ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ : ಗಮನ ಸೆಳೆವ ಎಣ್ಣೆ ಗಾಣದ ಕುರುಹು

Published 3 ಜೂನ್ 2023, 23:30 IST
Last Updated 3 ಜೂನ್ 2023, 23:30 IST
ಅಕ್ಷರ ಗಾತ್ರ

ಆರ್.ಚೌಡರೆಡ್ಡಿ

ಶ್ರೀನಿವಾಸಪುರ: ತಾಲ್ಲೂಕಿನ ಕೆಲ ಗ್ರಾಮಗಳ ಸಮೀಪ ಎಣ್ಣೆ ತೆಗೆಯಲು ಬಳಸುತ್ತಿದ್ದ ಪುರಾತನ ಬೃಹತ್ ಕಲ್ಲಿನ ಒರಳುಗಳು ಕಾಣಸಿಗುತ್ತವೆ. ವಿದ್ಯುತ್ ಇಲ್ಲದ ಕಾಲದಲ್ಲಿ ರೈತರು ಹೊಂಗೆ, ಬೇವು, ಹುಚ್ಚರಳು ಹಾಗೂ ಶೇಂಗಾ ಬೀಜವನ್ನು ಗಾಣಕ್ಕೆ ಹಾಕಿ ಎಣ್ಣೆ ತೆಗೆಯುತ್ತಿದ್ದರು.

ಬೃಹತ್ ಏಕಶಿಲೆಯಲ್ಲಿ ನಿರ್ಮಿಸಲಾದ ಒರಳು ಕಲ್ಲನ್ನು ಒಂದೆಡೆ ನೆಟ್ಟು, ಅದಕ್ಕೆ ತಿರುಗಲು ಅನುಕೂಲವಾಗುವಂತೆ ಮರದ ಉಪಕರಣ ಅಳವಡಿಸಲಾಗುತ್ತಿತ್ತು. ಮರದ ದೊಡ್ಡ ದಿಮ್ಮಿ ನೆರವಿನಿಂದ ಎಣ್ಣೆ ಬೀಜ ರುಬ್ಬಲಾಗುತ್ತಿತ್ತು.

ಗಾಣ ನಡೆಯಲು ಎತ್ತುಗಳನ್ನು ಬಳಸಲಾಗುತ್ತಿತ್ತು. ಒಣಗಿದ ಎಣ್ಣೆ ಬೀಜ ಒರಳಿಗೆ ಸುರಿದು, ಅಳವಡಿಸಿರುವ ಉಪಕರಣಕ್ಕೆ ಎತ್ತುಗಳನ್ನು ಕಟ್ಟಿ ಸುತ್ತು ಹಾಕಿಸಿದರೆ ಸಾಕು ಬೀಜ ಅರಿಯಲ್ಪಟ್ಟು ಎಣ್ಣೆ ಹೊರ ಬರುತ್ತಿತ್ತು.

ತಾಲ್ಲೂಕಿನಲ್ಲಿ ಪ್ರತಿ ರೈತ ಕುಟುಂಬಕ್ಕೂ ಒಂದಕಿಂತ ಹೆಚ್ಚು ಹೊಂಗೆ ತೋಪುಗಳು ಇರುತ್ತಿದ್ದವು. ಒಣಗಿದ ಕಾಯಿ ಉದುರಿಸಿ ಸಂಗ್ರಹಿಸಲಾಗುತ್ತಿತ್ತು. ಕಾಯಿ ಒಡೆದು ಬೀಜ ಮಾಡಿ ಎಣ್ಣೆ ಮಾಡಲಾಗುತ್ತಿತ್ತು. ಬಿಡುವಿನ ವೇಳೆಯಲ್ಲಿ ಸಂಗ್ರಹಿಸಿದ ಬೇವಿನ ಬೀಜ ಹಾಗೂ ನೈಸರ್ಗಿಕವಾಗಿ ಬೆಳೆಯುವ ಹುಚ್ಚರಳು ಬೀಜ ಸಂಗ್ರಹಿಸಿ ಎಣ್ಣೆ ತೆಗೆಯಲಾಗುತ್ತಿತ್ತು. ಅದನ್ನು ದೀಪಕ್ಕೆ ಬಳಸಿಕೊಳ್ಳಲಾಗುತ್ತಿತ್ತು ಅಡುಗೆ ಮನೆಗೆ ಶೇಂಗಾ ಬೀಜದ ಎಣ್ಣೆ ಬಳಕೆಯಾಗುತ್ತಿತ್ತು.

ಹೊಂಗೆ, ಬೇವು ಹಾಗೂ ಹುಚ್ಚರಳು ಎಣ್ಣೆದೀಪ ಉರಿಸಲು ಬಳಸಲಾಗುತ್ತಿತ್ತು. ಬೇವಿನ ಎಣ್ಣೆ ಕೀಟನಾಶಕವಾಗಿ ಬಳಕೆಯಾಗುತ್ತಿತ್ತು. ಈ ಎಲ್ಲ ಎಣ್ಣೆ ಬೀಜಗಳ ಹಿಂಡಿ ಭೂಮಿ ಫಲವತ್ತತೆ ಹೆಚ್ಚಲು ಸಹಾಯಕವಾಗುತ್ತಿತ್ತು. ಅದರಲ್ಲೂ ಹೊಂಗೆ ಹಾಗೂ ಬೇವಿನ ಹಿಂಡಿ ಬೆಳೆಗೆ ಮಾರಕವಾದ ಗೊಣ್ಣೆ ಹುಳುವಿನ ನಿಯಂತ್ರಣಕ್ಕೆ ಸಹಾಯಕವಾಗುತ್ತಿತ್ತು. ಈ ಎಣ್ಣೆ ಹಾಗೂ ಹಿಂಡಿ ಜೈವಿಕ ಕೀಟನಾಶಕವಾಗಿ ಬಳಕೆಯಾಗುತ್ತಿದ್ದವು.

ರೈತರಿಗೆ ಗಾಣದಿಂದ ಎಣ್ಣೆ ತೆಗೆದುಕೊಡುವ ಹಾಗೂ ಎಣ್ಣೆ ತೆಗೆದು ಮಾರಾಟ ಮಾಡಿ ಜೀವನ ನಿರ್ವಹಿಸುವ ಸಮುದಾಯವೊಂದು ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ವಾಸಿಸುತ್ತಿವೆ. ಎಣ್ಣೆ ತೆಗೆಯುವವರನ್ನು ಗಾಣಿಗರು ಎಂದು ಕರೆಯುತ್ತಾರೆ. ತಾಲ್ಲೂಕಿನ ಪಂಚಲಿಂಗ ಕ್ಷೇತ್ರ ನಂಬಿಹಳ್ಳಿಯಲ್ಲಿ ಗಾಣಿಗರ ಬೀದಿಯೇ ಇದೆ. ‌

ಇಲ್ಲಿ ಮೊದಲಿನಿಂದಲೂ ಎಣ್ಣೆ ಗಾಣ ಇದ್ದವು. ಈ ಗ್ರಾಮಗಳಲ್ಲಿ ಈಗಲೂ ಎಣ್ಣೆ ಗಾಣ ಕಾಣಬಹುದಾಗಿದೆ. ಉರ್ಲಂಪಲ್ಲಿ, ಮುದಿಮಡಗು, ಕಡಪಲರೆಡ್ಡಿಹಳ್ಳಿ ಗ್ರಾಮಗಳ ಸಮೀಪ ಪುರಾತನ ಎಣ್ಣೆ ಗಾಣದ ಕಲ್ಲಿನ ಒರಳು ಕಾಣಬಹುದಾಗಿದೆ.

ತಾಲ್ಲೂಕಿನಲ್ಲಿ ಎಣ್ಣೆ ಗಾಣ ಎಲ್ಲಿಯೂ ಚಾಲನೆಯಲ್ಲಿಲ್ಲ. ಆದರೂ, ಅಲ್ಲಲ್ಲಿ ಕಂಡುಬರುವ ಗಾಣದ ಒರಳುಗಳು ಮರೆಯಾದ ಒಂದು ಜಾನಪದ ಸಂಸ್ಕೃತಿ ಕುರುಹುಗಳಾಗಿ ಉಳಿದುಕೊಂಡಿವೆ. ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮದ ಸಮೀಪ ನಿಸರ್ಗ ವಿದ್ಯಾಲಯದ ಆವರಣದಲ್ಲಿ ಇಂತಹ ಒಂದು ದೊಡ್ಡ ಕಲ್ಲಿನ ಒರಳು ಸಂರಕ್ಷಿಸಿ ಇಡಲಾಗಿದೆ. ಹೊಸೂರು ಗ್ರಾಮದಲ್ಲಿ ಗ್ರಾಮೀಣರು ಬಳಸುತ್ತಿದ್ದ ಬೀಸೋ ಕಲ್ಲು, ಒರಳುಕಲ್ಲು ಮುಂತಾದ ಕಲ್ಲಿನ ಉಪಕರಣ ಪುಟ್ಟ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ.

ಕಲ್ಲಿನ ಒರಳುಗಳ ಬಗ್ಗೆ ಗ್ರಾಮೀಣರಲ್ಲಿ ಮೂಢ ನಂಬಿಕೆಯೊಂದು ಮನೆ ಮಾಡಿಕೊಂಡಿದೆ. ಒಡೆದ ಅಥವಾ ಮುಕ್ಕಾದ ಕಲ್ಲಿನ ಒರಳು ಮನೆಯಲ್ಲಿ ಮಾತ್ರವಲ್ಲ ಗ್ರಾಮದಲ್ಲಯೇ ಇಟ್ಟುಕೊಳ್ಳುವುದಿಲ್ಲ. ಅದು ಮನೆ ಒರಳಾಗಿರಬಹುದು ಅಥವಾ ಗಾಣದ ಒರಳಾಗಿರಬಹುದು. ಹಾನಿಗೊಂಡ ಒರಳು ಗ್ರಾಮದ ಸರಹದ್ದಿನಿಂದ ಹೊರಗೆ ಸಾಗಿಸುವುದು ರೂಢಿ. ಇದಕ್ಕೆ ಕಾರಣ ಒಡೆದ ಒರಳು ಗ್ರಾಮ ಅಥವಾ ಗ್ರಾಮದ ಸರಹದ್ದಿನಲ್ಲಿದ್ದರೆ ಮಳೆಯಾಗುವುದಿಲ್ಲ ಎನ್ನುವ ಮೂಢನಂಬಿಕೆ. ಹಾಗಾಗಿ ಒಡೆದ ಒರಳು  ಗ್ರಾಮದ ಸರಹದ್ದಿನಿಂದ ಹೊರಗೆ ಸಾಗಿಸಲಾಗುತ್ತದೆ.

’ಆರೋಗ್ಯದ ದೃಷ್ಟಿಯಿಂದ ಎಣ್ಣೆಗಾಣ ಮತ್ತೆ ಬಳಕೆಗೆ ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ‘ ಎನ್ನುತ್ತಾರೆ ಡಾ. ವೈ.ವಿ.ವೆಂಕಟಾಚಲ.

‌ಎಣ್ಣೆ ಗಾಣಕ್ಕೆ ಮತ್ತೆ ಜೀವ

ಬದಲಾದ ಕಾಲಘಟ್ಟದಲ್ಲಿ ಎಣ್ಣೆ ಗಾಣಗಳಿಗೆ ಮತ್ತೆ ಜೀವ ಬರುತ್ತಿದೆ. ಕೆಲ ಕಡೆಗಳಲ್ಲಿ ಎಣ್ಣೆ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಗಾಣ ಸ್ಥಾಪಿಸಿ ಎಣ್ಣೆ ತೆಗೆಯುವುದರ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದ್ದಾರೆ. ಕಲಬೆರಕೆ ಎಣ್ಣೆ ಸೇವನೆಯಿಂದ ಬೇಸತ್ತ ಗ್ರಾಹಕರು ಗಾಣದ ಎಣ್ಣೆ ಖರೀದಿಗೆ ಮುಂದಾಗಿದ್ದಾರೆ. ಎಣ್ಣೆ ಕಾಳಿನಿಂದ ಮನೆಯಲ್ಲಿಯೇ ಎಣ್ಣೆ ತೆಗೆದುಕೊಳ್ಳಲು ಸಾಧ್ಯವಾಗುವಂತಹ ಸ್ವಯಂ ಚಾಲಿತ ಉಪಕರಣಗಳು ಮಾರುಕಟ್ಟೆಗೆ ಬಂದಿವೆ.

ಪುರಾತನ ಎಣ್ಣೆ ಗಾಣದ ಒರಳು
ಪುರಾತನ ಎಣ್ಣೆ ಗಾಣದ ಒರಳು

Cut-off box - ‌ಎಣ್ಣೆ ಗಾಣಕ್ಕೆ ಮತ್ತೆ ಜೀವ ಬದಲಾದ ಕಾಲಘಟ್ಟದಲ್ಲಿ ಎಣ್ಣೆ ಗಾಣಗಳಿಗೆ ಮತ್ತೆ ಜೀವ ಬರುತ್ತಿದೆ. ಕೆಲ ಕಡೆಗಳಲ್ಲಿ ಎಣ್ಣೆ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಗಾಣ ಸ್ಥಾಪಿಸಿ ಎಣ್ಣೆ ತೆಗೆಯುವುದರ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದ್ದಾರೆ. ಕಲಬೆರಕೆ ಎಣ್ಣೆ ಸೇವನೆಯಿಂದ ಬೇಸತ್ತ ಗ್ರಾಹಕರು ಗಾಣದ ಎಣ್ಣೆ ಖರೀದಿಗೆ ಮುಂದಾಗಿದ್ದಾರೆ. ಎಣ್ಣೆ ಕಾಳಿನಿಂದ ಮನೆಯಲ್ಲಿಯೇ ಎಣ್ಣೆ ತೆಗೆದುಕೊಳ್ಳಲು ಸಾಧ್ಯವಾಗುವಂತಹ ಸ್ವಯಂ ಚಾಲಿತ ಉಪಕರಣಗಳು ಮಾರುಕಟ್ಟೆಗೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT