ಶುಕ್ರವಾರ, ಆಗಸ್ಟ್ 19, 2022
25 °C
ತಾರ್ಕಿಕ ಅಂತ್ಯ ಕಾಣದ ಸಮಸ್ಯೆ: ಶಾಶ್ವತ ಪರಿಹಾರದ ಕೂಗು ಅರಣ್ಯರೋದನ

ಕೋಲಾರ: ಅನ್ನದಾತರ ನಿದ್ದೆಗೆಡಿಸಿದ ಕಾಡಾನೆ ಉಪಟಳ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದ್ದು, ಗಡಿಯಂಚಿನ ಗ್ರಾಮಗಳ ರೈತರು ಸದಾ ಗಜರಾಜನ ಭಯದಲ್ಲೇ ಬದುಕು ದೂಡುವಂತಾಗಿದೆ.

ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿರುವ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಕಾಡಾನೆಗಳ ರೈತರ ನಿದ್ದೆಗೆಡಿಸಿದ್ದು, ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.

ತಮಿಳುನಾಡಿನ ಕೃಷ್ಣಗಿರಿ, ವ್ಯಾಪನಪಲ್ಲಿ ಮತ್ತು ಆಂಧ್ರಪ್ರದೇಶದ ಕುಪ್ಪಂ, ಗುಡುಪಲ್ಲಿ, ಬಿಸಾನತ್ತಂ ಹಾಗೂ ವಿ.ಕೋಟಾ ಅರಣ್ಯ ಪ್ರದೇಶಕ್ಕೆ ಹತ್ತಿರದಲ್ಲಿರುವ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಕಾಡಾನೆಗಳ ಆಟಾಟೋಪ ಮೇರೆ ಮೀರಿದೆ. ಮುಖ್ಯವಾಗಿ ಕೃಷ್ಣಗಿರಿ ಅರಣ್ಯದಿಂದ ಮಾಲೂರು ಮತ್ತು ಬಂಗಾರಪೇಟೆ ತಾಲ್ಲೂಕಿನ ಗಡಿ ಗ್ರಾಮಗಳಿಗೆ ಲಗ್ಗೆಯಿಡುವ ಆನೆಗಳು ಬೆಳೆ ನಾಶ ಪಡಿಸುವುದರ ಜತೆಗೆ ಜನರ ಪ್ರಾಣಕ್ಕೂ ಕಂಟಕವಾಗುತ್ತಿವೆ.

ಜಿಲ್ಲೆಯಲ್ಲಿ ಸುಮಾರು 42 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶವಿದ್ದು, ಈ ಪೈಕಿ 7,850 ಹೆಕ್ಟೇರ್‌ ಪ್ರದೇಶದಲ್ಲಿ ಆನೆಗಳ ಓಡಾಟ ಹೆಚ್ಚಿನ ಪ್ರಮಾಣದಲ್ಲಿದೆ. ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ, ಬೂದಿಕೋಟೆ, ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಮಾಲೂರು ತಾಲ್ಲೂಕಿನ ದಿನ್ನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳು ಕಾಡಾನೆ ಹಾವಳಿಯಿಂದ ತತ್ತರಿಸಿವೆ.

ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಆಹಾರ ಮತ್ತು ನೀರು ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಹೀಗಾಗಿ ಆಹಾರ ಮತ್ತು ನೀರು ಅರಸಿ ಜಿಲ್ಲೆಯತ್ತ ವಲಸೆ ಬರುವ ಆನೆಗಳು ನಡೆದದ್ದೇ ಹಾದಿ ಎಂಬಂತಾಗಿದೆ. ತಿಂಗಳುಗಟ್ಟಲೇ ಗಡಿಯಂಚಿನ ಗ್ರಾಮಗಳಲ್ಲಿ ಬೀಡು ಬಿಡುವ ಆನೆಗಳು ರೈತರ ಜತೆಗೆ ಅರಣ್ಯ ಇಲಾಖೆ ಸಿಬ್ಬಂದಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿವೆ.

ಸಿಬ್ಬಂದಿಯು ಆನೆಗಳನ್ನು ಕೃಷ್ಣಗಿರಿ ಅರಣ್ಯದತ್ತ ಓಡಿಸಿ ನಾಲ್ಕೈದು ದಿನ ಕಳೆಯುವಷ್ಟರಲ್ಲಿ ಮತ್ತೆ ಆನೆಗಳ ಹಿಂಡು ಜಿಲ್ಲೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದು, ಸಮಸ್ಯೆಗೆ ತಾರ್ಕಿಕ ಅಂತ್ಯ ಇಲ್ಲವಾಗಿದೆ. ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ರೂಪಿಸಬೇಕೆಂಬ ಜನರ ಕೂಗು ಅರಣ್ಯರೋದನವಾಗಿದೆ.

ದಶಕದ ಹೋರಾಟ: ಆನೆ ದಾಳಿ ಹೆಚ್ಚಿರುವ ಭಾಗದಲ್ಲಿ ಸೋಲಾರ್‌ ತಂತಿ ಬೇಲಿ ಅಳವಡಿಕೆ, ಕಂದಕ ನಿರ್ಮಾಣ ಅಥವಾ ರೈಲ್ವೆ ಬ್ಯಾರಿಕೇಡ್‌ ಅಳವಡಿಕೆಯಂತಹ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಈ ವಿಚಾರವಾಗಿ ಸಂಘಟನೆಗಳು ಕಳೆದೊಂದು ದಶಕದಿಂದ ಹೋರಾಟ ಮಾಡುತ್ತಿವೆ. ಆದರೆ, ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ.

ಕಾಡಾನೆ ದಾಳಿಯಿಂದ ಬೆಳೆ ನಾಶವಾದಾಗ ಅಥವಾ ಸಾವು ಸಂಭವಿಸಿದಾಗ ಸ್ಥಳಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸುವ ಭರವಸೆ ನೀಡಿ ಜನರ ಕಣ್ಣೊರೆಸುತ್ತಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಮತ್ತೆ ಸಾವು ಸಂಭವಿಸಿದಾಗ ಅಥವಾ ಬೆಳೆ ನಾಶವಾದಾಗ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಕಾಡಾನೆ ದಾಳಿ ನೆನಪಿಗೆ ಬರುತ್ತದೆ.

ನೆಚ್ಚಿನ ತಾಣ: ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ವನ್ಯಜೀವಿ ಧಾಮದಲ್ಲಿ ಬಿದಿರು ಹಾಗೂ ಹಣ್ಣಿನ ಮರಗಳು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಆನೆಗಳು ಕೃಷ್ಣಗಿರಿ ಅರಣ್ಯದಿಂದ ಜಿಲ್ಲೆಯತ್ತ ಬರುತ್ತಿವೆ. ಜತೆಗೆ ಅರಣ್ಯದಂಚಿನ ಗ್ರಾಮಗಳ ಕೃಷಿ ಜಮೀನುಗಳಲ್ಲಿ ಹೆಚ್ಚಾಗಿ ತರಕಾರಿ, ಬಾಳೆ ಬೆಳೆದಿರುವ ಕಾರಣ ಆನೆಗಳಿಗೆ ಆಹಾರದ ಸಮಸ್ಯೆ ಇಲ್ಲವಾಗಿದೆ. ಅಲ್ಲದೇ, ಕೃಷಿ ಹೊಂಡಗಳು ಭರ್ತಿಯಾಗಿರುವುದರಿಂದ ನೀರಿನ ಕೊರತೆ ಇಲ್ಲವಾಗಿದೆ. ಹೀಗಾಗಿ ಆನೆಗಳಿಗೆ ಜಿಲ್ಲೆಯು ನೆಚ್ಚಿನ ತಾಣವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು