ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ಗ್ಯಾರಂಟಿ ವಿರೋಧಿಯಲ್ಲ: ಆರ್.ಅಶೋಕ

Published 11 ಏಪ್ರಿಲ್ 2024, 16:05 IST
Last Updated 11 ಏಪ್ರಿಲ್ 2024, 16:05 IST
ಅಕ್ಷರ ಗಾತ್ರ

ಕೋಲಾರ: ‘ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂಬುದಾಗಿ ಈಗಾಗಲೇ ಘೋಷಣೆ ಮಾಡಿದ್ದು, ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಸುತ್ತಿದ್ದೇವೆ. ಕಾಂಗ್ರೆಸ್ಸಿನವರಿಗೆ ನಾಯಕತ್ವದ ಕೊರತೆಯಿದ್ದು ತಾಕತ್ತು ಇದ್ದರೆ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸವಾಲು ಹಾಕಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಲೋಕಸಭೆ ಚುನಾವಣೆಯು ದೇಶದ ಆಗುಹೋಗು, ಅಭಿವೃದ್ಧಿ, ದೇಶ ಕಾಯುವ ಕಾವಲುಗಾರ ಯಾರಾಗಬೇಕು ಎಂಬ ವಿಚಾರದಲ್ಲಿ ನಡೆಯುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್‍ ಗಾಂಧಿ, ಸೋನಿಯಾ ಗಾಂಧಿ ಎಲ್ಲಿದ್ದಾರೆಂದು ಹುಡುಕುವ ಪರಿಸ್ಥಿತಿ ಬಂದಿದೆ. ನಾಯಕತ್ವ ಇಲ್ಲವೆಂದು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ’ ಎಂದು ಟೀಕಾ ಪ್ರಹಾರ ನಡೆಸಿದರು.

‘ಬಿಜೆಪಿ ಸರ್ಕಾರದ 10 ವರ್ಷಗಳ ಸಾಧನೆ ಏನೆಂದು ನಾವು ಹೇಳುತ್ತಿದ್ದೇವೆ. ಆದರೆ, ಯುಪಿಎ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಬಗ್ಗೆ ಚಕಾರವೆತ್ತುತ್ತಿಲ್ಲ. ದೇಶದ ಭವಿಷ್ಯ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮತ ಹಾಕಬೇಕು. ಕಾಂಗ್ರೆಸ್‍ಗೆ ಮತ ಹಾಕುವುದು ಭ್ರಷ್ಟಾಚಾರಕ್ಕೆ ಸಮಾನ. ಪಾತಾಳದಿಂದ ಆಕಾಶದವರೆಗೆ ಭ್ರಷ್ಟಾಚಾರ ತುಂಬಿಕೊಂಡಿದೆ. ಅವರ ಪಕ್ಷದ ಅನೇಕರು ಈಗಾಗಲೇ ಜೈಲಿನಲ್ಲಿದ್ದಾರೆ, ಇನ್ನು ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆ’ ಎಂದು ದೂರಿದರು.

‘ಕಾಂಗ್ರೆಸ್‍ಗೆ ಮತ ಹಾಕಿದರೆ ದೇಶದ ಭದ್ರತೆಗೆ ಅಪಾಯ ಸಾಧ್ಯತೆ ಇದೆ. ಕಾಶ್ಮೀರ ತಮ್ಮದೆಂದು ಒಪ್ಪಿಕೊಳ್ಳುವುದೇ ಇಲ್ಲ. ಗಡಿಯಲ್ಲಿ ಯೋಧರಿಗೆ ಅವರು ಪೂರ್ಣ ಅಧಿಕಾರ ಕೊಟ್ಟಿರಲಿಲ್ಲ. ಪ್ರತಿದಿನ ಪಾಕಿಸ್ತಾನದ ಹಾವಳಿ ಇರುತ್ತಿತ್ತು, ಮೋದಿ ಬಂದ ಬಳಿಕ ನಿಂತು ಹೋಗಿದೆ. ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಜಿಂದಾಬಾದ್ ನೋಡಿದ್ದೇವೆ’ ಎಂದು ವಾಗ್ದಾಳಿ ನಡೆಸಿದರು.

‘ಕೋಲಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮನೆಯೊಂದು ಎರಡು ಬಾಗಿಲು ಆಗಿರುವುದು ಜಗಜ್ಜಾಹೀರು. ಕೆ.ಆರ್‌.ರಮೇಶ್‍ ಕುಮಾರ್ ಹಾಗೂ ಕೆ.ಎಚ್.ಮುನಿಯಪ್ಪರ ನಡುವೆ ಅಲ್ಲಲ್ಲಿ ಸಿದ್ದರಾಮಯ್ಯರ ಗುಂಪೂ ಕಾಣುತ್ತಿದೆ. ಎರಡೂ ಬಣ ಹಳಿ ತಪ್ಪಿದ್ದು, ಅಭ್ಯರ್ಥಿಯಾಗಿ ಹೊರಗಿನ ವ್ಯಕ್ತಿ ಮೂರನೇ ಬಾಗಿಲಿಂದ ಬಂದಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಈಗಾಗಲೇ ರಮೇಶ್ ಕುಮಾರ್ ಕಾಂಗ್ರೆಸ್‌ನವರಿಗೆ ಕಿವಿಮಾತು ಹೇಳಿದ್ದಾರೆ. ಮೂರು ತಲೆಮಾರಿಗಾಗುವಷ್ಟು ಲೂಟಿ ಮಾಡಿದ್ದೀರಿ, ಇನ್ನಾದರೂ ಕಾಂಗ್ರೆಸ್ ಕೆಲಸ ಮಾಡಿ ಋಣ ತೀರಿಸಿ ಎಂದಿದ್ದಾರೆ. ಈ ಎಲ್ಲ ಅಂಶಗಳನ್ನು ಮತದಾರರು ಪರಿಗಣಿಸಬೇಕು’ ಎಂದರು.

‘ರಾಜ್ಯದಲ್ಲಿ ಬರಗಾಲದಿಂದಾಗಿ ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಈ ಭ್ರಷ್ಟ, ನಾಲಾಯಕ್ ಸರ್ಕಾರ ಒಂದೂ ಗೋಶಾಲೆ ತೆರೆದಿಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸದೆ ಮಜಾ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿದೆ’ ಎಂದು ಆರೋಪಿಸಿದರು.

‘ಕೃಷ್ಣ ಬೈರೇಗೌಡರು ಸವಾಲು ಹಾಕುವುದರಲ್ಲಿ ಪರಿಣತರು. ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕರಿದ್ದಾರೆ. ಒಂದು ದಿನವೂ ಪ್ರಶ್ನೆ ಮಾಡಿಲ್ಲ. ರಾಜ್ಯಸಭಾ ಸದಸ್ಯರು, ಸಂಸದರು ಕಡಲೆಕಾಯಿ ತಿನ್ನುತ್ತಿದ್ದರಾ’ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಜೆಡಿಎಸ್‌ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ವರ್ತೂರು ಪ್ರಕಾಶ್, ವೈ.ಸಂಪಂಗಿ, ಮಂಜುನಾಥ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಓಂಶಕ್ತಿ ಚಲಪತಿ, ಬಿ.ವಿ.ಮಹೇಶ್, ರಾಜು, ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ, ಮಾಧ್ಯಮ ಪ್ರಮುಖ್ ಪ್ರವೀಣ್ ಗೌಡ ಇದ್ದರು.

‘ಗ್ಯಾರಂಟಿ ವಿರೋಧಿಯಲ್ಲ’
ನಾನು ಗ್ಯಾರಂಟಿ ವಿರೋಧಿಯಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಒಂದು ಕಿ.ಮೀ.ನಷ್ಟೂ ರಸ್ತೆ ಅಭಿವೃದ್ಧಿ ಮಾಡಿಲ್ಲ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿಲ್ಲ. ರಾಜ್ಯ ಸರ್ಕಾರ ದಿವಾಳಿಯಾಗಿದೆ. ಇನ್ನು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗ್ಯಾರಂಟಿ ಘೋಷಿಸಿ ₹ 1 ಲಕ್ಷ ಕೊಡುವುದಾಗಿ ಹೇಳಿದ್ದಾರೆ 100 ಕೋಟಿ ಜನರಿಗೆ ನೀಡಲು ಸಾಧ್ಯವೇ ಎಂದು ಅಶೋಕ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT