ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ: ತನಿಖೆಗೆ ಮುನಿಯಪ್ಪ ಒತ್ತಾಯ

Last Updated 22 ಮೇ 2019, 17:38 IST
ಅಕ್ಷರ ಗಾತ್ರ

ಕೋಲಾರ: ‘ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಮೇಲೆ ಸ್ವಲ್ಪವೂ ನಂಬಿಕೆಯಿಲ್ಲ. ಇವಿಎಂ ಕಾರ್ಯವೈಖರಿ ಬಗ್ಗೆ ತನಿಖೆಯಾಗಲಿ’ ಎಂದು ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಒತ್ತಾಯಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಹಿಂದೆಯೇ ವಿರೋಧ ಪಕ್ಷಗಳ ಒಕ್ಕೂಟವು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸುವಂತೆ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು’ ಎಂದು ಹೇಳಿದರು.

‘ವಿರೋಧ ಪಕ್ಷಗಳು ಶೇ ೫೦ರಷ್ಟು ಮತಖಾತ್ರಿ ಉಪಕರಣಗಳಲ್ಲಿನ (ವಿ.ವಿ ಪ್ಯಾಟ್‌) ಮತ ಎಣಿಕೆ ಮಾಡುವಂತೆ ಒತ್ತಾಯಿಸಿವೆ. ಆದರೆ, ಕೇಂದ್ರ ಚುನಾವಣಾ ಆಯೋಗ ಇದಕ್ಕೆ ಒಪ್ಪಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಾಗಿದ್ದು, ಅವರ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದೆ’ ಎಂದು ಕಿಡಿಕಾರಿದರು.

‘ಚುನಾವಣೋತ್ತರ ಸಮೀಕ್ಷೆ ನಿಖರ ಸಮೀಕ್ಷೆಯಲ್ಲ. ದೇಶದಲ್ಲಿ ಚುನಾವಣೋತ್ತರ ಸಮೀಕ್ಷೆಗೆ ತದ್ವಿರುದ್ಧವಾದ ಫಲಿತಾಂಶ ಬರಲಿದೆ. ವಿಧಾನಸಭಾ ಚುನಾವಣೆಯಲ್ಲಿ ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ಸಿಕ್ಕಿದೆ. ಅಲ್ಲಿನ ಪಕ್ಷದ ಮುಖ್ಯಸ್ಥರು ಮತ್ತು ವರಿಷ್ಠರ ಜತೆ ನಿರಂತರ ಸಂಪರ್ಕದಲ್ಲಿದ್ದು, ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಜಯ ಗಳಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೋಲಾರ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲ್ಲುತ್ತದೆ. ಗೆಲುವಿನ ಅಂತರ ಹಾಗೂ ವಿರೋಧ ಪಕ್ಷದ ಅಭ್ಯರ್ಥಿ ಬಗ್ಗೆ ಈಗ ಮಾತನಾಡುವುದಿಲ್ಲ. ಶಾಸಕ ರೋಷನ್ ಬೇಗ್ ತಮ್ಮ ನೋವು ಹೇಳಿಕೊಂಡಿದ್ದಾರೆ. ಆದರೆ, ಅವರು ಈ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT