ಇಂಧನ ಬೆಲೆ ಏರಿಕೆ ವಿರುದ್ಧ ಹೋರಾಟ

ಕೆಜಿಎಫ್: ‘ಜನಸಾಮಾನ್ಯರ ಮೇಲೆ ಕರುಣೆಯಿಲ್ಲದ ಮತ್ತು ಸಂಸ್ಕಾರವಿಲ್ಲದ ಸರ್ಕಾರದ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು’ ಎಂದು ಶಾಸಕಿ ಎಂ. ರೂಪಕಲಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಬುಧವಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂಧನದ ಮೇಲೆ ಇಷ್ಟೊಂದು ಪ್ರಮಾಣದ ತೆರಿಗೆ ವಿಧಿಸುವ ದೇಶ ಬೇರೆಲ್ಲೂ ಸಿಗುವುದಿಲ್ಲ. ಪ್ರತಿ ಲೀಟರ್‌ಗೆ ₹ 38 ತೆರಿಗೆ ವಿಧಿಸುತ್ತಿದ್ದಾರೆ. ಇಂಧನವನ್ನು ಜಿಎಸ್‌ಟಿಯಡಿ ತಂದರೆ ಜನಸಾಮಾನ್ಯರ ಮೇಲೆ ಹೊರೆಬೀಳುವುದಿಲ್ಲ ಎಂದು ಹೇಳಿದರು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಒಂದು ಬ್ಯಾರಲ್‌ಗೆ 53 ಡಾಲರ್ ಇದೆ. ಅದಕ್ಕಿಂತ ಹೆಚ್ಚಿನ ಬೆಲೆ 2013ರಲ್ಲಿ ಯುಪಿಎ ಸರ್ಕಾರವಿದ್ದಾಗಲೂ ಇತ್ತು. ವಾಜಪೇಯಿ ಇಂಧನ ಬೆಲೆ ಏರಿಕೆ ಖಂಡಿಸಿ ಅಂದು ಸೈಕಲ್ ಜಾಥಾ ನಡೆಸಿದ್ದರು. ಈಗ ಬಿಜೆಪಿ ಬೆಲೆಯನ್ನು ಒಂದೇ ಸಮನೆ ಏರಿಸುತ್ತಾ ಹೋಗಿದೆ. ದಿನಗೂಲಿ ಮಾಡುವ ನೌಕರರು ತಮ್ಮ ಆದಾಯವನ್ನೆಲ್ಲಾ ಇಂಧನಕ್ಕಾಗಿ ಖರ್ಚು ಮಾಡಬೇಕಾಗಿ ಬಂದಿದೆ ಎಂದು ಆರೋಪಿಸಿದರು.
ಸರ್ಕಾರ ಜನಪರ, ಕಾರ್ಮಿಕರ ಪರವಾಗಿಲ್ಲ. ಹತ್ತು ವರ್ಷದ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇದ್ದುದಕ್ಕಿಂತ ಇಂದು ಎರಡು ಪಟ್ಟು ಬೆಲೆ ಏರಿಕೆಯಾಗಿದೆ. ಅಡುಗೆ ಅನಿಲ ಸಿಲಿಂಡರ್ ದರ ₹ 900 ದಾಟಿದೆ. ದಿನಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಎಲ್ಲಾ ಪದಾರ್ಥಗಳು ಏರುತ್ತಿದ್ದರೂ ಸುಮ್ಮನೆ ಇರುವ ಈ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಜನರಿಗೆ ಅನ್ಯಾಯ ಮಾಡಲು ಹೊರಟಿದೆ. ನ್ಯಾಯ, ಧರ್ಮಪಾಲನೆ ಮಾಡದವರು ರಾಷ್ಟ್ರವನ್ನು ಆಳುತ್ತಿದ್ದಾರೆ ಎಂದು ದೂರಿದರು.
ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊದಲೈಮುತ್ತು, ನಗರಸಭೆ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.