ಕುತಂತ್ರ ರಾಜಕಾರಣಕ್ಕೆ ಅಂತ್ಯ ಹಾಡಿ: ಡಾ.ಎಂ.ಸಿ.ಸುಧಾಕರರೆಡ್ಡಿ

ಶುಕ್ರವಾರ, ಏಪ್ರಿಲ್ 19, 2019
27 °C
ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರ ಮತಯಾಚನೆ

ಕುತಂತ್ರ ರಾಜಕಾರಣಕ್ಕೆ ಅಂತ್ಯ ಹಾಡಿ: ಡಾ.ಎಂ.ಸಿ.ಸುಧಾಕರರೆಡ್ಡಿ

Published:
Updated:
Prajavani

ಕೋಲಾರ: ‘ಲೋಕಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕೆ.ಎಚ್.ಮುನಿಯಪ್ಪ ವಿರೋಧಿ ಅಲೆ ಸುನಾಮಿ ರೀತಿ ಎದಿದ್ದು, ಮತದಾರರಲ್ಲಿ ಕಾರ್ಯಕರ್ತರು ಜಾಗೃತಿ ಮೂಡಿಸಬೇಕು’ ಎಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರರೆಡ್ಡಿ ತಿಳಿಸಿದರು.

ನಗರದಲ್ಲಿ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರ ಭಾನುವಾರ ಸಂಜೆ ನಡೆದ ರೋಡ್ ಶೋನಲ್ಲಿ ಮಾತನಾಡಿ, ‘ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧವಾಗಿ, ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರವಾಗಿ ನಾನು, ಕೊತ್ತೂರು ಮಂಜುನಾಥ್ ಇಬ್ಬರೇ ಪ್ರಚಾರಕ್ಕೆ ಬಂದಿಲ್ಲ. ನಮ್ಮಿಬ್ಬರ ಹಿಂದೆ ಅವಿಭಜಿತ ಜಿಲ್ಲೆಯಲ್ಲೇ ದೊಡ್ಡ ಶಕ್ತಿ ಇದೆ’ ಎಂದರು.

‘ಕೆ.ಎಚ್.ಮುನಿಯಪ್ಪ ಕುತಂತ್ರಗಳಿಂದಾಗಿ ನಾನು ಕಳೆದ 2 ಚುನಾವಣೆಗಳಿಂದಲೂ ತೀವ್ರ ವಿರೋಧ ವ್ಯಕ್ತಪಡಿಸಿ, ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಈ ಬಾರಿಯ ಚುನಾವಣೆಯ ಕಾವು ಉತ್ತುಂಗಕ್ಕೆ ಏರಿದ್ದು, ಸತತ 7ಬಾರಿ ಗೆದ್ದಿರುವ ಮುನಿಯಪ್ಪ ಸಾಧನೆ ಏನೆಂಬುದು ಸಣ್ಣ ಬಾಲಕನಿಗೂ ಗೊತ್ತಿದೆ’ ಎಂದು ಹೇಳಿದರು.

‘ಸಂಸದ ಕೆ.ಎಚ್.ಮುನಿಯಪ್ಪ ಒಂದೊಂದು ಚುನಾವಣೆಯಲ್ಲಿಯೂ ತಮ್ಮ ಕುತಂತ್ರದ ಭಾಗವಾಗಿ, ಒಬ್ಬೊಬ್ಬ ನಾಯಕರನ್ನು ಮುಗಿಸಿಕೊಂಡು ಬಂದಿದ್ದಾರೆ. ಕೊತ್ತೂರು ಮಂಜುನಾಥ್‌ರನ್ನೂ ಬಿಡಲಿಲ್ಲ, ಅವರು, ಕೊತ್ತೂರು ಮಾಡಿದ ತಪ್ಪಾದರೂ ಏನು’ ಎಂದು ಪ್ರಶ್ನಿಸಿದರು.

‘ಇದನ್ನೆಲ್ಲಾ ನೋಡಿಕೊಂಡು ಯಾರೂ ಸುಮ್ಮನೆ ಕುಳಿತಿಲ್ಲ. ಕೋಲಾರದಲ್ಲಿ ಶ್ರೀನಿವಾಸಗೌಡರು, ಮಾಲೂರಿನಲ್ಲಿ ಮಂಜುನಾಥಗೌಡರು, ಶ್ರೀನಿವಾಸಪುರ, ಶಿಡ್ಲಘಟ್ಟದಲ್ಲಿನ ಹಿರಿಯ ನಾಯಕರು ಹೀಗೆ ಅವಿಭಜಿತ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ದೊಡ್ಡ ಮಟ್ಟದಲ್ಲಿ ಕೆ.ಎಚ್.ಮುನಿಯಪ್ಪ ವಿರುದ್ಧವಾಗಿ ಒಂದಾಗಿದ್ದು, ಮೇ.23ರಂದು ವಿಜಯ ಯಾತ್ರೆ ಅಂತ್ಯಗೊಳ್ಳುವುದು ಖಚಿತ. ಮೊಮ್ಮಕ್ಕಳ ಜತೆ ಆಟವಾಡುವುದು ನಿಶ್ಚಿತ’ ಎಂದು ಹೇಳಿದರು.

‘1973ರಲ್ಲಿ ಬದುಕಲಿಕ್ಕಾಗಿ 4 ಎಕರೆ ಜಮೀನು ಪಡೆದುಕೊಂಡ ಕೆ.ಎಚ್.ಮುನಿಯಪ್ಪ ಇದೀಗ ಸಾವಿರಾರು ಎಕರೆ ಒಡೆಯನಾಗಿದ್ದಾರೆ. ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಕುಸಿದು ತೀವ್ರ ಹಾಹಾಕಾರ ಉಂಟಾಗಿರುವ ಸಂದಿಗ್ನ ಪರಿಸ್ಥಿತಿಯಲ್ಲಿ ಮಡಿಕೇರಿಗೆ ಹೋಗಿ 210 ಎಕರೆ ಖರೀದಿ ಮಾಡಿದ್ದಾರೆ. ಜನರ ಹಿತಕ್ಕಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ’ ಎಂದು ಆರೋಪಿಸಿದರು.

‘ಈ ಎಲ್ಲವನ್ನು ಜನರು ಅರ್ಥೈಸಿಕೊಂಡು ರಾಷ್ಟ್ರದ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದು ಸೈನಿಕರು, ರೈತರ ಪರವಾಗಿ ನಿಂತಿರುವ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಇಲ್ಲಿನ ಅಭ್ಯರ್ಥಿ ಎಸ್.ಮುನಿಸ್ವಾಮಿಗೆ ಅವರಿಗೆ ಮತ ನೀಡಬೇಕು, ಕಮಲಕ್ಕೆ ಹೆಚ್ಚಿನ ಮತಗಳು ಬಂದರೆ ನಿಮ್ಮ ಜೀವನ ಸುಗಮವಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು’ ಎಂದು ತಿಳಿಸಿದರು.

ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ‘ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆ ಸಮಯ ಬಂದಿದೆ. ಬದಲಾವಣೆ ಆಗದಿದ್ದರೆ ಮತ್ತೆ ಕಷ್ಟಕ್ಕೆ ಸಿಲುಕಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಹಾಲು, ಚಿನ್ನ, ರೇಷ್ಮೆ, ಐಎಎಸ್ ಅಧಿಕಾರಿಗಳು, ರಾಜಕಾರಣಿಗಳನ್ನು ನೀಡಿದ ಜಿಲ್ಲೆ ಕೋಲಾರ. 7 ಭಾರಿ ಸಂಸದರಾಗಿ ಆಯ್ಕೆಯಾಗಿರುವ ಕೆ.ಎಚ್.ಮುನಿಯಪ್ಪ ಕೊಡುಗೆ ಶೂನ್ಯ. ಶ್ರೀನಿವಾಸಪುರ–-ಮುಳಬಾಗಿಲು ಗಡಿಯಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿ ಸ್ಥಾಪನೆ ಮಾಡಲು ಸಾಧ್ಯವಾಗಿಲ್ಲ’ ಎಂದು ದೂರಿದರು.

‘ಮೋದಿ ಕೈಬಲಪಡಿಸಲು ಎಸ್.ಮುನಿಸ್ವಾಮಿಗೆ ಮತ ನೀಡಬೇಕು. ಬಿಜೆಪಿಯಿಂದಲೇ ದೇಶವು ಸಮೃದ್ಧಿಯಾಗಿ, ನಾವು- ನೀವೆಲ್ಲರೂ ನೆಮ್ಮದಿಯಾಗಿ ಬಾಳಲು ಸಾಧ್ಯ’ ಎಂದು ತಿಳಿಸಿದರು.

ಬಿಜೆಪಿ ಯುವಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಅರುಣಮ್ಮ, ಮಂಜುಳಾ, ಕೆ.ಎಚ್.ಕ್ರೋಟೇಶ್ವರ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !