ಸೋಮವಾರ, ಮೇ 23, 2022
30 °C
ರಸ್ತೆ ನಿರ್ಮಾಣಕ್ಕೂ ಮುನ್ನವೇ ಬಿಲ್‌: ನಕಲಿ ದಾಖಲೆಪತ್ರ ಸೃಷ್ಟಿಸಿ ಅಕ್ರಮ

ಹಗರಣ | ನಕಲಿ ದಾಖಲೆಪತ್ರ ಸೃಷ್ಟಿ: ಕೆಆರ್‌ಐಡಿಎಲ್‌ ಅಧಿಕಾರಿಗಳ ಗೋಲ್‌ಮಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಅಧಿಕಾರಿಗಳು ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ರಸ್ತೆ ನಿರ್ಮಿಸದೆ ನಕಲಿ ದಾಖಲೆಪತ್ರ ಸೃಷ್ಟಿಸಿ ಲಕ್ಷಾಂತರ ರೂಪಾಯಿ ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಂಗಾರಪೇಟೆ ತಾಲ್ಲೂಕಿನ ಐತಾಂಡಹಳ್ಳಿ, ಎಂ-.ಸೊಣ್ಣೂರು ₹ 20 ಲಕ್ಷ ಅಂದಾಜು ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಿಸುವಂತೆ ಕ್ಷೇತ್ರದ ಶಾಸಕರು 2018-19ರಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಗೆ ಅದೇ ಹಣಕಾಸು ವರ್ಷದಲ್ಲಿ ₹ 15 ಲಕ್ಷ ಬಿಡುಗಡೆ ಮಾಡಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಸಂಕೇತ್ ಎಂಬುವರು ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದಿದ್ದರು. ಕೆಆರ್‌ಐಡಿಎಲ್‌ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂಜೂರು ಮಾಡಿದ ಅನುದಾನದಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಿಸಿರುವುದಾಗಿ ಸುಳ್ಳು ದಾಖಲೆಪತ್ರ ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆ. 2019ರ ಅಕ್ಟೋಬರ್‌ನಲ್ಲಿ ಆರಂಭವಾದ ಕಾಮಗಾರಿ 2020ರ ಮಾರ್ಚ್‌ನಲ್ಲಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ದಾಖಲೆಪತ್ರಗಳಲ್ಲಿ ಉಲ್ಲೇಖಿಸಿದ್ದಾರೆ.

₹ 5.37 ಲಕ್ಷ ವೆಚ್ಚದ ಕಾಮಗಾರಿ ಸಾಮಗ್ರಿಗಳನ್ನು ಗುತ್ತಿಗೆದಾರರಿಗೆ ಕೊಡಿಸಲಾಗಿದೆ. ಕಾಮಗಾರಿಗೆ ಬಳಸಿರುವ ಕಚ್ಚಾ ಸಾಮಗ್ರಿಗಳಿಗೆ ₹ 5.74 ಲಕ್ಷ ನೀಡಲಾಗಿದೆ. ಜತೆಗೆ ಕಾಮಗಾರಿಗೆ ಬಂದ ಕಾರ್ಮಿಕರ ಕೂಲಿಗಾಗಿ ₹ 4.32 ಲಕ್ಷ ನೀಡಲಾಗಿದೆ ಎಂದು ಅಧಿಕಾರಿಗಳು ದಾಖಲೆಪತ್ರದಲ್ಲಿ ತಿಳಿಸಿದ್ದಾರೆ.

ಗುಣಮಟ್ಟ ದೃಢೀಕರಣ: ಗುತ್ತಿಗೆದಾರರ ಜತೆ ಶಾಮೀಲಾಗಿರುವ ಅಧಿಕಾರಿಗಳು ವಾಸ್ತವದಲ್ಲಿ ನಿರ್ಮಾಣವೇ ಆಗದ ರಸ್ತೆಯನ್ನು ಪರಿಶೀಲಿಸಿ ಗುಣಮಟ್ಟ ಉತ್ತಮವಾಗಿದೆ ಎಂದು ದೃಢೀಕರಿಸಿ ವರದಿ ನೀಡಿದ್ದಾರೆ.

ಮಾರ್ಚ್ 30ರಂದು ಸ್ಥಳ ಪರಿಶೀಲನೆ ಮಾಡಿದ್ದು, ಕಾಮಗಾರಿ ತೃಪ್ತಿಕರವಾಗಿದೆ ಎಂದು ಕೆಆರ್‌ಐಡಿಎಲ್‌ ಸಹಾಯಕ ಎಂಜಿನಿಯರ್ (ಪ್ರಭಾರ) ವಿಜಯ್‌ಕುಮಾರ್ ದಾಖಲೆಪತ್ರಗಳಲ್ಲಿ ದೃಢೀಕರಿಸಿದ್ದಾರೆ. ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಸಹ ಮಾರ್ಚ್‌ 30ರಂದೇ ಸ್ಥಳ ಪರಿಶೀಲನೆ ಮಾಡಿ ಕಾಮಗಾರಿ ಸಮಾಧಾನಕರವಾಗಿರುವುದಾಗಿ ವರದಿ ನೀಡಿದ್ದಾರೆ.

ಮೂರನೇ ವ್ಯಕ್ತಿ ಪರಿಶೀಲನೆ: ಮೂರನೇ ವ್ಯಕ್ತಿ ಸಂಸ್ಥೆಯಿಂದಲೂ ಕಾಮಗಾರಿ ಗುಣಮಟ್ಟ ಪರಿಶೀಲನೆ ಮಾಡಿಸಿ ₹ 12 ಸಾವಿರ ಪಾವತಿಸಿರುವುದಾಗಿ ಅಧಿಕಾರಿಗಳು ದಾಖಲೆಪತ್ರ ಸೃಷ್ಟಿಸಿದ್ದಾರೆ. ಈ ಸಂಸ್ಥೆಯೂ ಕಾಮಗಾರಿ ಗುಣಮಟ್ಟ ಉತ್ತಮವಾಗಿದೆ ಎಂದು ವರದಿ ನೀಡಿದೆ.

ಅಧಿಕಾರಿಗಳು ₹ 11 ಸಾವಿರ ಖರ್ಚು ಮಾಡಿ ಉದ್ದೇಶಿತ ಕಾಮಗಾರಿಯ ಎರಡೂ ಸ್ಥಳಗಳಲ್ಲಿ ಕಾಮಗಾರಿಯ ಮಾಹಿತಿಯುಳ್ಳ ಫಲಕಗಳನ್ನು ಹಾಕಿಸಿದ್ದಾರೆ. ಆದರೆ, ಗ್ರಾಮಸ್ಥರು ಹಳ್ಳಿಯಲ್ಲಿ ಸಿಮೆಂಟ್‌ ರಸ್ತೆ ನಿರ್ಮಾಣವಾಗುತ್ತದೆ ಎಂಬ ನಿರೀಕ್ಷೆಯಲ್ಲೇ ದಿನ ದೂಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು