ಮಂಗಳವಾರ, ಜನವರಿ 28, 2020
18 °C
ಗ್ರಾ.ಪಂ ಅಧ್ಯಕ್ಷರು– ಪಿಡಿಒಗಳ ಸಭೆಯಲ್ಲಿ ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಹೇಳಿಕೆ

ಜಿಲ್ಲೆಯ ಆಡಳಿತ ವ್ಯವಸ್ಥೆ ಸರಿಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ಪ್ರಾಥಮಿಕ ಹಂತದಿಂದ ಆಡಳಿತ ವ್ಯವಸ್ಥೆ ಸರಿಪಡಿಸಬೇಕಿದೆ. ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಕೆಲಸ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗಳ ಸಭೆಗಳಲ್ಲಿ ಮಾತನಾಡಿ, ‘ಜಿ.ಪಂ ಸದಸ್ಯರಾಗಿ ಆಯ್ಕೆಯಾದ ದಿನದಿಂದ ಏನೂ ಸಾಧನೆ ಮಾಡಲು ಆಗಲಿಲ್ಲ. ಉಳಿದ ಒಂದೂವರೆ ವರ್ಷದ ಅಧಿಕಾರಾವಧಿಯಲ್ಲಿ ಗುರಿ ಸಾಧನೆಗೆ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು’ ಎಂದು ತಿಳಿಸಿದರು.

‘ಪಿಡಿಒಗಳು ಗ್ರಾಮದ ಹಂತದಲ್ಲೇ ಸಮಸ್ಯೆ ಬಗೆಹರಿಸಬೇಕು. ಜನ ಮುಖ್ಯವಾಗಿ ಕುಡಿಯುವ ನೀರು, ಬೀದಿದೀಪ, ಚರಂಡಿ ಸೌಕರ್ಯ ಕೇಳುತ್ತಾರೆ. ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಂಬಂಧ ಒಪ್ಪಿತ ಮದುವೆಯಂತೆ ಇರಬೇಕೆ ಹೊರತು ಪ್ರೇಮ ವಿವಾಹದಂತೆ ಆಗಬಾರದು. ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ’ ಎಂದರು.

‘ತಾಲ್ಲೂಕಿನ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಗುರುತಿಸಿ ಇ–ಖಾತೆ ಮಾಡಬೇಕು. ಜತೆಗೆ ತಂತಿ ಬೇಲಿ ಹಾಕಬೇಕು. ಇ ಖಾತೆಗೆ ಅರ್ಜಿ ಸಲ್ಲಿಸಿರುವ ರೈತರ, ಬಡವರ ಕೆಲಸ ತ್ವರಿತವಾಗಿ ಆಗಬೇಕು. ಎರಡು ತಿಂಗಳೊಳಗೆ ಇ–ಖಾತೆ ಪೂರ್ಣಗೊಳಿಸಬೇಕು’ ಎಂದು ಗಡುವು ನೀಡಿದರು.

‘ತಾಲ್ಲೂಕಿನ ಕೆಲ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿಯುತ್ತಿರುವುದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದೆ. ಬೇರೆ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, ಅಧಿಕಾರಿಗಳು ಶೀಘ್ರವೇ ಪರಿಹರಿಸಬೇಕು’ ಎಂದು ಅಧ್ಯಕ್ಷರು ತಾಕೀತು ಮಾಡಿದರು.

ದೂರು ಬಂದಿವೆ: ‘ಇ–ಖಾತೆ ಮಾಡಿಕೊಡಲು ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷಗಟು ದೂರು ಬಂದಿವೆ. ಈ ಬಗ್ಗೆ ಚರ್ಚಿಸಲು ಸರ್ವೆ ಇಲಾಖೆ ಸಿಬ್ಬಂದಿ ಒಬ್ಬರೂ ಸಭೆಗೆ ಬರುವುದಿಲ್ಲ. ಇ–ಖಾತೆ ಸಮಸ್ಯೆ ಗಮನಕ್ಕೆ ತಂದರೆ ಬಗೆಹರಿಸಲು ಅನುಕೂಲವಾಗುತ್ತದೆ. ವಕ್ಕಲೇರಿ ಜಿ.ಪಂ ಕ್ಷೇತ್ರದ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಬೇಕು’ ಎಂದು ಜಿ.ಪಂ ಸಿ.ಎಸ್‌.ಅರುಣ್‌ಪ್ರಸಾದ್ ತಿಳಿಸಿದರು.

‘ಗ್ರಾ.ಪಂ ವ್ಯಾಪ್ತಿಯಲ್ಲಿ ನೀರು ಬತ್ತಿರುವ ಕೊಳವೆ ಬಾವಿಗಳ ವಿದ್ಯುತ್‌ ಸಂಪರ್ಕಕ್ಕೂ ಬೆಸ್ಕಾಂನವರು ಶುಲ್ಕ ವಿಧಿಸುತ್ತಿದ್ದಾರೆ. ಬಿಲ್‌ ಪಾವತಿ ಒಂದು ದಿನ ತಡವಾದರೆ ಬಡ್ಡಿ ಹಾಕುತ್ತಾರೆ. ಹೀಗಾಗಿ ಗ್ರಾ.ಪಂನ ಶೇ 50ರಷ್ಟು ಅನುದಾನ ವಿದ್ಯುತ್‌ ಬಿಲ್‌ ಪಾವತಿಗೆ ಸರಿ ಹೋಗುತ್ತದೆ. ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಚಾಲ್ತಿಯಲ್ಲಿರುವ ಕೊಳವೆ ಬಾವಿಗಳಿಗೆ ಮಾತ್ರ ವಿದ್ಯುತ್‌ ಬಿಲ್ ಹಾಕುವಂತೆ ಸೂಚಿಸಬೇಕು’ ಎಂದು ನರಸಾಪುರ ಗ್ರಾ.ಪಂ ಪಿಡಿಒ ಮಹೇಶ್‌ಕುಮಾರ್ ಕೋರಿದರು.

‘ನರಸಾಪುರ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ವಾಸವಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕಸ ಉತ್ಪತ್ತಿಯಾಗುತ್ತಿದೆ. ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಕೇಳಿದರೂ ಈವರೆಗೆ ಮಂಜೂರಾಗಿಲ್ಲ’ ಎಂದು ವಿವರಿಸಿದರು.

ನಿರ್ವಹಣೆ ನಿರ್ಲಕ್ಷ್ಯ: ‘ಗ್ರಾಮಗಳಲ್ಲಿ ಯಾವುದೋ ಏಜೆನ್ಸಿಯವರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ. ಈ ಘಟಕಗಳನ್ನು ಏಜೆನ್ಸಿಯವರೇ ನಾಲ್ಕೈದು ವರ್ಷ ನಿರ್ವಹಣೆ ಮಾಡಬೇಕು. ಆದರೆ, ಏಜಿನ್ಸಿಯವರು ಘಟಕಗಳ ನಿರ್ವಹಣೆ ನಿರ್ಲಕ್ಷಿಸಿದ್ದು, ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಜನರಿಗೆ ಘಟಕಗಳ ದುರಸ್ತಿಗೆ ಯಾರನ್ನು ಸಂಪರ್ಕಿಸಬೇಕೆಂದು ಗೊತ್ತಾಗುತ್ತಿಲ್ಲ’ ಎಂದು ಬೆಳ್ಳೂರು ಪಿಡಿಒ ಸಂಪರಾಜ್ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಅಧ್ಯಕ್ಷರ, ‘ನೀರಿನ ಘಟಕಗಳ ನಿರ್ವಹಣೆ ಸಂಬಂಧ ಇಲಾಖೆ ಅಧಿಕಾರಿಗಳ ಹಾಗೂ ಏಜೆನ್ಸಿಯವರ ಸಭೆ ಕರೆದು ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ. ಗ್ರಾ.ಪಂಗಳಲ್ಲಿ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಬೇಕು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಸ್ಥಳೀಯ ಸಂಸ್ಥೆಗಳಿಂದ ಅನುದಾನ ಮೀಸಲಿಡಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಇದಕ್ಕೆ ಪ್ರತಿ ಗ್ರಾ.ಪಂನಿಂದ ₹ 5 ಸಾವಿರ ನೀಡಬೇಕು’ ಎಂದರು.

‘ನರಾಸಪುರದಲ್ಲಿರುವ ನನ್ನ ನಿವೇಶನದಲ್ಲಿ ಖಾಸಗಿ ಕಂಪನಿಯವರು ಮೊಬೈಲ್‌ ಗೋಪುರ (ಟವರ್) ನಿರ್ಮಿಸಿದ್ದಾರೆ. ಅನುಮತಿ ಪಡೆದ ನಿವೇಶನದಲ್ಲಿ ಟವರ್‌ ಹಾಕದೆ ನನ್ನ ನಿವೇಶನದಲ್ಲಿ ಹಾಕಿದ್ದಾರೆ. ಇದಕ್ಕೆ ಗ್ರಾ.ಪಂನಿಂದಲೂ ನಿರಾಕ್ಷೇಪಣಾ ಪತ್ರ ನೀಡಲಾಗಿದೆ. ಈ ವ್ಯತ್ಯಾಸ ಯಾರು ಸರಿಪಡಿಸುತ್ತಾರೆ’ ಎಂದು ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ಕಿಡಿಕಾರಿದರು.

ಜಿ.ಪಂ ಉಪಾಧ್ಯಕ್ಷೆ ಯಶೋದಾ, ಸದಸ್ಯರಾದ ರೂಪಶ್ರೀ, ಉಷಾ, ಮುನಿಲಕ್ಷ್ಮಮ್ಮ, ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ, ಕಾರ್ಯ ನಿರ್ವಹಣಾಧಿಕಾರಿ ಬಾಬು ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು