ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಮಾವಿನ ಬೆಳೆ ರಕ್ಷಣೆಗೆ ಮುಂದಾದ ಬೆಳೆಗಾರರು

Published 13 ಜುಲೈ 2023, 14:45 IST
Last Updated 13 ಜುಲೈ 2023, 14:45 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿನ ಸುಗ್ಗಿ ಮುಗಿಯುತ್ತಿದ್ದಂತೆ, ಬೆಳೆಗಾರರು ಮರ ಸವರಿ ಕೊಂಬೆ ತೆಳವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಮರದ ಆರೋಗ್ಯ ರಕ್ಷಣಾ ಕ್ರಮವಾಗಿದೆ.

ಮಾವಿನ ಕೊಂಬೆ ತೆಳವುಗೊಳಿಸಿ, ಮರದ ಎಲ್ಲ ಭಾಗಕ್ಕೆ ಬೆಳಕು ಹಾಗೂ ಗಾಳಿಯಾಡುವಿಕೆ ಅವಕಾಶ ಕಲ್ಪಿಸಿದ್ದಲ್ಲಿ ಫಸಲಿನ ಗುಣಮಟ್ಟ ಹೆಚ್ಚಾಗಲಿದೆ. ಇದರಿಂದ ಹಿಟ್ಟಿನ ತಿಗಣಿ, ಚಿಪ್ಪು ತಿಗಣಿ ಹಾಗೂ ಜಿಗಿ ಹುಳುವಿನ ಬಾಧೆ ನಿಯಂತ್ರಿಸಲು ಸಾಧ್ಯ. ಈ ಕಾರ್ಯಕ್ಕೆ ಪ್ರೂನಿಂಗ್ ಗರಗಸ ಬಳಸುವುದು ಉತ್ತಮ. ಓರೆಯಾಗಿ ಕೊಂಬೆ ಕತ್ತರಿಸುವುದರಿಂದ ಮಳೆ ನೀರು ಸುಲಭವಾಗಿ ಜಾರುತ್ತದೆ. ಕೊಂಬೆ ಕೊಳೆಯುವ ಅಪಾಯ ಇರುವುದಿಲ್ಲ.

ಮರದ ಮಧ್ಯದ ಒಂದರಿಂದ ಎರಡು ಕೊಂಬೆ ತೆಗೆದು ಸೂರ್ಯನ ಕಿರಣಗಳು ಮರದ ಎಲ್ಲ ಭಾಗ ಬೀಳುವಂತೆ ಮಾಡಬೇಕು. ಮರದ ಬದಿಗಳ ದಟ್ಟತೆ ಕಡಿಮೆ ಮಾಡಲು ಬದಿ ರೆಂಬೆಗಳನ್ನು ಕತ್ತರಿಸಬೇಕು. ಕತ್ತರಿಸಲ್ಪಟ್ಟ ಕೊಂಬೆಯ ಜಾಗಕ್ಕೆ ಕಾಪರ್ ಆಕ್ಸಿ ಕ್ಲೋರೈಡ್ 50 ಗ್ರಾಂ ಮತ್ತು ಕ್ಲೋರೋಪೈರಿಪಾಸ್ 5 ಮಿಲಿಯನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಬ್ರಶ್‌ನಲ್ಲಿ ಲೇಪಿಸಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬೈರಾರೆಡ್ಡಿ ಪ್ರಜಾವಾಣಿಗೆ ತಿಳಿಸಿದರು.

‘ಬಾದಾಮಿ ತಳಿ ಮಾವಿನ ಮರಗಳಿಗೆ ಕಾಂಡ ಕೊರಕದ ಹಾವಳಿ ಸಾಮಾನ್ಯ. ಅದರ ನಿಯಂತ್ರಣಕ್ಕೆ ರಂಧ್ರಗಳಲ್ಲಿ ಚೂಪಾದ ತಂತಿ ತೂರಿಸಿ ಒಳಗಿರುವ ಹುಳುವನ್ನು ಕೊಲ್ಲಬೇಕು. ರಂದ್ರದ ಒಳಗೆ ನುವಾನ್ ರಾಸಾಯನಿಕ ಹತ್ತಿಯಲ್ಲಿ ನೆನೆಸಿ ರಂದ್ರದ ಒಳಗೆ ಸೇರಿಸಿ ಹಸಿ ಮಣ್ಣಿನಿಂದ ಮುಚ್ಚಬೇಕು. ಇದು ಪುರಾವರ್ತನೆ ತಡೆಯಲು ಮರದ ಕಾಂಡಕ್ಕೆ ತಕ್ಷಣ ಪೇಸ್ಟ್ ಲೇಪಿಸಬೇಕು. ತಜ್ಞರ ಸಲಹೆ ಪಡೆದು ಪೇಸ್ಟ್ ತಯಾರಿಸಿ, ಗಿಡ ಅಥವಾ ಮರದ ಕಾಂಡಕ್ಕೆ ಮೂರು ಅಡಿ ಎತ್ತರದವರೆಗೆ ಚೆನ್ನಾಗಿ ಲೇಪಿಸಬೇಕು. ಮರಗಳ ಮೇಲೆ ಬೆಳೆಯುವ ಪರಾವಲಂಬಿ ಸಸ್ಯಗಳನ್ನು ಕತ್ತರಿಸಬೇಕು ಎಂದು ಸಲಹೆ ನೀಡಿದರು. 

ಮಾವಿನ ತೋಟಗಳಲ್ಲಿ ಹಣ್ಣಿನ ನೊಣ ಅಥವಾ ಇತರ ಕಾರಣಗಳಿಂದ ಕೊಳೆತು ಬಿದ್ದಿರುವ ಹಣ್ಣು ಮತ್ತು ಅದರ ಅವಶೇಷಗಳನ್ನು ಗುಂಡಿಯಲ್ಲಿ ಹಾಕಿ ಮುಚ್ಚಬೇಕು. ಅದರಿಂದ ಹಣ್ಣಿನ ನೊಣದ ಸಂತತಿ ಕಡಿಮೆಯಾಗುತ್ತದೆ. ತೋಟದಲ್ಲಿ ನೈರ್ಮಲ್ಯ ಕಾಪಾಡಲು ಸಾಧ್ಯವಾಗುತ್ತದೆ. ಮರಗಳ ಆರೋಗ್ಯ ರಕ್ಷಣೆಗೆ ಕಾಂಡದ ಸುತ್ತ ಸುಣ್ಣದ ಪುಡಿ ಹಾಕಬೇಕು ಎಂದು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಶ್ರೀನಿವಾಸನ್ ತಿಳಿಸಿದರು.

ಮಾವಿನ ಕಾಯಿ ಕೊಯ್ಲು ಮುಗಿದ ಮೇಲೆ ಏನೆಲ್ಲ ಕ್ರಮ ಕೈಗೊಂಡರೂ ಕಾಯಿ ಕೊಳೆಯುವುದು ತಪ್ಪಿಲ್ಲ. ಹಾಗಾಗಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ತೋಟಗಳಿಗೆ ಭೇಟಿ ನೀಡಿ ಬೆಳೆಗಾರರಿಗೆ ಫಸಲು ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಬೇಕು. ತೋಟಗಾರಿಕಾ ಇಲಾಖೆ ರಿಯಾಯಿತಿ ದರದಲ್ಲಿ ಪ್ರೂನಿಂಗ್ ಗರಗಸ ಒದಗಿಸಬೇಕು ಎಂದು ತಾಲ್ಲೂಕು ಮಾವು ಬೆಳೆಗಾರರ ಸಂಘದ ಅಧ್ಯಕ್ಷ ರಾಜಾರೆಡ್ಡಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT