ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಭಿಮಾನಿ ಬದುಕಿಗೆ ಆರ್ಥಿಕ ನೆರವು: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ

ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಭರವಸೆ
Last Updated 13 ಜನವರಿ 2021, 13:50 IST
ಅಕ್ಷರ ಗಾತ್ರ

ಕೋಲಾರ: ‘ಕಾಯಕ ಯೋಜನೆಯ ಆರ್ಥಿಕ ನೆರವು ಪಡೆದು ಸ್ವಂತ ಉದ್ಯಮ ಆರಂಭಿಸಿ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಿ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಕಿವಿಮಾತು ಹೇಳಿದರು.

ಕಾಯಕ ಯೋಜನೆ ಕುರಿತು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಾಗಾರದಲ್ಲಿ ಮಾತನಾಡಿ, ‘ಬ್ಯಾಂಕ್ ಅವಿಭಜಿತ ಕೋಲಾರ ಜಿಲ್ಲೆಯ ಮಹಿಳೆಯರು ಮತ್ತು ಅಬಲರನ್ನು ಉದ್ಯಮಿಗಳಾಗಿಸುವ ಸಂಕಲ್ಪದೊಂದಿಗೆ ಕಾಯಕ ಯೋಜನೆಯನ್ನು ಪರಿಚಯಿಸುತ್ತಿದೆ’ ಎಂದರು.

‘ಸುಧಾಮೂರ್ತಿ ಅವರು ಸಣ್ಣ ಉದ್ಯಮದೊಂದಿಗೆ ಜಾಗತಿಕ ಮಟ್ಟದ ಉದ್ಯಮಿಯಾದರು. ಅಂತಹ ಸಾಧಕರು ಮಹಿಳೆಯರಿಗೆ ಆದರ್ಶವಾಗಬೇಕು. ಎಷ್ಟು ದಿನ ಮತ್ತೊಬ್ಬರ ಬಳಿ ಕೂಲಿ ಕೆಲಸ ಮಾಡುತ್ತೀರಿ? ಸ್ವಂತ ಉದ್ಯಮ ಸ್ಥಾಪಿಸಿ ಆರ್ಥಿಕವಾಗಿ ಸಶಕ್ತರಾಗಿ’ ಎಂದು ಸಲಹೆ ನೀಡಿದರು.

‘10 ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರು ಸೇರಿ ಬೃಹತ್ ಉದ್ಯಮ ಆರಂಭಿಸುವುದಾದರೆ ₹ 1 ಕೋಟಿ ಸಾಲ ಸಿಗಲಿದೆ. ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಜತೆಗೆ ತರಬೇತಿ ನೀಡುತ್ತೇವೆ. ಪೇಪರ್ ಬ್ಯಾಗ್‌, ಬಳೆ ಅಂಗಡಿ, ಬೋಟಿಕ್, ಪಾರ್ಲರ್, ಹೈನೋದ್ಯಮ ಸೇರಿದಂತೆ ಮಹಿಳೆಯರು ಅನುಭವವಿರುವ ಉದ್ಯಮಗಳ ಸ್ಥಾಪನೆಗೆ ಕಾಯಕ ಯೋಜನೆಯಲ್ಲಿ ಸಾಲ ನೀಡಿ ಕೈಹಿಡಿಯುತ್ತೇವೆ’ ಎಂದು ಭರವಸೆ ನೀಡಿದರು.

ಸ್ವಾವಲಂಬಿ ಜೀವನ: ‘ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಡಿಸಿಸಿ ಬ್ಯಾಂಕ್ ಸಿದ್ಧವಿದೆ. ಉದ್ಯಮ ಆಯ್ಕೆ ಮಾಡಿಕೊಳ್ಳಿ. ಹೈನುಗಾರಿಕೆ, ಕುರಿ ಸಾಕಾಣಿಕೆ ಸೇರಿದಂತೆ ಯಾವುದೇ ಉದ್ಯಮವಿರಲಿ ಸ್ವಾವಲಂಬಿ ಜೀವನದ ಆಯ್ಕೆ ನಿಮ್ಮದು. ಕೂಲಿ ಮಾಡಿದ್ದು ಸಾಕು, ಉದ್ಯಮಿಗಳಾಗಿ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ಹೇಳಿದರು.

‘ಸಂಘದ 10 ಮಂದಿ ಸಂಘಟಿತರಾಗಿ ಡಿಸಿಸಿ ಬ್ಯಾಂಕ್‌ನಿಂದ ಈಗಾಗಲೇ ಸಾಲ ಪಡೆದು ಹಪ್ಪಳ, ಸಂಡಿಗೆ, ಜ್ಯೂಸ್, ಕ್ಯಾಂಡಿ, ಸಿರಿಧಾನ್ಯ ಉತ್ಪಾದಿಸುತ್ತಿದ್ದೇವೆ. ಕಾಯಕ ಯೋಜನೆಯಡಿ ಹೆಚ್ಚಿನ ಸಾಲ ಸಿಕ್ಕರೆ ಬೃಹತ್‌ ಉದ್ಯಮ ಸ್ಥಾಪಿಸುತ್ತೇವೆ’ ಎಂದು ಶ್ರೀನಿವಾಸಪುರ ತಾಲ್ಲೂಕಿನ ಗುಂಡಮನತ್ತ ಗ್ರಾಮದ ಗಂಗ ಭವಾನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ಮಾಲಾ ವಿಶ್ವಾಸ ವ್ಯಕ್ತಪಡಿಸಿದರು.

‘ಕೋಲಾರ ನಗರದಲ್ಲಿ ಮಾರುಕಟ್ಟೆ ಸೌಲಭ್ಯಕ್ಕಾಗಿ ಮಳಿಗೆ ಅವಕಾಶ ಕಲ್ಪಿಸಿ’ ಎಂದು ತಾಲ್ಲೂಕಿನ ಅಂಧ್ರಹಳ್ಳಿಯ ಶಾಂತಮ್ಮ ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್‌ನಿಂದ ಸಾಲದ ನೆರವು ಪಡೆದು ಸಣ್ಣ ಪ್ರಮಾಣದಲ್ಲಿ ಉದ್ಯಮ ನಡೆಸುತ್ತಿರುವ ಅನೇಕ ಮಹಿಳೆಯರು ಅನುಭವ ಹಂಚಿಕೊಂಡರು. ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್, ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ರಮೇಶ್, ಅವಿಭಜಿತ ಕೋಲಾರ ಜಿಲ್ಲೆಯ ಆಯ್ಧ ಸ್ವಸಹಾಯ ಗುಂಪುಗಳ ಮಹಿಳೆಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT