ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ವಿರುದ್ಧ ಒಗ್ಗೂಡಿ ಹೋರಾಡಿ: ವಿ.ವಿ ಕುಲಪತಿ ಕೆಂಪರಾಜು ಕಿವಿಮಾತು

ವಿದ್ಯಾರ್ಥಿಗಳಿಗೆ ಬೆಂಗಳೂರು ಉತ್ತರ
Last Updated 14 ಮೇ 2021, 15:08 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ ಬಗ್ಗೆ ಭಯ ಬೇಡ. ಭವಿಷ್ಯದಲ್ಲಿ ಈ ಮಹಾಮಾರಿಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗೂಡಿ ಹೋರಾಡುವ ಸಂಕಲ್ಪ ಮಾಡೋಣ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಕೋವಿಡ್ 2ನೇ ಅಲೆ ಎಚ್ಚರಿಕೆ ಹಾಗೂ ಸೋಂಕು ತಡೆ ಕ್ರಮಗಳು’ ಕುರಿತು ಬೆಂಗಳೂರು ಉತ್ತರ ವಿ.ವಿ ಕನ್ನಡ ಮತ್ತು ಸಮಾಜ ಕಾರ್ಯ ವಿಭಾಗದ ವತಿಯಿಂದ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆನ್‌ಲೈನ್‌ ಸಂವಾದದಲ್ಲಿ ಮಾತನಾಡಿ, ‘ವಿ.ವಿಯ ಸ್ನಾತಕೋತ್ತರ ವಿದ್ಯಾರ್ಥಿಗಳು ತಪ್ಪದೇ ಕೋವಿಡ್‌ ಲಸಿಕೆ ಪಡೆಯಬೇಕು’ ಎಂದರು.

‘ವಿದ್ಯಾರ್ಥಿ ಸಮುದಾಯ ಕೋವಿಡ್ ನಿರ್ಮೂಲನೆಯಲ್ಲಿ ಮುಂಚೂಣಿಯಲ್ಲಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಪಾಲಿಸಬೇಕು. ಸರ್ಕಾರದ ಕೋವಿಡ್‌ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಸಮುದಾಯ, ಕುಟುಂಬ ಸದಸ್ಯರಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ’ ಎಂದು ಹೇಳಿದರು.

‘ಸರ್ಕಾರದ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಯು ಕೋವಿಡ್ ನಿಯಂತ್ರಣಕ್ಕಾಗಿ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ ನಡುವೆಯೂ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಬೋಧನೆ ಮುಂದುವರಿಸಲಾಗಿದೆ. ಕೋವಿಡ್ ಮಹಾಮಾರಿ ತೊಲಗಿಸುವ ಸರ್ಕಾರದ ಕಾರ್ಯಕ್ಕೆ ವಿದ್ಯಾರ್ಥಿ ಸಮುದಾಯ, ಪ್ರಾಧ್ಯಾಪಕರು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

2ನೇ ಅಲೆ ತೀವ್ರ: ‘ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರವನ್ನು ದೂಷಿಸದೆ ತಮ್ಮಿಂದ ಏನು ಮಾಡಲು ಸಾಧ್ಯ ಎಂಬುದನ್ನು ಅರಿಯಬೇಕು. ದೇಶದಲ್ಲಿ ಕೋವಿಡ್‌ 2ನೇ ಅಲೆಯು ಮೊದಲ ಅಲೆಗಿಂತ ಹೆಚ್ಚು ತೀವ್ರವಾಗಿದೆ. ಸರ್ಕಾರಗಳು ಈ ತೀವ್ರತೆ ಅರಿಯುವಲ್ಲಿ ಎಡವಿವೆ. 2ನೇ ಅಲೆಯು ತನ್ನ ರೂಪ ಬದಲಿಸಿ ಸಮುದಾಯದೊಳಗೆ ಪ್ರವೇಶಿಸಿದೆ’ ಎಂದು ಸಂಪನ್ಮೂಲ ವ್ಯಕ್ತಿ ಎಚ್.ವಿ.ವಾಸು ವಿವರಿಸಿದರು.

‘ಈಗ ಕೊರೊನಾ ಸೋಂಕು ಯಾರಿಂದ ಮತ್ತು ಎಲ್ಲಿಂದ ಬಂತು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಮೊದಲನೇ ಅಲೆ ಬಂದಾಗ 10 ಸಾವಿರ ವೆಂಟಿಲೇಟರ್‌ ಇದ್ದವು. 2ನೇ ಅಲೆ ಬರುವಷ್ಟರಲ್ಲಿ ವೆಂಟಿಲೇಟರ್‌ಗಳ ಸಂಖ್ಯೆ 25 ಸಾವಿರಕ್ಕೆ ಏರಿತು. ಕರ್ನಾಟಕದ ಚಿತ್ರಣ ನೋಡಿದರೆ 950 ಐಸಿಯು ಬೆಡ್‌ಗಳಿದ್ದು, 2ನೇ ಅಲೆ ವೇಳೆಗೆ ಹೆಚ್ಚಿನ ಬದಲಾವಣೆ ಕಾಣಲಿಲ್ಲ’ ಎಂದು ಮಾಹಿತಿ ನೀಡಿದರು.

‘ಮಹಾರಾಷ್ಟ್ರದಲ್ಲಿ ಮೊದಲನೇ ಅಲೆಯ ಸಂದರ್ಭದಲ್ಲೇ 1,200 ವೆಂಟಿಲೇಟರ್‌ ವ್ಯವಸ್ಥೆ ಮಾಡಲಾಯಿತು. ರಾಜ್ಯದಿಂದ ರಾಜ್ಯಕ್ಕೆ ಸಿದ್ಧತೆ ಕೂಡ ವ್ಯತ್ಯಾಸವಿದೆ. 2ನೇ ಅಲೆಯಲ್ಲಿ ಪರೀಕ್ಷೆ ಬಗ್ಗೆ ಅನೇಕ ಗೊಂದಲಗಳಿವೆ. ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಸೋಂಕು ಇಲ್ಲವೆಂದು ವರದಿ ಬಂದರೆ ಸಿ.ಟಿ ಸ್ಕ್ಯಾನ್‌ನಲ್ಲಿ ಸೋಂಕು ಇದೆ ಎಂಬ ವರದಿ ಬರುತ್ತಿದೆ’ ಎಂದು ತಿಳಿಸಿದರು.

ಅರಿವಿನ ಕೊರತೆ: ‘ದೇಶದಲ್ಲಿ ರೆಮ್‌ಡಿಸಿವರ್‌ ಚುಚ್ಚುಮದ್ದಿನ ಬಗ್ಗೆ ತಪ್ಪು ಕಲ್ಪನೆಗಳಿವೆ. ವಿಶ್ವ ಆರೋಗ್ಯ ಸಂಸ್ಥೆಯು 11 ಸಾವಿರ ಜನರ ಮೇಲೆ ಸಂಶೋಧನೆ ಮಾಡಿ ರೆಮ್‌ಡಿಸಿವರ್‌ ಚುಚ್ಚುಮದ್ದು ಹೆಚ್ಚು ಪ್ರಯೋಜನವಿಲ್ಲ ಎಂಬ ಅಭಿಪ್ರಾಯ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ಸಹ ಇದೇ ಅಭಿಪ್ರಾಯ ಕೊಟ್ಟಿದೆ. ಆದರು ಜನರು ರೆಮ್‌ಡಿಸಿವರ್‌ ಚುಚ್ಚುಮದ್ದಿಗೆ ಅಂಟಿಕೊಂಡಿರಲು ಅರಿವಿನ ಕೊರತೆ ಕಾರಣ’ ಎಂದು ಅಭಿಪ್ರಾಯಪಟ್ಟರು.

‘ರೆಮ್‌ಡಿಸಿವಿರ್ ಚುಚ್ಚುಮದ್ದು ತೆಗೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯೇ ಹೊರತು ಕೊರೊನಾ ಸೋಂಕು ಸಂಪೂರ್ಣ ನಾಶವಾಗುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಕೋವಿಡ್‌ನಿಂದ ಸಮಸ್ಯೆ ಕಡಿಮೆ’ ಎಂದು ಸಲಹೆ ನೀಡಿದರು.

ವಿ.ವಿ ವ್ಯಾಪ್ತಿಯ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು, ಸಂಶೋಧಕರು, ಉಪನ್ಯಾಸಕರು ಸಂವಾದದಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT