ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸಕ್ಕೆ ಬೆಳಕು ಚೆಲ್ಲಿದ ಮಾಸ್ತರ್‌ ಕೆ.ಆರ್.ನರಸಿಂಹನ್

Last Updated 6 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮುಳಬಾಗಿಲು: ಸಾಮಾನ್ಯವಾಗಿ ಅಧ್ಯಾಪಕರಾದವರು ತಾವು ಆಯಿತು ತಮ್ಮ ಪಾಠವಾಯಿತು ಎಂದು ಇರುವವರೆ ಹೆಚ್ಚು. ನಿವೃತ್ತಿ ನಂತರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಇರುವವರೇ ಜಾಸ್ತಿ. ಆದರೆ ಇದಕ್ಕೆ ಅಪವಾದ ಪ್ರೊ.ಕೆ.ಆರ್.ನರಸಿಂಹನ್.

ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದವರಾದ ನರಸಿಂಹನ್‌. ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ 1971ರಲ್ಲಿ ಸೇವೆಗೆ ಸೇರಿದರು. ಅಧ್ಯಾಪನದ ಜತೆಗೆ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲದಿಂದ ಶಿಲಾ ಶಾಸನಗಳ ಅಧ್ಯಯನಕ್ಕೆ ಕೈ ಹಾಕಿದರು.

ಶಿಲಾಶಾಸನಗಳ ಅಧ್ಯಯನಕ್ಕಾಗಿಯೆ ತಮಿಳು, ತೆಲುಗು, ಹಳೆಗನ್ನಡ ಕಲಿತು ಅವಿಭಜಿತ ಕೋಲಾರ ಜಿಲ್ಲೆಯ ಹಲವಾರು ದೇವಾಲಯಗಳ ಕುರಿತು ಸಂಶೋಧನೆ ನಡೆಸಿದರು.

ಶಿಲಾಶಾಸನ ಅಭ್ಯಸಿಸುವುದಕ್ಕೆ ಮುಂಚೆ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ದೊರಕುತ್ತಿದ್ದ ಜಿಲ್ಲೆಯ ಶಿಲಾ ಶಾಸನಗಳ ಕುರಿತಾದ ಪೂರ್ವ ಅಧ್ಯಯನಗಳನ್ನು ಪರಿಶೀಲಿಸಿ ಮುಂದಿನ ತಯಾರಿಗೆ ಸಜ್ಜಾಗುತ್ತಿದ್ದೆ. ಹೀಗಾಗಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಶಿಲಾಶಾಸನಗಳನ್ನು ಪುಸ್ತಕಗಳಲ್ಲಿ ದಾಖಲಿಸುವುದರೊಂದಿಗೆ ಅದರ ಮಹತ್ವದ ಬಗ್ಗೆ ಸಂಶೋಧನೆ ನಡೆಸಲು ಸಾಧ್ಯವಾಯಿತು ಎನ್ನುತ್ತಾರೆ ನರಸಿಂಹನ್‌.

ಅವರು ಅವಿಭಜಿತ ಕೋಲಾರ ಜಿಲ್ಲೆಯ ಶೇಕಡ 90 ರಷ್ಟು ಶಾಸನಗಳನ್ನು ಅಭ್ಯಸಿಸಿ ಅವುಗಳಿಗೆ ಪುಸ್ತಕ ರೂಪ ಕೊಟ್ಟಿದ್ದಾರೆ. ಕೋಲಾರ ಜಿಲ್ಲೆಯ ಸುತ್ತಮುತ್ತಲಿನ ದೇವಾಲಯ, ವೆಂಕಟೇಶ್ವರಸ್ವಾಮಿ ದೇವಾಲಯ, ಕುರುಡುಮಲೆ ಗಣಪತಿ ದೇವಾಲಯಗಳ ಕುರಿತು ಈ ಹಿಂದೆ ದಾಖಲಾಗದ ಮಹತ್ವದ ವಿಷಯಗಳು ದಾಖಲಿಸಿದ್ದಾರೆ.

5 ಸ್ವಂತ ಕೃತಿ, 4 ಸಂಪಾದಿತ ಕೃತಿ ಪ್ರಕಟಿಸಿದ್ದಾರೆ ಹಾಗೂ ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಸಾಧನೆಗೆ ಅವರನ್ನು ಹುಡುಕಿಕೊಂಡು ಹಲವಾರು ಪ್ರಶಸ್ತಿಗಳು ಬಂದಿದೆ. ಅವುಗಳಲ್ಲಿ ಮುಖ್ಯವಾದುದು ಹಂಸ ಸನ್ಮಾನ್, ಗಾಯತ್ರಿ ಪುರಸ್ಕಾರ, ಜಿಲ್ಲಾ ಸಾಹಿತ್ಯ ಸಮ್ಮೇಳನ ಪುರಸ್ಕಾರ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಬಂದಿವೆ.

ಸದಾ ಕಾಲ ತಮ್ಮ ಗುರುಗಳಾದ ಚಂದ್ರಶೇಖರ ಕಂಬಾರರನ್ನು ನೆನೆಯುತ್ತಾರೆ. ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದ ಜಯಲಕ್ಷ್ಮಮ್ಮಣ್ಣಿ ಕನ್ನಡ ಸೇವೆ ಮಾಡಲು ತಮಗೆ ಸ್ಪೂರ್ತಿ ಎನ್ನುತ್ತಾರೆ 70 ಹರೆಯದ ನರಸಿಂಹನ್.

ಅಧ್ಯಯನದಲ್ಲಿ ದಾಖಲು

ಬಿ.ಎಲ್.ರೈಸ್‌ ತಮ್ಮ ಅಧ್ಯಯನದ ವೇಳೆ ಕೈಬಿಟ್ಟ ಹಲವಾರು ಶಿಲಾಶಾಸನಗಳನ್ನು ಇವರು ತಮ್ಮ ಅಧ್ಯಯನದಲ್ಲಿ ದಾಖಲಿಸಿದ್ದಾರೆ. ಉದಾಹರಣೆಗೆ ಮುಳಬಾಗಿಲು ಬೆಟ್ಟದ ತಪ್ಪಲಿನ ವೇಣುಗೋಪಾಲಸ್ವಾಮಿ ದೇವಾಲಯದ ಕುರಿತು ಎಲ್ಲೂ ದಾಖಲಾಗಿರಲಿಲ್ಲ. ನರಸಿಂಹನ್‌ ಸತತ ಪರಿಶ್ರಮದಿಂದ ಈ ದೇವಾಲಯ ಕುರಿತಾದ ಶಿಲಾಶಾಸನವನ್ನು ತಾಯಲೂರು ಬಳಿಯ ಅಗರಂ ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದ ಬಳಿ ಹುಡುಕಿ ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT