ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಮೀಕ್ಷೆ ನಡೆಸಲು ರೈತರಿಗೆ ಜವಾಬ್ದಾರಿ

ಆ್ಯಪ್‌ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸತ್ಯಭಾಮ ಹೇಳಿಕೆ
Last Updated 14 ಆಗಸ್ಟ್ 2020, 14:37 IST
ಅಕ್ಷರ ಗಾತ್ರ

ಕೋಲಾರ: ‘ರೈತರು ಬೆಳೆದ ಬೆಳೆಗಳ ವಿವರವನ್ನು ತಮ್ಮ ಮೊಬೈಲ್‌ ಆ್ಯಪ್‌ನಲ್ಲಿ ದಾಖಲಿಸುವ ಮೂಲಕ ಬೆಳೆ ಸಮೀಕ್ಷೆ ನಡೆಸಬಹುದು’ ಎಂದು ಜಿಲ್ಲಾಧಿಕಾರಿಸಿ.ಸತ್ಯಭಾಮ ತಿಳಿಸಿದರು.

ತಾಲ್ಲೂಕಿನ ಕುಂಬಾರಹಳ್ಳಿಯ ರೈತರೊಬ್ಬರ ಜಮೀನಿನಲ್ಲಿ ಶುಕ್ರವಾರ ಬೆಳೆ ಸಮೀಕ್ಷೆ ಆ್ಯಪ್‌ಗೆ ಚಾಲನೆ ನೀಡಿ ಮಾತನಾಡಿ, ‘ಬೆಳೆ ಸಮೀಕ್ಷೆಗೆ ರೈತರು ತಮ್ಮ ಮೊಬೈಲ್‌ನಲ್ಲಿ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 7.86 ಲಕ್ಷ ಜಮೀನುಗಳಿವೆ. ಈ ಎಲ್ಲಾ ಜಮೀನುಗಳ ಬೆಳೆ ಸಮೀಕ್ಷೆಯನ್ನು ರೈತರೇ ಮಾಡಬಹುದು. ರೈತರು ಆ.24ರೊಳಗೆ ಬೆಳೆ ವಿವರವನ್ನು ಆ್ಯಪ್‌ನಲ್ಲಿ ದಾಖಲು ಮಾಡಬೇಕು. ಆಂಡ್ರಾಯ್ಡ್ ಮೊಬೈಲ್ ಇಲ್ಲದವರು ಪಕ್ಕದ ಜಮೀನಿನ ರೈತರ ಮೊಬೈಲ್‌ ಬಳಸಿ ಮಾಹಿತಿ ದಾಖಲಿಸಬಹುದು’ ಎಂದು ಮಾಹಿತಿ ನೀಡಿದರು.

‘ಬೆಳೆ ಸಮೀಕ್ಷೆಯಿಂದ ಯಾವ ರೈತರು ಯಾವ ಬೆಳೆ ಬೆಳೆದಿದ್ದಾರೆ ಎಂಬ ನಿಖರ ಮಾಹಿತಿ ಸಿಗಲಿದೆ. ಭವಿಷ್ಯದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ ಬೆಳೆ ನಷ್ಟವಾದ ಸಂದರ್ಭದಲ್ಲಿ ಬೆಳೆ ವಿಮೆ ನೀಡಲು ಸಹಕಾರಿಯಾಗುತ್ತದೆ. ಜತೆಗೆ ಬೆಳೆ ನಷ್ಟದ ಸಂದರ್ಭದಲ್ಲಿ ಪರಿಹಾರ ಧನ ವಿತರಣೆಗೂ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ನಿಖರತೆ ಕಾಯ್ದುಕೊಳ್ಳಿ: ‘ಜಿಲ್ಲೆಯಲ್ಲಿ 1.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆಗಳ ಸಮೀಕ್ಷೆಯನ್ನು ರೈತರೇ ಮಾಡಬೇಕು. ರಾಜ್ಯದಲ್ಲಿ ಜಿಲ್ಲೆಯು ಬೆಳೆ ಸಮೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಜತೆಗೆ ಗುಣಾತ್ಮಕತೆಯಲ್ಲಿ ನಿಖರತೆ ಕಾಯ್ದುಕೊಳ್ಳಬೇಕು. ಸಮೀಕ್ಷೆ ಬಗ್ಗೆ ಮಾಹಿತಿ ನೀಡಲು ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಇವರು ರೈತರಿಗೆ ಮಾರ್ಗದರ್ಶನ ನೀಡುತ್ತಾರೆ’ ಎಂದು ವಿವರಿಸಿದರು.

‘ಸಮೀಕ್ಷೆಯ ಆ್ಯಪ್‌ನಲ್ಲಿ ಬೆಳೆಗಳ ಮಾಹಿತಿ ಕನ್ನಡದಲ್ಲಿ ಭಾಷೆಯಲ್ಲಿ ಪ್ರದರ್ಶನವಾದರೆ ಅನುಕೂಲವಾಗುತ್ತದೆ. ಜಮೀನು ಗುತ್ತಿಗೆ ಪಡೆದು ಬೆಳೆ ಬೆಳೆದ ರೈತರಿಗೆ ಪರಿಹಾರ ದೊರೆತರೆ ಸಹಾಯವಾಗುತ್ತದೆ’ ಎಂದು ರೈತರು ಅಭಿಪ್ರಾಯಪಟ್ಟರು.

ಕುಂಬಾರಹಳ್ಳಿ ಗ್ರಾಮದ ಸರ್ವೆ ನಂಬರ್ 48/1ರಲ್ಲಿನ ಮಲ್ಲಮ್ಮ ಎಂಬುವರ ಜಮೀನಿನನ್ನು ವೆಂಕಟೇಶಗೌಡ ಎಂಬುವರು ಗುತ್ತಿಗೆ ಪಡೆದು ಟೊಮೆಟೊ ಬೆಳೆದಿದ್ದು, ಈ ಬೆಳೆಯ ಸಮೀಕ್ಷೆ ಮಾಡಿಸಲಾಯಿತು. ನಂತರ ಸರ್ವೆ ನಂಬರ್ 49ರಲ್ಲಿನ ರತ್ನಮ್ಮ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿರುವ ನೀಲಗಿರಿ ಬೆಳೆಯ ಸಮೀಕ್ಷೆ ನಡೆಸಲಾಯಿತು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಎಂ.ಗಾಯತ್ರಿ, ರೈತ ಸಂಘಟನೆಗಳ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT