ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಅಕ್ರಮ: ಸದಸ್ಯರ ಪ್ರತಿಭಟನೆ

ನಗರಸಭೆ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಅಸಿಂಧು ಮತಗಳ ಎಣಿಕೆ: ಆರೋಪ
Last Updated 26 ಮೇ 2022, 13:20 IST
ಅಕ್ಷರ ಗಾತ್ರ

ಕೋಲಾರ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಅಸಿಂಧು ಮತಗಳನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಸದಸ್ಯರು ಇಲ್ಲಿ ಗುರುವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಂಬರೀಶ್‌ ಹಾಗೂ ಅವರ ಬೆಂಬಲಿತ ಸದಸ್ಯರು ಪೂರ್ವಯೋಜಿತವಾಗಿ ಮತಪತ್ರದಲ್ಲಿ (ಬ್ಯಾಲೆಟ್‌ ಪೇಪರ್‌) ಮತದಾನದ ವಿವರ ನಮೂದು ಮಾಡಿದ್ದಾರೆ. ಅಲ್ಲದೇ, ವಾರ್ಡ್‌ ಸಂಖ್ಯೆ ಮತ್ತು ಚಿಹ್ನೆಗಳನ್ನು ನಮೂದಿಸಿದ ಮತಪತ್ರಗಳ ಮೂಲಕ ಬಲವಂತದ ಮತದಾನ ಮಾಡಿಸಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಚುನಾವಣಾ ನಿಯಮದ ಪ್ರಕಾರ ಮತಪತ್ರದಲ್ಲಿ ಚುನಾವಣಾಧಿಕಾರಿಯ ಸಹಿ ಮತ್ತು ಸೀಲು ಇರಬೇಕು. ಆದರೆ, ಚುನಾವಣಾಧಿಕಾರಿಯ ಸಹಿ ಮತ್ತು ಸೀಲು ಇಲ್ಲದ ಮತಪತ್ರಗಳ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಗಿದೆ. ಪೂರ್ವಯೋಜಿತವಾಗಿ ಅಧ್ಯಕ್ಷರ ಕೊಠಡಿಗೆ ಮತಪತ್ರಗಳನ್ನು ತೆಗೆದುಕೊಂಡು ಹೋಗಿ ಮತದಾನದ ವಿವರ ನಮೂದಿಸಿ ನಾಮಕಾವಸ್ಥೆಗೆ ಮತ ಪೆಟ್ಟಿಗೆಗೆ ಹಾಕಲಾಗಿದೆ’ ಎಂದು ಸದಸ್ಯ ಎನ್‌.ಎಸ್‌.ಪ್ರವೀಣ್‌ಗೌಡ ದೂರಿದರು.

‘ಇಡೀ ಚುನಾವಣಾ ಪ್ರಕ್ರಿಯೆಯೇ ನಿಯಮಬಾಹಿರ. ಅಸಿಂಧು ಮತ ಪತ್ರಗಳನ್ನು ತಿರಸ್ಕರಿಸುವಂತೆ ಚುನಾವಣಾಧಿಕಾರಿಗೆ ಮನವಿ ಮಾಡಿದರೂ ಸ್ಪಂದಿಸದೆ ಮತ ಪತ್ರಗಳನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಿದರು. ಅಧ್ಯಕ್ಷರ ಕೈಗೊಂಬೆಯಾಗಿರುವ ಚುನಾವಣಾಧಿಕಾರಿಯು ಚುನಾವಣಾ ಅಕ್ರಮಕ್ಕೆ ಕೈಜೋಡಿಸಿದ್ದಾರೆ’ ಎಂದು ಆರೋಪಿಸಿದರು.

ಡಿ.ಸಿ ಭೇಟಿ: ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರನ್ನು ಭೇಟಿಯಾದ ಪ್ರತಿಭಟನಾಕಾರರು, ‘ಚುನಾವಣಾ ಫಲಿತಾಂಶ ತಡೆಹಿಡಿದು ಮತಗಳ ಮರು ಎಣಿಕೆ ಮಾಡಬೇಕು. ಅಸಿಂಧು ಮತಗಳನ್ನು ಪರಿಗಣಿಸಬಾರದು. ಸಿಂಧುವಾಗಿರುವ ಮತ ಪತ್ರಗಳನ್ನು ಮಾತ್ರ ಎಣಿಕೆ ಮಾಡಿ ಫಲಿತಾಂಶ ಘೋಷಿಸಬೇಕು’ ಎಂದು ಮನವಿ ಮಾಡಿದರು.

ನಗರಸಭಾ ಸದಸ್ಯರಾದ ಎಸ್‌.ಆರ್‌.ಮುರಳಿಗೌಡ, ಆರ್.ಗುಣಶೇಖರ್, ಸಿ.ರಾಕೇಶ್, ಲಕ್ಷ್ಮೀದೇವಮ್ಮ, ವಿ.ಸಂಗೀತಾ, ನಗ್ಮಾಭಾನು, ಎಂ.ಸೌಭಾಗ್ಯ, ಪಾವನಾ, ವಿ.ಮಂಜುನಾಥ್, ಭಾಗ್ಯಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT