ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾದೇಶ ಗೌರವಿಸುತ್ತೇನೆ: ಮುನಿಯಪ್ಪ

Last Updated 23 ಮೇ 2019, 16:26 IST
ಅಕ್ಷರ ಗಾತ್ರ

ಕೋಲಾರ: ‘ಚುನಾವಣೆಯಲ್ಲಿ ಸೋಲು -ಗೆಲುವು ಸಹಜ. ಜನಾದೇಶ ಗೌರವಿಸುತ್ತೇನೆ. ಆದರೆ, ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದೋಷದ ಬಗ್ಗೆ ಇರುವ ಆರೋಪ ಕುರಿತು ಕೇಂದ್ರ ಚುನಾವಣಾ ಆಯೋಗವು ಸಮಗ್ರ ತನಿಖೆ ನಡೆಸಬೇಕು’ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದರು.

ಫಲಿತಾಂಶ ಘೋಷಣೆ ಬಳಿಕ ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜನ ಒಂದೇ ಪಕ್ಷಕ್ಕೆ ಮತ ಹಾಕುತ್ತಾರೆ ಎಂದರೆ ನಂಬುವುದು ಹೇಗೆ? ಇವಿಎಂಗಳೆಂದರೆ ಮೋದಿ ಮ್ಯಾಜಿಕ್ ಎಂಬ ಅನುಮಾನವಿದ್ದು, ಈ ಸಂಗತಿಯನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತಂದು ತನಿಖೆಗೆ ಆಗ್ರಹಿಸುತ್ತೇವೆ’ ಎಂದರು.

‘ಈಗಾಗಲೇ ದೇಶದ 21 ವಿರೋಧ ಪಕ್ಷಗಳ ಮುಖಂಡರು ಇವಿಎಂ ದೋಷದ ಕುರಿತು ದೂರು ಕೊಟ್ಟಿದ್ದು, ಇದೀಗ ಫಲಿತಾಂಶ ಘೋಷಣೆಯಾಗಿರುವುದರಿಂದ ಆಯೋಗವು ತನಿಖೆಗೆ ಒತ್ತು ನೀಡಬೇಕು’ ಎಂದು ಮನವಿ ಮಾಡಿದರು.

‘ಕೋಲಾರ ಕ್ಷೇತ್ರದಲ್ಲಿ ನನ್ನ ಕೈಲಾದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನಗೆ ಮತ ಹಾಕಿದವರು ಹೆದರಬೇಕಿಲ್ಲ. ನಾನು ಸದಾ ಅವರೊಂದಿಗೆ ಇರುತ್ತೇನೆ. ಮುಸ್ಲಿಂ ಸಮುದಾಯದವರು ನನಗೆ ಒಟ್ಟಾಗಿ ಮತ ನೀಡಿದ್ದು, ಅವರ ಹಿತ ಕಾಯಲು ಬದ್ಧನಾಗಿದ್ದೇನೆ’ ಎಂದು ಭರವಸೆ ನೀಡಿದರು.

‘ಕಾಂಗ್ರೆಸ್, ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪಕ್ಷ ಸಂಘಟನೆ ಮುಂದುವರಿಸುತ್ತೇನೆ. ಇಡೀ ದೇಶದಲ್ಲಿ ಮೋದಿ ಪರ ವಾತಾವರಣವಿದೆ. ಕೋಲಾರ ಕ್ಷೇತ್ರದಲ್ಲೂ ಮೋದಿ ಗಾಳಿಯೇ ಬೀಸಿದೆ. ಬಿಜೆಪಿ ಅಭ್ಯರ್ಥಿಮುನಿಸ್ವಾಮಿ ಅವರಿಗೆ ಕೆಲಸ ಮಾಡಲು ಜನ ಅವಕಾಶ ಕೊಟ್ಟಿದ್ದಾರೆ. ಅವರು ಮಾಡುವ ಕೆಲಸ ನೋಡೋಣ’ ಎಂದು ತಿಳಿಸಿದರು.

‘ಕ್ಷೇತ್ರದಲ್ಲಿ ನನ್ನ ವಿರುದ್ಧ ಕೆಲಸ ಮಾಡಿದ ಸ್ವಪಕ್ಷೀಯರ ಬಗ್ಗೆ ಈಗ ಮಾತನಾಡುವುದಿಲ್ಲ. ವ್ಯವಸ್ಥೆಯಲ್ಲಿ ಇದೆಲ್ಲಾ ಮಾಮೂಲಿ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತೇನೆ’ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT