ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಹೆಚ್ಚಿಸಿದರೆ ಮುಲಾಜಿಲ್ಲದೆ ಶಿಸ್ತುಕ್ರಮ

ಸಭೆಯಲ್ಲಿ ವರ್ತಕರಿಗೆ ಉಪ ವಿಭಾಗಾಧಿಕಾರಿ ಸೋಮಶೇಖರ್ ಖಡಕ್‌ ಎಚ್ಚರಿಕೆ
Last Updated 31 ಮಾರ್ಚ್ 2020, 13:13 IST
ಅಕ್ಷರ ಗಾತ್ರ

ಕೋಲಾರ: ‘ವರ್ತಕರು ಕೊರೊನಾ ಸೋಂಕಿನ ಭೀತಿಯನ್ನೇ ಬಂಡವಾಳವಾಗಿಸಿಕೊಂಡು ದಿನಸಿ ಪದಾರ್ಥಗಳ ಬೆಲೆ ಹೆಚ್ಚಿಸಿದರೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಉಪ ವಿಭಾಗಾಧಿಕಾರಿ ಸೋಮಶೇಖರ್ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಮಂಗಳವಾರ ನಡೆದ ದಿನಸಿ ಅಂಗಡಿ ಮಾಲೀಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕೆಲ ವರ್ತಕರು ಪರಿಸ್ಥಿತಿಯ ಲಾಭ ಪಡೆದು ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದ್ದಾರೆ. ಇದು ಸರಿಯಲ್ಲ. ಪರಿಸ್ಥಿತಿಯ ಗಂಭೀರತೆ ಅರಿತು ಮಾನವೀಯ ದೃಷ್ಟಿಯಿಂದ ವ್ಯಾಪಾರ ಮಾಡಬೇಕು’ ಎಂದು ಸೂಚಿಸಿದರು.

‘ಗ್ರಾಹಕರನ್ನು ದೇವರಂತೆ ಭಾವಿಸಬೇಕು. ಕೊರೊನಾ ಸೋಂಕು ತಡೆಗಟ್ಟುವ ಕಾರಣಕ್ಕೆ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ದಿಗ್ಬಂಧನ ಘೋಷಿಸಿದೆ. ಈ ಸಂಗತಿ ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ, ಕೆಲ ವ್ಯಕ್ತಿಗಳು ವಿನಾಕಾರಣ ರಸ್ತೆಗಳಲ್ಲಿ ಓಡಾಡುತ್ತಿರುತ್ತಾರೆ. ಅನಗತ್ಯವಾಗಿ ಮನೆಯಿಂದ ಹೊರ ಬಂದು ವಾಹನಗಳಲ್ಲಿ ಸಂಚರಿಸುತ್ತಾರೆ. ಜನ ಹೀಗೆ ವರ್ತಿಸಿದರೆ ದಿಗ್ಬಂಧನಕ್ಕೆ ಅರ್ಥವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಗತ್ಯ ವಸ್ತುಗಳಿಗೆ ಬೇಡಿಕೆ ಹೆಚ್ಚಿದಂತೆ ವರ್ತಕರು ಅವುಗಳ ಬೆಲೆ ಹೆಚ್ಚಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರು ಬಂದಿವೆ. ವಸ್ತುಗಳ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಪಡೆದರೆ ಅಪರಾಧವೆಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅಂತಹ ವರ್ತಕರ ವಾಣಿಜ್ಯ ಪರವಾನಗಿ ರದ್ದುಪಡಿಸುತ್ತೇವೆ. ಜನ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರನ್ನು ಶೋಷಿಸಬಾರದು’ ಎಂದು ಸೂಚಿಸಿದರು.

ಮನೆಗೆ ತಲುಪಿಸಿ: ‘ವರ್ತಕರು ಜನರಿಗೆ ಅಗತ್ಯವಿರುವ ದಿನಬಳಕೆ ವಸ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಬೇಕು. ಗ್ರಾಹಕರು ಅಂಗಡಿಗಳಿಗೆ ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಬೇಕು. ಪ್ರತಿ ಅಂಗಡಿಯಲ್ಲಿ ಸ್ಯಾನಿಟೈಸರ್ ಸೌಲಭ್ಯ ಇರಬೇಕು. ಮುಖಗವಸು ಧರಿಸದೆ ಬರುವ ಗ್ರಾಹಕರಿಗೆ ದಿನಸಿ ಪದಾರ್ಧ ನೀಡಬೇಡಿ’ ಎಂದು ಹೇಳಿದರು.

‘ಜಿಲ್ಲಾ ಕೇಂದ್ರದ ವಿವಿಧ ವಾರ್ಡ್‌ಗಳಲ್ಲಿ ಹಣ್ಣು, ತರಕಾರಿ, ಹೂವು ಹಾಗೂ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡಲು ವ್ಯಾಪಾರಸ್ಥರಿಗೆ ನಗರಸಭೆಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.

ಕೃತಕ ಅಭಾವ: ‘ವರ್ತಕರು ಹಣ್ಣು, ತರಕಾರಿಗಳ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಮಾಂಸವನ್ನು ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆ, ಕ್ಲಿನಿಕ್‌ ಹಾಗೂ ನರ್ಸಿಂಗ್ ಹೋಂಗಳನ್ನು ವಿನಾಕಾರಣ ಮುಚ್ಚಲಾಗಿದೆ. ಇದರಿಂದ ಜನರಿಗೆ ಆರೋಗ್ಯ ಸೇವೆ ಸಿಗುತ್ತಿಲ್ಲ’ ಎಂದು ನಗರಸಭೆ ಸದಸ್ಯ ಎನ್.ಅಂಬರೀಶ್ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ, ‘ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿರುವ ವರ್ತಕರ ಬಗ್ಗೆ ನಿಖರ ಮಾಹಿತಿ ಕೊಡಿ. ಖಂಡಿತ ಅವರ ಅಂಗಡಿ ಬಂದ್‌ ಮಾಡಿಸುತ್ತೇವೆ ಮತ್ತು ವಾಣಿಜ್ಯ ಪರವಾನಗಿ ರದ್ದುಪಡಿಸುತ್ತೇವೆ’ ಎಂದು ಭರವಸೆ ನೀಡಿದರು.

ಪೊಲೀಸರ ದೌರ್ಜನ್ಯ: ‘ಅಗತ್ಯ ವಸ್ತುಗಳು, ದಿನಸಿ ಪದಾರ್ಥಗಳು ಹಾಗೂ ತರಕಾರಿ ಸಾಗಿಸುವ ವಾಹನ ಚಾಲಕರು ಮತ್ತು ಕಾರ್ಮಿಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಇದರಿಂದ ಭಯಭೀತರಾಗಿರುವ ಚಾಲಕರು ಮತ್ತು ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದ ಕಾರಣ ವಾಹನ ಚಾಲಕರಿಗೆ ಪೊಲೀಸ್ ಇಲಾಖೆಯಿಂದ ಪಾಸ್ ವಿತರಣೆ ಮಾಡಬೇಕು’ ಎಂದು ವರ್ತಕರು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ರಂಗಶಾಮಯ್ಯ, ‘ದಿಗ್ಬಂಧನ ಆದೇಶ ಘೋಷಣೆಯಾದ ನಂತರ ಈವರೆಗೆ ಅಗತ್ಯ ಸೇವೆಗಾಗಿ 5 ಸಾವಿರ ಮಂದಿಗೆ ಪಾಸ್ ವಿತರಣೆ ಮಾಡಲಾಗಿದೆ. ಅಗತ್ಯವಿದ್ದರೆ ಮತ್ತಷ್ಟು ಮಂದಿಗೆ ಪಾಸ್‌ ಕೊಡುತ್ತೇವೆ. ಪಾಸ್‌ ವಿತರಣೆಗಾಗಿ ವಾರ್ಡ್‌ವಾರು ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದು ವಿವರಿಸಿದರು.

‘ಜನರು ಮನೆಯಿಂದ ಹೊರ ಬಾರದಂತೆ ನೋಡಿಕೊಳ್ಳುವುದು ನೋಡಲ್ ಅಧಿಕಾರಿಗಳ ಜವಾಬ್ದಾರಿ. ಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಸೇವೆ ಒದಗಿಸಿದರೆ ಜನ ಮನೆಯಿಂದ ಹೊರ ಬರುವುದು ಕಡಿಮೆಯಾಗುತ್ತದೆ. ನಗರಸಭೆಯಿಂದ 35 ವಾರ್ಡ್‌ಗೆ ತರಕಾರಿ ಸರಬರಾಜು ಮಾಡಲು ಆಗುವುದಿಲ್ಲ. ನಗರಸಭೆಯು ತರಕಾರಿ ವಹಿವಾಟಿಗೆ 10 ಕಡೆ ಜಾಗ ಗುರುತಿಸಿದರೆ ಅನುಕೂಲವಾಗುತ್ತದೆ’ ಎಂದು ಉಪ ವಿಭಾಗಾಧಿಕಾರಿ ಸಲಹೆ ನೀಡಿದರು.

ತಹಶೀಲ್ದಾರ್‌ ಶೋಭಿತಾ, ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT