ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ ನವೀಕರಣ ಕಾಮಗಾರಿ ಕಳಪೆ

ಅಧಿಕಾರಿಗಳಿಗೆ ಜಿ.ಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್‌ ತರಾಟೆ
Last Updated 26 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಕೋಲಾರ: ನಗರದ ನಚಿಕೇತ ವಿದ್ಯಾರ್ಥಿನಿಲಯಕ್ಕೆ ಬುಧವಾರ ದಿಢೀರ್‌ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್‌ ಹಾಸ್ಟೆಲ್‌ನ ನವೀಕರಣ ಕಾಮಗಾರಿ ಪರಿಶೀಲಿಸಿ ಗುಣಮಟ್ಟ ಕಳಪೆಯಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ನಚಿಕೇತ ಹಾಸ್ಟೆಲ್‌ನ ನವೀಕರಣ ಕಾಮಗಾರಿಗೆ ₹ 1 ಕೋಟಿ ಬಿಡುಗಡೆಯಾಗಿದೆ. ಆದರೆ, ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಅಧಿಕಾರಿಗಳು ಕಾಮಗಾರಿ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಾಸ್ಟೆಲ್‌ ಮೇಲ್ಚಾವಣಿ ಕಿತ್ತು ಹೋಗಿದ್ದು, ಇದನ್ನು ಸರಿಪಡಿಸದೆ ಬಣ್ಣ ಬಳಿಯಲಾಗಿದೆ. ಬಿರುಕು ಬಿಟ್ಟಿರುವ ಗೋಡೆಗಳು ಯಾವುದೇ ಕ್ಷಣದಲ್ಲಿ ಬೀಳುವಂತಿವೆ. ಕಿಟಕಿ ಬಾಗಿಲುಗಳಿಗೆ ನೆಪ ಮಾತ್ರಕ್ಕೆ ಬಣ್ಣ ಬಳಿದು ತೇಪೆ ಹಾಕಲಾಗಿದೆ. ನಾಮಕಾವಸ್ಥೆಗೆ ಹಾಸ್ಟೆಲ್ ನವೀಕರಣಗೊಳಿಸಿ ಜನರ ತೆರಿಗೆ ಹಣ ದುರ್ಬಳಕೆ ಮಾಡುತ್ತಿದ್ದೀರಿ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾಡಿ ಹಣ ಖರ್ಚಾಗಿದೆ ಎಂದು ಲೆಕ್ಕ ತೋರಿಸುತ್ತಿದ್ದಾರೆ. ಗುತ್ತಿಗೆದಾರರ ಜತೆ ಶಾಮೀಲಾಗಿರುವ ಅಧಿಕಾರಿಗಳಿಗೆ ಅಕ್ರಮದ ಸಂಗತಿ ಗೊತ್ತಿದ್ದರೂ ಮೌನವಾಗಿದ್ದಾರೆ. ಬಾಕಿ ಕಾಮಗಾರಿಗಳನ್ನು ಸಮರ್ಪಕವಾಗಿ ಮಾಡಬೇಕು’ ಎಂದು ಎಚ್ಚರಿಕೆ ನೀಡಿದರು.

ಕಪ್ಪುಪಟ್ಟಿಗೆ ಸೇರಿಸಿ: ಕಾಮಗಾರಿ ಗುಣಮಟ್ಟ ಕಳಪೆಯಾಗಿರುವ ಸಂಬಂಧ ವಿವರಣೆ ನೀಡಲು ತಡಬಡಾಯಿಸಿದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ‘ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ. ಮುಂದೆ ಅವರಿಗೆ ಯಾವುದೇ ಕಾಮಗಾರಿಯ ಟೆಂಡರ್‌ ಕೊಡಬಾರದು. ಹಾಸ್ಟೆಲ್‌ ಆವರಣದಲ್ಲಿ ಕಸ ಹಾಕುತ್ತಿರುವ ಅಕ್ಕಪಕ್ಕದ ಅಂಗಡಿಗಳ ಮಾಲೀಕರಿಗೆ ಖಡಕ್‌ ಎಚ್ಚರಿಕೆ ನೀಡಿ’ ಎಂದು ಸೂಚಿಸಿದರು.‌

‘ನಚಿಕೇತ ವಿದ್ಯಾರ್ಥಿನಿಲಯವು ಜಿಲ್ಲೆಯ ಹೆಮ್ಮೆಯ ಹಾಸ್ಟೆಲ್‌ ಆಗಿದೆ. ಇಲ್ಲಿ ಓದಿದ ಅನೇಕರು ದೊಡ್ಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಾಗಿದ್ದಾರೆ. ಸಾವಿರಾರು ವಿಧ್ಯಾರ್ಥಿಗಳು ಈ ಹಾಸ್ಟೆಲ್‌ನಿಂದ ಭವಿಷ್ಯ ರೂಪಿಸಿಕೊಂಡಿದ್ದಾರೆ. ಹಾಸ್ಟೆಲ್‌ ನವೀಕರಣ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ’ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಾಲಾಜಿ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಬೀರಲಿಂಗಪ್ಪ, ಕಿರಿಯ ಎಂಜಿನಿಯರ್ ನಾಗರಾಜ್, ಗುತ್ತಿಗೆದಾರ ಏಕಾಂಬರಯ್ಯ, ಹಾಸ್ಟೆಲ್ ವಾರ್ಡನ್‌ ರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT