದ್ದ ಟ್ರಾನ್ಸ್‌ಫಾರ್ಮರ್‌ನ ಪಕ್ಕದಲ್ಲೇ 100 ಎಂವಿಎ ಸಾಮರ್ಥ್ಯದ ಮತ್ತೆರಡು ಟ್ರಾನ್ಸ್‌ಫಾರ್ಮರ್‌ಗಳಿದ್ದು, ಅವುಗಳಿಗೂ ಬೆಂಕಿ ವ್ಯಾಪಿಸುವ ಆತಂಕ ಸೃಷ್ಟಿಯಾಯಿತು. ಅಗ್ನಿ ಅನಾಹುತದ ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ 8 ವಾಹನಗಳಲ್ಲಿ ಸ್ಥಳಕ್ಕೆ ಬಂದು ಸುಮಾರು ನಾಲ್ಕೈದು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದರು.
ವಿದ್ಯುತ್ ಸ್ಥಗಿತ: ಎಂವಿಎ ಟ್ರಾನ್ಸ್‌ಫಾರ್ಮರ್ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಜಿಲ್ಲೆಯಾದ್ಯಂತ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು. ಬಳಿಕ ಬೆಸ್ಕಾಂ ಸಿಬ್ಬಂದಿ ಇತರೆ 2 ಎಂವಿಎ ಟ್ರಾನ್ಸ್‌ಫಾರ್ಮರ್‌ಗಳಿಂದ ವಿದ್ಯುತ್ ಸರಬರಾಜು ಮಾಡಿದರು. ರಾತ್ರಿ 8 ಗಂಟೆ ವೇಳೆಗೆ ಕೋಲಾರ, ಮಾಲೂರು ಮತ್ತು ಕೆಜಿಎಫ್ ತಾಲ್ಲೂಕಿಗೆ ವಿದ್ಯುತ್ ಪೂರೈಕೆಯಾಯಿತು. ಆದರೆ, ಬಂಗಾರಪೇಟೆ ಮತ್ತು ಮುಳಬಾಗಿಲು ತಾಲ್ಲೂಕಿಗೆ ರಾತ್ರಿ 11 ಗಂಟೆ ವೇಳೆಗೆ ವಿದ್ಯುತ್ ಸರಬರಾಜು ಮಾಡಲಾಯಿತು.
₹ 15 ಕೋಟಿ ನಷ್ಟ: ‘ಅಗ್ನಿ ಅನಾಹುತದಲ್ಲಿ ಸುಟ್ಟು ಹೋಗಿರುವ 100 ಎಂವಿಎ ಟ್ರಾನ್ಸ್‌ಫಾರ್ಮರ್ 20 ವರ್ಷದಷ್ಟು ಹಳೆಯದು. ಸುಮಾರು ₹ 15 ಕೋಟಿ ಮೌಲ್ಯದ ಆ ಟ್ರಾನ್ಸ್‌ಫಾರ್ಮರ್‌ನಲ್ಲಿ 40 ಸಾವಿರ ಲೀಟರ್ ಟ್ರಾನ್ಸಿಲಾ ಆಯಿಲ್ ಇತ್ತು. ಬುಷ್ಷಿಂಗ್ ಪ್ಲಾಷ್‌ನಿಂದ ಟ್ರಾನ್ಸ್‌ಫಾರ್ಮರ್‌ನಲ್ಲಿನ ಟ್ರಾನ್ಸಿಲಾ ಆಯಿಲ್‌ಗೆ ಬೆಂಕಿ ಹೊತ್ತಿಕೊಂಡು ಈ ಅನಾಹುತ ಸಂಭವಿಸಿದೆ’ ಎಂದು ಕೆಪಿಟಿಸಿಎಲ್ ಕಾರ್ಯ ನಿರ್ವಾಹಕ ಎಂಜಿನಿಯರ್ ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸುಟ್ಟು ಹೋಗಿರುವ ಟ್ರಾನ್ಸ್‌ಫಾರ್ಮರ್ ಬದಲಿಸಿ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಸುಮಾರು 2 ತಿಂಗಳು ಕಾಲಾವಕಾಶ ಬೇಕು. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗಿರುವುದರಿಂದ ರೈತರು ಪಂಪ್‌ಸೆಟ್ ಬಳಕೆ ಮಾಡುತ್ತಿಲ್ಲ. ಹೀಗಾಗಿ ವಿದ್ಯುತ್ ಬೇಡಿಕೆ ಕುಸಿದಿದ್ದು, ಸದ್ಯಕ್ಕೆ ಸಮಸ್ಯೆಯಿಲ್ಲ. ತಾತ್ಕಾಲಿಕವಾಗಿ ಚಿಂತಾಮಣಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಜಿಲ್ಲೆಗೆ ವಿದ್ಯುತ್ ಪಡೆಯಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.