ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೆಸರಿನಲ್ಲಿ ಹೋರಾಟ ಮಾಡುತ್ತಿರುವವರು ಡೋಂಗಿಗಳು: ಕುಮಾರಸ್ವಾಮಿ

Last Updated 9 ಡಿಸೆಂಬರ್ 2020, 19:20 IST
ಅಕ್ಷರ ಗಾತ್ರ

ಕೋಲಾರ: ‘ರೈತರ ಹೆಸರಿನಲ್ಲಿ ಹೋರಾಟ ಮಾಡುತ್ತಿರುವವರು ಡೋಂಗಿಗಳು. ಅವರದು ಹೊಟ್ಟೆ ಪಾಡಿನ ರಾಜಕೀಯ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೈತ ಮುಖಂಡರನ್ನು ಕಟುವಾಗಿ ಟೀಕಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಭೂ ಸುಧಾರಣೆ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿರುವ ರೈತ ಮುಖಂಡರು ಮೊದಲು ತಮ್ಮ ಹುಳುಕು ಮುಚ್ಚಿಕೊಳ್ಳಲಿ. ಅವರ ಆಟ ನನ್ನ ಬಳಿ ನಡೆಯಲ್ಲ’ ಎಂದು ಗುಡುಗಿದರು.

‘ರೈತ ಮುಖಂಡರು ನನ್ನ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ಅವರಿಂದ ನಾನು ಪಾಠ ಕಲಿಯಬೇಕಿಲ್ಲ. ದೇವೇಗೌಡರು ಮತ್ತು ನಾನು ರಾಜಕೀಯ ಬಿಟ್ಟು ಹೋಗಬೇಕೆಂದು ಹೇಳಲು ಅವರು ಯಾರು? ಅವರಿಂದ ರಾಜಕೀಯಕ್ಕೆ ಬಂದಿದ್ದೇವಾ? ಆ ಚಿಲ್ಲರೆಗಳಿಗೆ ಉತ್ತರಿಸುವ ಅಗತ್ಯವಿಲ್ಲ’ ಎಂದರು.

ಕಾವೇರಿ ನೀರು ಉಳಿದಿದ್ದು ಯಾರಿಂದ?: ಕಾವೇರಿ ನದಿ ನೀರು ಉಳಿಸಿದ್ದು, 30 ಟಿಎಂಸಿ ಹೆಚ್ಚುವರಿ ನೀರು ಬಂದಿರುವುದು ದೇವೇಗೌಡರ ಹೋರಾಟದ ಫಲ.ರಾಜ್ಯಕ್ಕೆ ಹೆಚ್ಚುವರಿ ನೀರು ಬಂದದ್ದು ರೈತ ಮುಖಂಡರ ಹೋರಾಟದಿಂದಲ್ಲ, ದೇವೇಗೌಡರಿಂದ’ ಎಂದು ಅವರು ಕಿಡಿಕಾರಿದರು.

‘ದೇವೇಗೌಡರು ರೈತರಿಗೆ ಏನು ಅನ್ಯಾಯ ಮಾಡಿದ್ದಾರೆ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ,‘ಅವರೇನೂ ರೈತರಿಗೆ ವಿಷ ಕೊಟ್ಟಿಲ್ಲ’ ಎಂದು ಹೇಳಿದರು.

ರೈತ ವಿರೋಧಿ ಹಣೆಪಟ್ಟಿ ಕಟ್ಟಲು ಪಿತೂರಿ:ಕೆಲ ಸಂಘಟನೆಗಳು ಮತ್ತು ವ್ಯಕ್ತಿಗಳು ಜೆಡಿಎಸ್‌ ಪಕ್ಷಕ್ಕೆ ರೈತ ವಿರೋಧಿ ಎಂಬ ಪಟ್ಟ ಕಟ್ಟಲು ಹೊರಟಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ತಿಂಗಳು ರೈತ ಮುಖಂಡರ ಸಭೆ ನಡೆಸಿ ಸಮಸ್ಯೆಗೆ ಸ್ಪಂದಿಸಿದ್ದೇನೆ. 14 ತಿಂಗಳಲ್ಲಿ ರೈತರ ₹ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆಗ ಯಾವೊಬ್ಬ ರೈತ ಮುಖಂಡನೂ ನನ್ನ ಪರವಾಗಿ ಮಾತನಾಡಲಿಲ್ಲ. ಆದರೆ, ಈಗ ಜೆಡಿಎಸ್‌ ಪಕ್ಷ ರೈತರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಲಾಗುತ್ತಿದೆ’ ಎಂದು ಹರಿಹಾಯ್ದರು.

ಜೆಡಿಎಸ್‌ ರೈತರ ಪರವಾಗಿರುವ ಪಕ್ಷ. ರೈತ ಮುಖಂಡರು ಬೆಂಬಲ ಕೊಡದಿದ್ದರೂ ರೈತರ ಪರವಾಗಿ ಹೋರಾಟ ಮಾಡಿದೆ. ಪಕ್ಷ ಮುಂದೆಯೂ ರೈತರ ಪರವಾಗಿ ಇರುತ್ತದೆ. ಈ ವಿಚಾರವಾಗಿ ರೈತ ಮುಖಂಡರು ಬಹಿರಂಗ ಚರ್ಚೆಗೆ ಬರಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

ಕಾಂಗ್ರೆಸ್‌ ಶಾಲಿಗೆ ಬೆಲೆಯಿಲ್ಲ

‘ಕಾಂಗ್ರೆಸ್ ಮುಖಂಡರಂತೆ ನಾನು ಡಬಲ್ ಗೇಮ್ ರಾಜಕೀಯ ಮಾಡಲ್ಲ. ಮುಖ್ಯಮಂತ್ರಿ ಯಡಿಯೂರಪ್ಪರನ್ನು ಅವರ ಅಧಿಕೃತ ಕಚೇರಿಯಲ್ಲಿ ಭೇಟಿಯಾಗಿದ್ದೇನೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರಂತೆ ಮಧ್ಯ ರಾತ್ರಿ ಗುಟ್ಟಿನಲ್ಲಿ ಭೇಟಿಯಾಗಿಲ್ಲ’ ಎಂದು ಎಚ್‌.ಡಿ. ಕುಮಾರಸ್ವಾಮಿ ಕುಟುಕಿದ್ದಾರೆ.

‘ಕಾಂಗ್ರೆಸ್‌ ಶಾಲಿಗೆ ಈಗ ಬೆಲೆಯಿಲ್ಲ. ಹೀಗಾಗಿ ಕಾಂಗ್ರೆಸ್‌ ಮುಖಂಡರು ಪಕ್ಷದ ಶಾಲು ತೆಗೆದಿಟ್ಟು ರೈತರ ಹಸಿರು ಶಾಲು ಹಾಕಿಕೊಂಡಿದ್ದಾರೆ. ಜೆಡಿಎಸ್‌ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಹೊಂದಾಣಿಕೆ ರಾಜಕೀಯದ ಅಗತ್ಯವೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT