ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹ; ಕೋಚಿಮುಲ್ ಎದುರು ರೈತರ ಪ್ರತಿಭಟನೆ

Published 8 ಜುಲೈ 2024, 14:31 IST
Last Updated 8 ಜುಲೈ 2024, 14:31 IST
ಅಕ್ಷರ ಗಾತ್ರ

ಮುಳಬಾಗಿಲು: ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತಿತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ಹಾಗೂ ವಿವಿಧ ಸಂಘಟನೆಗಳು ಸೋಮವಾರ ಕೋಚಿಮುಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.

ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ₹ 5 ಬದಲಿಗೆ ₹ 10ಕ್ಕೆ ಏರಿಕೆ ಮಾಡಬೇಕು, ಒಂದು ಲೀಟರ್ ಹಾಲಿಗೆ ₹ 50 ನಿಗದಿ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಪುಣ್ಯಹಳ್ಳಿ ಶಂಕರ್ ಮಾತನಾಡಿ, ರಾಜ್ಯದ ಕೃಷಿ ರಂಗದಲ್ಲಿ ಹೈನುಗಾರಿಕೆ ಬಹುತೇಕ ರೈತಾಪಿ ಕೃಷಿ, ಕೂಲಿಕಾರರ ಕುಟುಂಬಗಳ ಆರ್ಥಿಕ ಮೂಲ ಆಗಿದೆ. ಮಹಿಳೆಯರ ಶ್ರಮವೇ ಪ್ರಧಾನವಾಗಿರುವ ಹೈನುಗಾರಿಕೆಯನ್ನು ಸರ್ಕಾರ ಕೈ ಹಿಡಿದು ಅದನ್ನು ನಂಬಿರುವವರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ದಿನೇ ದಿನೇ ಹೆಚ್ಚುತ್ತಿರುವ ಪಶು ಆಹಾರ ಬೆಲೆ ಏರಿಕೆ, ಪಶುಗಳ ಖರೀದಿ ದರ, ಪಶುಗಳ ನಿರ್ವಹಣೆ ಇತ್ಯಾದಿಗಳಿಂದ ಲೀಟರ್ ಹಾಲಿನ ಮೇಲೆ ₹ 6-7 ನಷ್ಟವಾಗುತ್ತಿದೆ. ರಾಜ್ಯ ಸರ್ಕಾರ ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ನಿಲ್ಲಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ಹಾಲು ಉತ್ಪಾದಕರು ಹೈನುಗಾರಿಕೆಯಿಂದ ದೂರ ಉಳಿಯುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಾಲಿನ ದರವನ್ನು ಕೂಡಲೇ ಹೆಚ್ಚಿಸಬೇಕು, ಮೇವು ಕತ್ತರಿಸುವ ಯಂತ್ರಗಳು ಹಾಗೂ ಹಸುಗಳಿಗೆ ರಬ್ಬರ್ ಮ್ಯಾಟುಗಳಿಗೆ ಮತ್ತಷ್ಟು ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಕೋಚಿಮುಲ್ ವ್ಯವಸ್ಥಾಪಕ ಕಿರಣ್ ಅವರಿಗೆ ಮನವಿ ಸಲ್ಲಿಸಿದರು. ಎಸ್‌ಎಫ್‌ಐ ತಾಲ್ಲೂಕು ಕಾರ್ಯದರ್ಶಿ ಸುದರ್ಶನ್, ಜನಾರ್ದನ್, ದೇವಾ, ಡಿವೈಎಫ್‌ಐನ ಕೇರಳ ಶ್ರೀನಿವಾಸ್, ಚಂಗಪ್ಪ, ನಂದೀಶ, ಕೃಷ್ಣಪ್ಪ, ವೆಂಕಟೇಶ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT