ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಶಕ್ಕೆ ಶಾಲೆ ಪಡೆಯಲು ವಿಳಂಬ

ಬ್ರಿಟಿಷರು ಪ್ರಾರಂಭಿಸಿದ ಬಿಜಿಎಂಎಲ್‌ ಶಾಲೆ
Last Updated 20 ಸೆಪ್ಟೆಂಬರ್ 2021, 8:49 IST
ಅಕ್ಷರ ಗಾತ್ರ

ಕೆಜಿಎಫ್: ಚಿನ್ನದ ಗಣಿ ಉದ್ಯಮಕ್ಕೆ ಬಂದು ಕೆಜಿಎಫ್ ನಗರದಲ್ಲಿ ನೆಲೆಸಿದ್ದ ಬ್ರಿಟಿಷರು 1889ರಲ್ಲಿ ತಮ್ಮ ಕುಟುಂಬದ ಸದಸ್ಯರಿಗಾಗಿ ರೀತಿ ರಿವಾಜುಗಳನ್ನು ಕಲಿಸಲು ಯೂರೋಪಿಯನ್ ಶಾಲೆಯನ್ನು ಸ್ಥಾಪಿಸಿದರು. ಅಂದಿನಿಂದಲೂ ಇಲ್ಲಿಯವರೆಗೂ ಕಾರ್ಯನಿರ್ವಹಿಸಿಕೊಂಡು ಬಂದಿರುವ ಸರ್ಕಾರಿ ಅನುದಾನಿತ ಶಾಲೆ ಈಗ ಮುಚ್ಚುವ ಹಂತಕ್ಕೆ ಬಂದಿದೆ.

ಬ್ರಿಟಿಷರು ನೆಲೆಸಿದ್ದ ಪ್ರದೇಶದಲ್ಲಿ ಸ್ಥಾಪಿತವಾಗಿದ್ದ ಈ ಶಾಲೆಗೆ ಭಾರತೀಯರಿಗೆ ಪ್ರವೇಶಾವಕಾಶವನ್ನು ನಿರಾಕರಿಸಲಾಗಿತ್ತು. ಬ್ರಿಟಿಷ್ ಅಧಿಕಾರಿಗಳ ಹೆಸರಿನಲ್ಲಿ ಪ್ರೌಢಶಾಲೆಗೆ ಲಿಂಡ್ಸೆ ಮೆಮೊರಿಯಲ್ ಶಾಲೆಯೆಂದು ಮತ್ತು ಪಾರ್ಕಿನ್ಸನ್ ಮೆಮೊರಿಯಲ್ ಶಾಲೆ ಎಂದು ಪ್ರಾಥಮಿಕ ಶಾಲೆಗೂ ನಾಮಕರಣ ಮಾಡಲಾಗಿತ್ತು. ಸ್ವಾತಂತ್ರ್ಯದ ಸಮಯದಲ್ಲಿ ಭಾರತೀಯ ಅಧಿಕಾರಿಗಳ ಮಕ್ಕಳಿಗೆ ಪ್ರವೇಶ ನೀಡಲಾಯಿತು. ನಂತರದ ದಿನಗಳಲ್ಲಿ ಚಿನ್ನದ ಗಣಿ ಸರ್ಕಾರದ ಆಡಳಿತಕ್ಕೆ ಬಂದ ಮೇಲೆ ಕಾರ್ಮಿಕರ ಮಕ್ಕಳಿಗೂ ಅವಕಾಶ ನೀಡಲಾಯಿತು.

ಪ್ರೊ. ಸುಬ್ರಹ್ಮಣ್ಯ ಎಂಬ ಅಧಿಕಾರಿ ಶಾಲೆಯನ್ನು ಸರ್ಕಾರದ ಒಪ್ಪಿಗೆ ಪಡೆದು ಅನುದಾನಿತ ಶಾಲೆಯಾಗಿ ಪರಿವರ್ತನೆ ಮಾಡಿದರು. ಆ ದಿನಗಳಲ್ಲಿ ಅತಿ ಬೇಡಿಕೆ ಇದ್ದ ಈ ಶಾಲೆ ಬರುಬರುತ್ತಾ ಬಿಜಿಎಂಎಲ್ ಕಂಪನಿಯ ಅನಾದರಕ್ಕೆ ಒಳಗಾಯಿತು. 2001ರಲ್ಲಿ ಬಿಜಿಎಂಎಲ್ ಅಧಿಕೃತವಾಗಿ ಬಾಗಿಲು ಹಾಕಿದ ಮೇಲೆ ಶಾಲೆಯ ಅವನತಿ ಶುರುವಾಯಿತು.

ಈ ಪರಿಸ್ಥಿತಿ ಬರಬಹುದೆಂದು ಊಹಿಸಿದ್ದ ಬಿಜಿಎಂಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಸ್.ಡಿ.ಪ್ರಸಾದ್, ಇಡೀ ಶಾಲೆಯ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು. ಶಾಲೆಯನ್ನು ಸಂಪೂರ್ಣವಾಗಿ ವಹಿಸಿಕೊಳ್ಳಬೇಕು ಎಂದು 2001ರಲ್ಲಿ ಶಿಕ್ಷಣ ಇಲಾಖೆಗೆ
ಪತ್ರ ಬರೆದಿದ್ದರು.

2017ರ ಸೆಪ್ಟಂಬರ್ ತಿಂಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಬಿಜಿಎಂಎಲ್‌ನ ಪ್ರಭಾರಿ ಮುಖ್ಯಸ್ಥರಿಗೆ ಪತ್ರ ಬರೆದು, ಸರ್ಕಾರ ಶಾಲೆಯನ್ನು ಪಡೆದುಕೊಳ್ಳಲು ನಿರ್ಧರಿಸಿದೆ. ಶಾಲೆಯ ಎಲ್ಲ ಸ್ಥಿರ ಮತ್ತು ಚರಾಸ್ತಿಗಳನ್ನು ಯಾವುದೇ ಪರಿಹಾರವಿಲ್ಲದೆ ನೀಡಬೇಕು ಎಂದು ತಿಳಿಸಿದ್ದರು.

ಪುನಃ 2019ರ ಜನವರಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ಬಿಜಿಎಂಎಲ್ ಶಾಲೆಗಳು ಭಾರತ ಸರ್ಕಾರಕ್ಕೆ ಸೇರಿದ ಗಣಿ ಮಂತ್ರಾಲಯಕ್ಕೆ ಸೇರಿದ್ದು, ಗಣಿ ಮುಚ್ಚಿದ ಪರಿಣಾಮವಾಗಿಶಾಲೆಗಳನ್ನು ಸರ್ಕಾರಕ್ಕೆ ವಹಿಸಿಕೊಡಲು ಗಣಿ ಮಂತ್ರಾಲಯ ಮುಂದಾಗಿದೆ.

ಈ ಶಾಲೆಗಳನ್ನು ಯಾವುದೇ ಸಂಘ ಸಂಸ್ಥೆಗಳಾಗಲಿ ಖಾಸಗಿ ವ್ಯಕ್ತಿಗಳಾಗಲಿ, ಒಡೆತನವನ್ನು ಪಡೆಯಲು ಅವಕಾಶ ಇಲ್ಲ ಎಂದು ಆಡಳಿತ ಮಂಡಳಿ ನಿಲುವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಆದರೆ, ಹಳೇ ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ಕೆಲ ಸಂಘಟನೆಗಳು ಈಗ ಶಿಕ್ಷಕರಿಗೆ ಬೆದರಿಕೆ ಹಾಕಿ ತಮ್ಮನ್ನು ಆಡಳಿತ ಮಂಡಳಿಗೆ ಸೇರಿಸಿಕೊಳ್ಳಬೇಕೆಂದು ಬೆದರಿಕೆ ಹಾಕುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಸಂಬಂಧವಾಗಿ ಶಾಲೆಯ ಶಿಕ್ಷಕರು ಈಚೆಗೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಅನ್ಯ ವ್ಯಕ್ತಿಗಳು ಶಾಲೆಯ ಆಡಳಿತ ಮಂಡಳಿ ಎಂದು ಹೇಳಿಕೊಂಡು, ಶಾಲೆಯ ಆಡಳಿತದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಶಾಲೆಯನ್ನು ಸರ್ಕಾರಕ್ಕೆ ವಹಿಸಿಕೊಡಬೇಕೆಂದು ಕೋರಿದ್ದಾರೆ.

ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೂಡ ಸರ್ಕಾರಕ್ಕೆ ಪತ್ರ ಬರೆದು, ಸರ್ಕಾರ ಶಾಲೆಯನ್ನು ವಶಪಡಿಸಿಕೊಳ್ಳಬೇಕೆಂದು ಮತ್ತೊಮ್ಮೆ ಶಿಫಾರಸ್ಸು ಮಾಡಿದ್ದಾರೆ. ಈ ಸಂಬಂಧವಾಗಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಲವಾರು ಬಾರಿ ಲೋಕಾಯುಕ್ತರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕೂಡ 20 ವರ್ಷದಿಂದ ಪತ್ರ ಬರೆಯುತ್ತಲೇ ಇದ್ದಾರೆ. ಈ ಪತ್ರ ವ್ಯವಹಾರ ಇಂದಿಗೂ ನಡೆಯುತ್ತಲೇ ಇದೆ. ಆದರೆ ಇದುವರೆಗೂ ಕಾರ್ಯಗತಗೊಳ್ಳಲೇ ಇಲ್ಲ.

ಈ ಎಲ್ಲದರ ಪರಿಣಾಮವಾಗಿ ಇಂದು ಶಾಲೆಯಲ್ಲಿ ಕೇವಲ ಮೂರು ಶಿಕ್ಷಕರು 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಅಂದರೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಬೋಧಿಸುವ ಶಿಕ್ಷಕರು ಅನಿವಾರ್ಯವಾಗಿ ವಿಜ್ಞಾನ, ಗಣಿತ ಮತ್ತು ಸಮಾಜವನ್ನು ಮಕ್ಕಳಿಗೆ ಕಲಿಸಿಕೊಡುತ್ತಿದ್ದಾರೆ. 143 ವಿದ್ಯಾರ್ಥಿಗಳು ಪಾಠವನ್ನು ಆಲಿಸುತ್ತಿದ್ದಾರೆ. ಕೆಲ ಹಳೇ ವಿದ್ಯಾರ್ಥಿಗಳು ಮತ್ತು ದಾನಿಗಳ ಸಹಕಾರದಿಂದ ಕೆಲಕಾಲ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ತೆಗೆದುಕೊಂಡರೂ, ಅವರಿಗೆ ಈಗ ಸಂಬಳ ನೀಡಲು ಸಾಧ್ಯವಿಲ್ಲದ ಕಾರಣ ನಿಂತಿದೆ.

140 ವಿದ್ಯಾರ್ಥಿಗಳು ಇರುವ ಪ್ರಾಥಮಿಕ ಶಾಲೆಯಲ್ಲಿ ಕೇವಲ ಒಬ್ಬರು ಶಿಕ್ಷಕರು ಇದ್ದಾರೆ. ಅವರು ಮುಂದಿನ ವರ್ಷ ನಿವೃತ್ತಿ ಹೊಂದಿದರೆ, ಶಾಲೆಯಲ್ಲಿ ಖಾಯಂ ಶಿಕ್ಷಕರೇ ಇಲ್ಲವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಶಾಲೆಯನ್ನು ವಹಿಸಿಕೊಳ್ಳಬೇಕು. ಇದರಿಂದಾಗಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಶೇ 98 ರಷ್ಟು ಮಂದಿ ಪರಿಶಿಷ್ಟ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಶಿಕ್ಷಕರು ಹೇಳುತ್ತಾರೆ.

ಕೋವಿಡ್ ಸಂದರ್ಭದಲ್ಲಿ ಆದಾಯ ಇಲ್ಲದ ಪೋಷಕರು ಈಗ ಖಾಸಗಿ ಶಾಲೆಗಳಿಂದ ಈ ಶಾಲೆಗೆ ಸೇರಿಸಲು ಮುಂದೆ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅನುಕೂಲಗಳನ್ನು ಮಾಡಿಕೊಡಬೇಕು ಎಂದು ಶಿಕ್ಷಕ ಮಾಲತೇಶ್ ಹೇಳುತ್ತಾರೆ. ಶಾಲೆಯನ್ನು ಕೂಡಲೇ ಸರ್ಕಾರ ವಹಿಸಿಕೊಂಡರೆ ಗಣಿ ಕಾಲೊನಿಯ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಬಿಜಿಎಂಎಲ್ ಕಾರ್ಮಿಕ ಮುಖಂಡ ಅನ್ವರಸನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಶಿಫಾರಸ್ಸು

ಶಾಲೆಯ ಆಡಳಿತ ಮಂಡಳಿಯಲ್ಲಿ ಅನ್ಯರು ಪ್ರವೇಶ ಮಾಡುವ ಹಾಗಿಲ್ಲ. ಬಿಜಿಎಂಎಲ್ ಸಂಸ್ಥೆ ಸೂಚಿಸಿದ ವ್ಯಕ್ತಿಗಳು ಮಾತ್ರ ಆಡಳಿತ ಮಂಡಳಿಗೆ ಅರ್ಹರಾಗುತ್ತಾರೆ. ಬಿಜಿಎಂಎಲ್ ಮುಚ್ಚಿದ ನಂತರ ಈಗ ಆಡಳಿತ ಮಂಡಳಿ ಯಾರನ್ನೂ ಸೂಚಿಸಿಲ್ಲ. ಕೆಲವು ಸಂಘಟನೆಗಳು ನಾವು ಶಾಲೆಯನ್ನು ನಡೆಸುತ್ತೇವೆ ಎಂದು ಮುಂದೆ ಬಂದಿದ್ದಾರೆ. ಆದರೆ ಅವರಿಗೆ ಬಿಜಿಎಂಎಲ್‌ನಿಂದ ಯಾವುದೇ ಅಧಿಕೃತ ಪತ್ರ ಇಲ್ಲ. ಆದ್ದರಿಂದ ಸರ್ಕಾರಕ್ಕೆ ಪಡೆಯಲು ಶಿಫಾರಸ್ಸು ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಚಂದ್ರಶೇಖರ್ ಹೇಳಿದರು.

ವಿಸ್ತಾರಗೊಳ್ಳಲಿ

‘ಈ ಶಾಲೆ ಮದ್ರಾಸ್ ಮತ್ತು ಬೆಂಗಳೂರು ಶಾಲೆಗಳ ರೀತಿಯಲ್ಲಿ ಉತ್ತಮವಾಗಿದೆ. ಪ್ರತಿ ವರ್ಷ ಶಾಲೆಯ ಪ್ರಗತಿ ವಿಸ್ತಾರಗೊಳ್ಳುತ್ತಾ ಹೋಗಲಿ’. ಈ ಮಾತನ್ನು ಅಂದಿನ ಮೈಸೂರು ಸಂಸ್ಥಾನ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಬಿಜಿಎಂಎಲ್ ಹೈಸ್ಕೂಲಿನ ವೀಕ್ಷಕರ ಪುಸ್ತಕದಲ್ಲಿ 1928 ರಲ್ಲಿ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT