ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಅಪಹರಣದ ನಾಟಕಕ್ಕೆ ಕುಟುಂಬ ಬಲಿ?

ಕೋಲಾರ: ನವಜಾತ ಶಿಶುವಿನ ಅಪಹರಣ ಸಂಬಂಧ ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಿರುವು ಪಡೆದಿದ್ದು, ಅಪಹೃತ ಶಿಶುವಿನ ಪೋಷಕರೇ ಮಗುವನ್ನು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಅಪಹೃತ ಶಿಶುವಿನ ತಂದೆ ಸತ್ಯ ಮತ್ತು ತಾಯಿ ಸುಮಿತ್ರಾ ಅವರು ಹಣದಾಸೆಗೆ ಗೀತಾ ಎಂಬುವರ ಜತೆ ಸೇರಿ ₹ 50 ಸಾವಿರಕ್ಕೆ ಮಗುವನ್ನು ಮಾರಾಟ ಮಾಡಿ ಅಪಹರಣದ ನಾಟಕವಾಡಿದ್ದಾರೆ. ಸುಮಿತ್ರಾ ದಂಪತಿ ಮತ್ತು ಗೀತಾರ ಸಂಚಿಗೆ ಸಿಲುಕಿ ಅಪಹರಣದ ಆರೋಪ ಹೊತ್ತ ಪುಷ್ಪಾ ಮತ್ತು ಕುಟುಂಬ ಸದಸ್ಯರು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೂಲತಃ ತಮಿಳುನಾಡಿನ ಸುಮಿತ್ರಾ ಅವರು ಕೋಲಾರ ತಾಲ್ಲೂಕಿನ ಹಂಚಾಳ ಗೇಟ್ ಬಳಿಯ ಖಾಸಗಿ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದಾರೆ. ಅವರು ತಾಲ್ಲೂಕಿನ ಹೊನ್ನೇನಹಳ್ಳಿಯ ಸತ್ಯ ಎಂಬುವರನ್ನು ಪ್ರೀತಿಸಿ ತಂದೆ ತಾಯಿಗೆ ತಿಳಿಸದೆ ಮದುವೆಯಾಗಿದ್ದರು. ಬಳಿಕ ಅವರಿಗೆ ಸೆ.26ರಂದು ಹೆಣ್ಣು ಮಗುವಾಗಿತ್ತು. ನಂತರ ಸುಮಿತ್ರಾ ಈ ವಿಷಯವನ್ನು ತನ್ನ ತಾಯಿಗೆ ಮಾತ್ರ ತಿಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸುಮಿತ್ರಾರ ತಂದೆಯ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಅಕ್ಟೋಬರ್‌ನಲ್ಲಿ ತಮಿಳುನಾಡಿನ ಸ್ವಗ್ರಾಮಕ್ಕೆ ಹೋಗುವ ಸನ್ನಿವೇಶ ಸೃಷ್ಟಿಯಾಯಿತು. ಮದುವೆ ಮತ್ತು ಮಗುವಿನ ಸಂಗತಿ ತಿಳಿದರೆ ತಂದೆ ಬೈಯ್ಯಬಹುದೆಂದು ಆತಂಕಗೊಂಡ ಸುಮಿತ್ರಾ ಅವರು ಪತಿ ಸತ್ಯ ಜತೆ ಚರ್ಚಿಸಿ ಮಗುವನ್ನು ಮಾರಾಟ ಮಾಡುವ ನಿರ್ಧಾರ ಮಾಡಿದ್ದರು. ಅದರಂತೆ ಸತ್ಯ ಅವರು ಸ್ನೇಹಿತ ಸೋಮಶೇಖರ್‌ರ ಪತ್ನಿ ಗೀತಾರನ್ನು ಸಂಪರ್ಕಿಸಿ ಅವರ ಮೂಲಕ ಮಗುವನ್ನು ಮಾರಾಟ ಮಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಟೊ ಚಾಲಕರಾದ ಸತ್ಯ ಮತ್ತು ಸೋಮಶೇಖರ್ ಹಲವು ವರ್ಷಗಳಿಂದ ಸ್ನೇಹಿತರು. ಸತ್ಯ ಮತ್ತು ಸುಮಿತ್ರಾ ದಂಪತಿ ಪರಸ್ಪರ ಸಮ್ಮತಿಯಿಂದಲೇ ಮಗುವನ್ನು ಮಾರಾಟ ಮಾಡಿದ್ದಾರೆ. ಸುಮಿತ್ರಾ ತಂದೆಯನ್ನು ನೋಡಲು ತಮಿಳುನಾಡಿಗೆ ಹೋಗುವ ವೇಳೆಗಾಗಲೇ ಅವರ ತಾಯಿಯು ಮಗಳ ಮದುವೆ ಮತ್ತು ಮಗು ಜನಿಸಿದ ಸುದ್ದಿಯನ್ನು ಪತಿಗೆ ತಿಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅಪಹರಣದ ದೂರು: ಸುಮಿತ್ರಾರ ತಂದೆ ಮತ್ತು ತಾಯಿಯು ಮಗುವಿನ ಬಗ್ಗೆ ಪ್ರಶ್ನೆ ಮಾಡಿದಾಗ ಅವರು ಕೋಲಾರದಲ್ಲಿ ಬಿಟ್ಟು ಬಂದಿರುವುದಾಗಿ ಸುಳ್ಳು ಹೇಳಿದ್ದರು. ಅ.28ರಂದು ತಮಿಳುನಾಡಿನಿಂದ ಕೋಲಾರಕ್ಕೆ ಹಿಂದಿರುಗಿದ ಸುಮಿತ್ರಾ ಅವರು ಪತಿಯ ಜತೆ ನ.2ರಂದು ಠಾಣೆಗೆ ಬಂದು ಮಗು ಅಪಹರಣವಾಗಿದೆ ಎಂದು ದೂರು ಕೊಟ್ಟರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಊರಿಗೆ ಹೋಗಬೇಕಿದ್ದ ಕಾರಣ ಮಗುವನ್ನು ಕೆಲ ದಿನಗಳ ಮಟ್ಟಿಗೆ ನೋಡಿಕೊಳ್ಳುವಂತೆ ಗೀತಾ ಅವರ ಬಳಿ ಬಿಟ್ಟು ಹೋಗಿದ್ದೆ. ಆದರೆ, ಗೀತಾ ಮತ್ತು ಅವರ ಸ್ನೇಹಿತೆ ಪುಷ್ಪಾ ಅವರು ಮಗುವನ್ನು ಬಚ್ಚಿಟ್ಟಿದ್ದಾರೆ. ಗೀತಾ ಅವರು ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಸುಮಿತ್ರಾ ದೂರಿನಲ್ಲಿ ಆರೋಪಿಸಿದ್ದರು. ಈ ದೂರು ಆಧರಿಸಿ ಪೊಲೀಸರು ಪುಷ್ಪಾರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.