ಶುಕ್ರವಾರ, ಫೆಬ್ರವರಿ 21, 2020
18 °C
ಕುಂದು ಕೊರತೆ ಸಭೆಯಲ್ಲಿ ಎಪಿಎಂಸಿ ವಿರುದ್ಧ ರೈತರ ಆಕ್ರೋಶ

ಕೋಲಾರ: ಕುಂದು ಕೊರತೆ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ನಡೆದ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ರೈತರು ಸಮಸ್ಯೆಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರು.

‘ಮಾರುಕಟ್ಟೆಯಲ್ಲಿ ಸಾಕಷ್ಟು ಸಮಸ್ಯೆಗಳು ಇವೆ, ನಿರಂತರವಾಗಿ ರೈತರ ವಂಚನೆ, ಶೋಷಣೆ ನಡೆಯುತ್ತಿದೆ. ಈ ಬಗ್ಗೆ ದೂರು ನೀಡಿದರೂ ಕ್ರಮಕೈಗೊಳ್ಳಲಾಗದಿದ್ದಾಗ ಆಡಳಿತ ಮಂಡಳಿಯಿಂದ ಯಾಕೆ ಕುಂದುಕರೆತೆಗಳ ಸಭೆ ನಡೆಸುತ್ತಿದ್ದೀರ’ ಎಂದು ರೈತ ಸಂಘದ ಮುಖಂಡರು, ರೈತರು ಆಕ್ರೋಶವ್ಯಕ್ತಪಡಿಸಿದರು.

ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ‘ಮಾರುಕಟ್ಟೆಗೆ ಸ್ಥಳಾವಕಾಶ ಕೊರತೆ ನೀಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ರೈತ ಕೃಷಿ ಹಾಗೂ ಸಂಬಂಧಿತ ಚಟುವಟಿಕೆ ನಡೆಸು ವೇಳೆ ಮೃತಪಟ್ಟರೆ ₨ ೧ ಲಕ್ಷ ಹಾಗೂ ಅಂಗವಿಕಲತೆಗೆ ಒಳಗಾದಾಗ ರೈತ ಸಂಜೀವಿನಿ ಯೋಜನೆಯಡಿ ವಿಮಾ ಸೌಲಭ್ಯ ಇದೆ’ ಇದರ ಪ್ರಯೋಜನೆ ಪಡೆದುಕೊಳ್ಳಲು ರೈತರು ಮುಂದಾಗಬೇಕು’ ಎಂದು ಕೋರಿದರು.

ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಮಾತನಾಡಿ, ‘ರೈತ ಸಂಜೀವಿನಿ ಯೋಜನೆಯಡಿ ನೀಡುವ ವಿಮಾ ಪರಿಹಾರದ ಮೊತ್ತ ರೈತನ ಜೀವಕ್ಕೆ ಬೆಲೆ ಇಲ್ಲದ ರೀತಿಯಲ್ಲಿದೆ. ಇದನ್ನು ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.

ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ಮಾರುಕಟ್ಟೆಯಲ್ಲಿ ಬಿಳಿ ಚೀಟಿ ದಂಧೆ ಇಲ್ಲು ನಿಂತಿಲ್ಲ. ಇತ್ತೀಚಿಗೆ ಮಾರುಕಟ್ಟೆಗೆ ತನಿಖಾ ಅಧಿಕಾರಿಗಳು ಭೇಟಿ ನೀಡಿ ಎಚ್ಚರಿಕೆ ನೀಡಿದ್ದರೂ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಅಲೋಚನೆಯೂ ಬರಲಿಲ್ಲವೆ’ ಎಂದು ಪ್ರಶ್ನಿಸಿದರು.

ರೈತ ಶ್ರೀನಿವಾಸ್ ಮಾತನಾಡಿ, ‘ರೈತರು ತರುವ ತರಕಾರಿಗೆ ನಿಗಧಿತ ಬೆಲೆ ದೊರೆಯದಿದ್ದರೂ ಕಮಿಷನ್ ಕಡಿತಗೊಳಿಸುತ್ತಿದ್ದಾರೆ. ಕಮಿಷನ್ ವಸೂಲಿ ನಿಲ್ಲಿಸಬೇಕು. ಕಾನೂನಿನ ಪ್ರಕಾರವೇ ವಹಿವಾಟು ನಡೆಯಲಿ. ಬೇಡಿಕೆ ಇದ್ದರೆ ಖರೀದಿದಾರ ಮಾಲು ಖರೀದಿಸಿಯೇ ಖರೀದಿಸುತ್ತಾನೆ’ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಡಿ.ಎಲ್. ನಾಗರಾಜ್ ಮಾತನಾಡಿ, ‘ಎಪಿಎಂಸಿಯಲ್ಲಿ ಜಾಗ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡದ್ದೆವೆ. ಈಗಾಗಲೇ ಚೆಲುವನಹಳ್ಳಿ ಸಮೀಪ ೩೭.೨೦ ಎಕರೆ ಜಾಗ ಗುರುತಿಸಲಾಗಿದ್ದು, ಸರ್ಕಾರದ ಹಂತದಲ್ಲಿ ಅನುಮೋದನೆ ಬಾಕಿ ಇದೆ’ ಎಂದು ಹೇಳಿದರು.

‘ಪ್ರಾಂಗಣದಲ್ಲಿ ನೀರಿನ ಸಮಸ್ಯೆಗೆ ಶುದ್ಧ ನೀರಿನ ಘಟಕದ ವ್ಯವಸ್ಥೆ ಮಾಡಲಾಗಿದೆ, ಎರಡು ಕಡೆ ಸಾರ್ವಜನಿಕ ಶೌಚಾಲಯಿವೆ. ಇನ್ನೊಂದು ಕಡೆ ನಿರ್ಮಾಣ ಹಂತದಲ್ಲಿದೆ. ರೈತ ಸಂಜೀವಿನಿ ಯೋಜನೆಯಡಿ ನಿಗದಿಪಡಿಸಿರುವ ವಿಮಾ ಮೊತ್ತ ₨ ೧ ಲಕ್ಷಗಳನ್ನು ₨ ೩ ಲಕ್ಷಕ್ಕೆ ಹಾಗೂ ಅಂಗವಿಕಲರಾದಲ್ಲಿ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು’ ಎಂದು ತಿಳಿಸಿದರು.

‘ರೈತರು ತರಕಾರಿಯ ಗುಣಮಟ್ಟ ಕಾಪಾಡುವುದರ ಜತೆಗೆ ಸುರಕ್ಷಿತವಾಗಿ ಮಾರುಕಟ್ಟೆಗೆ ತರಬೇಕು. ನೆರಳು ಪರದೆಯಲ್ಲಿ ಬೆಳೆದ ತರಕಾರಿಗೆ ಹೆಚ್ಚು ಬೆಲೆ ಸಿಗುತ್ತದೆ. ಇದರಿಂದ ರೈತರು ಹೆಚ್ಚು ಇದಕ್ಕೆ ಒತ್ತು ನೀಡಬೇಕು. ಮಾರುಕಟ್ಟೆ ಸಮೀಪದಲ್ಲಿ ನೆರಳಿನ ವ್ಯವಸ್ಥೆ ಮಾಡಲು ₨ ೮೦ ಲಕ್ಷ ಅನುದಾನ ಮೀಸಲಿರಿಸಲಾಗಿದೆ’ ಎಂದರು.

‘ಬಿಳಿ ಚೀಟಿ ವ್ಯವಹಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡಿ ಮಾಲೀಕರಿಗೆ ಬಿಲ್ ಪುಸ್ತಕ ಮುದ್ರಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಕಾನೂನು ಪಾಲನೆಯನ್ನು ಏಪ್ರಿಲ್ ೧ರಿಂದ ಜಾರಿ ಆಗಬಹುದು’ ಎಂದು ವಿವರಿಸಿದರು.

ಎಪಿಎಂಸಿ ಉಪಾಧ್ಯಕ್ಷ ರವಿಶಂಕರ್, ನಿರ್ದೇಶಕರಾದ ಸದಸ್ಯರಾದ ದೇವರಾಜ್, ಮಂಜುನಾಥ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು