ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಇ–ಖಾತೆ | ಹಣ ತಿನ್ನೋದಕ್ಕೆ ಬದುಕಿದ್ದೀರಾ: ಅಧಿಕಾರಿಗಳಿಗೆ ಸಂಸದ ತರಾಟೆ

Last Updated 6 ಜನವರಿ 2022, 15:55 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರಿ ಜಮೀನುಗಳಿಗೆ ಅಕ್ರಮ ಖಾತೆ, ಅಗ್ರಿಮೆಂಟ್ ನಿವೇಶನಗಳಿಗೆ ಇ–ಖಾತೆ ಮಾಡಿಕೊಂಡು ಹೋದರೆ ಹೇಗೆ? ನಿಮಗೆ ಹೇಳೋರೊ ಕೇಳೋರೊ ಇಲ್ಲವೇ? ನಿಮ್ಮನ್ನು ಅಮಾನತು ಮಾಡಿದರೆ ಬುದ್ದಿ ಬರುತ್ತೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ನಗರಸಭೆ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

ಇಲ್ಲಿ ಗುರುವಾರ ನಗರಸಭೆ ಅಧಿಕಾರಿಗಳ ಸಭೆ ನಡೆಸಿದ ಸಂಸದರು, ‘ಅಕ್ರಮವಾಗಿ ಇ-ಖಾತೆ ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ನಾನೇ ಜಿಲ್ಲಾಧಿಕಾರಿ ಅವರಿಗೆ ಸೂಚಿಸುತ್ತೇನೆ. ಇಂತಹ ಭ್ರಷ್ಟ ಅಧಿಕಾರಿಗಳಿದ್ದರೆ ಜನರ ಕೆಲಸ ಕಾರ್ಯ ಎಲ್ಲಿ ನಡೆಯುತ್ತೆ?’ ಎಂದು ಗುಡುಗಿದರು.

‘ಅಗ್ರಿಮೆಂಟ್ ನಿವೇಶನ, ಕಂದಾಯ ಜಮೀನುಗಳಿಗೆ ಇ-ಖಾತೆ ಹೆಸರಿನಲ್ಲಿ ಇತಿಮಿತಿಯಿಲ್ಲದೆ ಹಣ ತಿನ್ನೋದಕ್ಕೆ ಬದುಕಿದ್ದೀರಾ? ಸಾರ್ವಜನಿಕ ವಲಯದಲ್ಲಿ ನಿಮ್ಮ ಬಗ್ಗೆ ಸಾಕಷ್ಟು ದೂರು ಬಂದಿವೆ. ನಗರಸಭೆ ಕಂದಾಯ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮೂರ್ನಾಲ್ಕು ವರ್ಷಗಳಿಂದ ಇಲ್ಲಿಯೇ ಬೀಡು ಬಿಟ್ಟಿದ್ದೀರಿ. ನಿಮ್ಮನ್ನು ಮೊದಲು ಎತ್ತಂಗಡಿ ಮಾಡಬೇಕು’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಅಕ್ರಮ ಖಾತೆ ದಂದೆಯಲ್ಲಿ ಯಾವ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬುದು ಗೊತ್ತಿದೆ. ಅಕ್ರಮದ ಬಗ್ಗೆ ಶೀಘ್ರವೇ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ. ತಪ್ಪಿಸ್ಥರನ್ನು ಅಮಾನತು ಮಾಡಬೇಕು’ ಎಂದು ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಶರಣಪ್ಪ ಅವರಿಗೆ ಸೂಚಿಸಿದರು.

‘ನಗರಸಭೆಯ ಅಗ್ರಿಮೆಂಟ್ ನಿವೇಶನಗಳಿಗೆ ಇ-ಖಾತೆ ಮಾಡಲು ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ. ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮತ್ತು ಆಯುಕ್ತರು ಏನು ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದರು.

ಸದಸ್ಯರ ಒತ್ತಡ: ಸಂಸದರ ಪ್ರಶ್ನೆಗೆ ಉತ್ತರಿಸಿದ ನಗರಸಭೆ ಆಯುಕ್ತ ಪ್ರಸಾದ್, ‘ಅಗ್ರಿಮೆಂಟ್ ನಿವೇಶನಗಳಿಗೆ ಖಾತೆ ಮಾಡಿಕೊಡುವಂತೆ ಕೆಲ ಸದಸ್ಯರೇ ಸಿಬ್ಬಂದಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಸಿಬ್ಬಂದಿ ಅಸಹಾಯಕರಾಗಿದ್ದಾರೆ. ಸಿಬ್ಬಂದಿ ಸದಸ್ಯರ ಒತ್ತಡಕ್ಕೆ ಮಣಿದು ಖಾತೆ ಮಾಡಿಕೊಟ್ಟಿರಬಹುದು’ ಎಂದು ಸಿಬ್ಬಂದಿಯನ್ನು ಸಮರ್ಥಿಸಿಕೊಳ್ಳಲು ಮುಂದಾದರು.

ಆಯುಕ್ತರ ಹೇಳಿಕೆಗೆ ಅಸಮಾಧಾನಗೊಂಡ ನಗರಸಭೆ ಉಪಾಧ್ಯಕ್ಷ ಪ್ರವೀಣ್‌ಗೌಡ, ‘ನಗರಸಭೆ ಸದಸ್ಯರು ಅಗ್ರಿಮೆಂಟ್ ನಿವೇಶನಗಳಿಗೆ ಇ–ಖಾತೆ ಮಾಡಿಕೊಡುವಂತೆ ಒತ್ತಡ ಹಾಕಿದರೆ ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನಿರಾಕರಿಸಬೇಕು. ಅದು ಬಿಟ್ಟು ಅಕ್ರಮವಾಗಿ ಇ-ಖಾತೆ ಮಾಡಿಕೊಟ್ಟರೆ ನಿಮ್ಮದೇ ತಪ್ಪು’ ಎಂದು ಹರಿಹಾಯ್ದರು.

ದಲ್ಲಾಳಿಗಳ ಹಾವಳಿ: ‘ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದೆ. ಜನಸಾಮಾನ್ಯರು ಕೆಲಸ ಕಾರ್ಯಗಳಿಗೆ ಬಂದರೆ ಅವರ ಕೆಲಸ ಆಗೋದಿಲ್ಲ. ಅದೇ ದಲ್ಲಾಳಿಗಳ ಮೂಲಕ ಬಂದರೆ ಅರ್ಧ ತಾಸಿನಲ್ಲಿ ಅವರ ಕೆಲಸ ಆಗುತ್ತದೆ. ಇದೇನಾ ನಿಮ್ಮ ಕಾರ್ಯವೈಖರಿ?’ ಎಂದು ಅಧಿಕಾರಿಗಳಿಗೆ ಬೆವರಿಳಿಸಿದರು.

‘ಹಾರೋಹಳ್ಳಿ ಬಳಿಯ 36 ಗುಂಟೆ ಕಂದಾಯ ಜಮೀನು, ಪಾಲಸಂದ್ರ ಲೇಔಟ್‌ನಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗಕ್ಕೆ ಖಾತೆ ಮಾಡಿದ್ದೀರಿ’ ಎಂದು ಉಪಾಧ್ಯಕ್ಷರು ದಾಖಲೆಪತ್ರ ಬಹಿರಂಗಪಡಿಸಿದಾಗ ಪೇಚಿಗೆ ಸಿಲುಕಿದ ಅಧಿಕಾರಿಗಳು ತುಟಿ ಬಿಚ್ಚಲಿಲ್ಲ.

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಅವರು ಅಗ್ರಿಮೆಂಟ್‌ ನಿವೇಶಗಳಿಗೆ ಇ-ಖಾತೆ ಮಾಡಿರುವುದು ಮತ್ತು ಪ್ರಾಧಿಕಾರದ ಅನುಮತಿ ಇಲ್ಲದೆ ಬಡಾವಣೆಗಳಿಗೆ ನಗರಸಭೆಯಲ್ಲಿ ಖಾತೆ ಮಾಡಿರುವ ಸಂಬಂಧ ಸಂಸದರಿಗೆ ದಾಖಲೆಪತ್ರಗಳನ್ನು ತೋರಿಸಿದಾಗ ಮೌನಕ್ಕೆ ಶರಣಾದರು.

ನಗರಸಭೆ ನಾಮನಿರ್ದೇಶಿತ ಸದಸ್ಯ ರಾಜೇಶ್‌, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ರವೀಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT