ಮಂಗಳವಾರ, ಜನವರಿ 26, 2021
19 °C
ಮಾಜಿ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ಶಾಸಕ ಶ್ರೀನಿವಾಸಗೌಡ ವಾಗ್ದಾಳಿ

ಗ್ರಾ.ಪಂ ಚುನಾವಣೆ: ಪಾಠ ಕಲಿಸಿದ ಮತದಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವಿಧಾನಸಭೆ ಚುನಾವಣೆಯಲ್ಲಿ 3ನೇ ಸ್ಥಾನ ಪಡೆದಿದ್ದ ವ್ಯಕ್ತಿಗೆ ಕ್ಷೇತ್ರದ ಮತದಾರರು ಗ್ರಾ.ಪಂ ಚುನಾವಣೆಯಲ್ಲೂ ತಕ್ಕ ಪಾಠ ಕಲಿಸಿದ್ದಾರೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅವರು ಮಾಜಿ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಗ್ರಾ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್‌ ಬೆಂಬಲಿತ ಸದಸ್ಯರಿಗೆ ಪಕ್ಷದಿಂದ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ‘ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ ಎಂಬುದಕ್ಕೆ ಹಿಂದಿನ ವಿಧಾನಸಭಾ ಚುನಾವಣಾ ಫಲಿತಾಂಶವೇ ಸಾಕ್ಷಿ. ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯಲ್ಲೂ ಜೆಡಿಎಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ’ ಎಂದರು.

‘ಸದ್ಯದಲ್ಲೇ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಲಿದೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 19 ಗ್ರಾ.ಪಂಗಳಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಪಕ್ಷದ ಬೆಂಬಲಿತರನ್ನು ಬೆಂಬಲಿಸಬೇಕು. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘1985ರಲ್ಲಿ ಜನತಾ ಪರಿವಾರದ ಸರ್ಕಾರ ರಚನೆಯಾದಾಗ ಅಬ್ದುಲ್‌ ನಜೀರ್‌ ಸಾಬ್ ಅವರ ಕನಸಿನಂತೆ ಪಂಚಾಯಿತಿ ವ್ಯವಸ್ಥೆ, ಅಧಿಕಾರ ವಿಕೇಂದ್ರೀಕರಣ ಉದ್ದೇಶದಿಂದ ರಚಿತವಾದ ಪಂಚಾಯಿತಿ ವ್ಯವಸ್ಥೆಗೆ ವಿಶೇಷ ಅಧಿಕಾರವಿದೆ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹೇಳಿದರು.

‘ಶ್ರೀನಿವಾಸಗೌಡರ 44 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕವಿಲ್ಲ. ಹಿಂದಿನ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಅವರನ್ನು ಗೆಲ್ಲಿಸಿದ್ದರಿಂದ ನನಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕಲ್ಪಿಸಿಕೊಟ್ಟರು. ನನಗೆ ರಾಜಕೀಯಕ್ಕೆ ಬರುವ ಯೋಚನೆಯೇ ಇರಲಿಲ್ಲ. ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು’ ಎಂದು ತಿಳಿಸಿದರು.

ಸ್ಪಂದಿಸುತ್ತೇವೆ: ‘ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯಬೇಕು. ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿತ ಸದಸ್ಯರ ಕಷ್ಟ ಸುಖಕ್ಕೆ ನಾವು ಸ್ಪಂದಿಸುತ್ತೇವೆ. ಆಸೆ ಆಮಿಷಗಳಿಗೆ ಒಳಗಾಗದೆ ಪಕ್ಷ ಗಟ್ಟಿಗೊಳಿಸಬೇಕು. ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಬೇಡ’ ಎಂದು ಕಿವಿಮಾತು ಹೇಳಿದರು.

‘ಶಾಸಕ ಶ್ರೀನಿವಾಸಗೌಡರು ಆಲದ ಮರದಂತೆ. ಅವರಿಗೆ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಶಕ್ತಿಯಿದೆ. ಪಕ್ಷದ ಹಿತಕ್ಕಾಗಿ ಗೋವಿಂದರಾಜು ಅವರು ಶಾಸಕರ ಜತೆ ಕೈ ಜೋಡಿಸಬೇಕು’ ಎಂದು ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್ ಮನವಿ ಮಾಡಿದರು.

‘ಗ್ರಾ.ಪಂ ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳನ್ನು ನಿರ್ಲಕ್ಷಿಸದೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಭಿವೃದ್ಧಿ ವಿಚಾರವಾಗಿ ಗ್ರಾಮಗಳಲ್ಲಿ ರಾಜಕೀಯ ಮಾಡಬಾರದು’ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಚೌಡರೆಡ್ಡಿ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಗೋಪಾಲಕೃಷ್ಣ, ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ವಿ.ದಯಾನಂದ್, ಸೋಮಣ್ಣ, ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್‌ಗೌಡ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು