ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಬದುಕನ್ನು ಸುಖವಾಗಿಸುವ ಸೂತ್ರವಾಗಲಿ

ಮಾಲೂರು ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷ್ಮಿನಾರಾಯಣ್ ಅಭಿಪ್ರಾಯ
Last Updated 21 ಜನವರಿ 2021, 2:31 IST
ಅಕ್ಷರ ಗಾತ್ರ

ಮಾಲೂರು: ಸಾಹಿತ್ಯ, ಸಂಸ್ಕೃತಿ ಚಿಂತನೆಗಳು ಸಮಾಜದ ವಿವಿಧ ಸ್ತರಗಳಲ್ಲಿರುವ ಜನರ ಬದುಕನ್ನು ಸುಖವನ್ನಾಗಿಸುವ ಸೂತ್ರಗಳಾಬೇಕು ಎಂದು ಸಮ್ಮೇಳನ ಸರ್ವಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ್ ಹೇಳಿದರು.

ಪಟ್ಟಣದ ಮಹಾರಾಜ ವೃತ್ತದಲ್ಲಿ ತಾಲ್ಲೂಕು ಕಸಾಪ ಬುಧವಾರ ಹಮ್ಮಿಕೊಂಡಿದ್ದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಹಿತ್ಯ ಸಮ್ಮೇಳನಗಳು ಬರೀ ಅಕಾಡೆಮಿಕ್ ವಲಯದ ಪ್ರೊಫೆಸರ್‌ಗಳ, ಐಚ್ಛಿಕ ಕನ್ನಡ ವಿದ್ಯಾರ್ಥಿಗಳ ಹಾಗೂ ವಿಶ್ವವಿದ್ಯಾಲಯಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಕಲೆ, ಸಾಹಿತ್ಯ, ಸಂಗೀತ, ಮನರಂಜನೆಗಳನ್ನು ಇಟ್ಟುಕೊಳ್ಳಲಿ ಎಂದರೆ ಬದುಕು ಯಾಂತ್ರಿಕವಾಗಿ ಬರಡಾಗುತ್ತದೆ. ಕನ್ನಡ ಭಾಷೆಯನ್ನು ಬೆಳೆಸುವ ದೊಡ್ಡ ಜವಾಬ್ದಾರಿ ಎಲ್ಲ ಕನ್ನಡಿಗರ ಮೇಲಿದೆ ಎಂದರು.

ಪಟ್ಟಣದ ಸುತ್ತಲೂ ಇರುವ ಕೈಗಾರಿಕೆಗಳಲ್ಲಿ ಶೇ 20ರಷ್ಟು ಕನ್ನಡಿಗ ಕಾರ್ಮಿಕರು ಇಲ್ಲದೆ ಕನ್ನಡ ಸೊರಗುತ್ತಿದೆ. ಕನ್ನಡ ಪರ ಕಾರ್ಮಿಕರ ಹೋರಾಟಗಳನ್ನು ಹತ್ತಿಕ್ಕಲು ಹೊರರಾಜ್ಯದ ಗುತ್ತಿಗೆದಾರರನ್ನು ನೇಮಿಸಿಕೊಂಡು ಗುತ್ತಿಗೆ ಕಾರ್ಮಿಕರನ್ನಾಗಿ ಮಾಡುವ ಮುಲಕ ಕಣ್ಣೀರು ಒರೆಸುವ ನಾಟಕವಾಡುತ್ತಿದೆ. ಭಾಷೆ ಸತ್ತರೆ ಕನ್ನಡ ಸಮುದಾಯಗಳು ಹಾಗೂ ಸಂಸ್ಕೃತಿಗಳು ನಾಶವಾಗುತ್ತವೆ ಎಂದು ತಿಳಿಸಿದರು.

ರೈತ ಮತ್ತು ಕಾರ್ಮಿಕ ನಮ್ಮ ಆರ್ಥಿಕತೆಯ ಮೂಲಾಧಾರ. ಸರ್ಕಾರಗಳು ರೈತರ ಪರವಾಗಿ ನಿಲ್ಲಬೇಕು. ಅವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ಕಾರ ಸುಧಾರಿಸಬೇಕಿದೆ. ನೆಲ ಬರಡಾಗಿಸುವ ನೀಲಗಿರಿ, ಆಕೇಶಿಯಗಳನ್ನು ಬೇರು ಮಟ್ಟದಿಂದ ಕಿತ್ತೊಗೆಯಬೇಕು. ತಾಲ್ಲೂಕು ಆಡಳಿತ ಕೆರೆ ಕುಂಟೆ ಸಂವೃದ್ಧಿಗೊಳಿಸಿ ರೈತರ ಬದುಕಿಗೆ ಆಸರೆಯಾಗಬೇಕು ಎಂದರು.

ವಿವಿಧ ಕಾರ್ಯಕ್ರಮ:

ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ತಹಶೀಲ್ದಾರ್ ಮಂಜುನಾಥ್ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್ನಾಡ ಧ್ವಜಾರೋಹಣ ನೆರವೇರಿಸಿದರು.

ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಅರಳೇರಿ ರಸ್ತೆಯ ಬಳಿ ಇರುವ ಕುವೆಂಪು ಪುತ್ಥಳಿಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ್ ಮಾಲಾರ್ಪಣೆ ಮಾಡಿದರು. ಪಟ್ಟಣದ ಮಹಾರಾಜ ವೃತ್ತದಲ್ಲಿರುವ ಕುಂತೂರು ಚಂದ್ರಪ್ಪ ಮತ್ತು ಜಾನ್ ಆಲ್ಮೇಡ ವೇದಿಕೆಗೆ ಸಮ್ಮೇಳನಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ್ ಅವರನ್ನು ಕರೆತರುವ ಮೆರವಣಿಗೆಗೆ ಶಾಸಕ ಕೆ.ವೈ.ನಂಜೇಗೌಡ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.

ಸಮ್ಮೇಳನ ಕಾರ್ಯಕ್ರಮದಲ್ಲಿ ಡಾ.ನಾ. ಮುನಿರಾಜು ಹಾಗೂ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಅವರ ಬಹುತ್ವದ ನೆಲೆಗಳು ಕೃತಿ ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಸಾಹಿತಿ ಕುಂತೂರು ಚಂದ್ರಪ್ಪ ಜ್ಞಾಪಕಾರ್ಥವಾಗಿ ಕುಂಚಾ ಪ್ರಶಸ್ತಿಯನ್ನು ಹಿರಿಯ ಸಾಹಿತಿ ವೇಣುಗೋಪಾಲ ವಹ್ನಿ ಅವರಿಗೆ ನೀಡಲಾಯಿತು.

ಬಹುತ್ವ ಹೊಂದಿರುವ ಜಿಲ್ಲೆ ಕೋಲಾರ: ‘ಸಾಹಿತ್ಯ ಜನರ ಬದುಕಿನಿಂದ ಹೊರತಾಗಿರುವ ಚಟುವಟಿಕೆ ಎಂಬ ತಪ್ಪು ಕಲ್ಪನೆಯನ್ನು ದೃಶ್ಯ ಮಾಧ್ಯಮಗಳುಸೃಷ್ಟಿ ಮಾಡಿರುವುದು ದುರದೃಷ್ಟ ವಿಚಾರ’ ಎಂದು ನಾಟಕಕಾರ ಹಾಗೂ ಕವಿ ಡಾ.ಕೆ.ವೈ.ನಾರಾಯಣ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಮಹಾರಾಜ ವೃತ್ತದಲ್ಲಿ ಬುಧವಾರ ತಾಲ್ಲೂಕು ಕಸಾಪ ಹಮ್ಮಿಕೊಂಡಿದ್ದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಹಿತವನ್ನು ಕಾಪಾಡುವ ಏಕೈಕ ಪ್ರಕಾರವೇ ಸಾಹಿತ್ಯ. ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ವಿದ್ವಾಂಸರವರೆಗೂ ಸಾಹಿತ್ಯ ಹಾಸು ಹೊಕ್ಕಾಗಿದೆ. ಮನುಜ ಕುಲವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದು ಸಾಹಿತ್ಯ ಮಾತ್ರ. ಜಿಲ್ಲೆಯು ಬಹುತ್ವ ಸಂಸ್ಕೃತಿ, ಜಾನಪದ ವಿವೇಕ ಹೊಂದಿದೆ. ಇಲ್ಲಿ ಕನ್ನಡ, ತೆಲುಗು ಮತ್ತು ತಮಿಳು ರಾಜರು ಆಳ್ವಿಕೆ ನಡೆಸಿದ್ದಾರೆ. ಅದರಿಂದಲೇ ಕೈವಾರ ನಾರಾಯಣಪ್ಪ ಜಿಲ್ಲೆಯನ್ನು ಕಲಬೆರಕೆ ಸೊಪ್ಪು ಎಂದಿದ್ದಾರೆ ಎಂದರು.

ನಮ್ಮ ಬದುಕಿಗೆ ನಾವೇ ವಾರಸುದಾರರು.ದೆಹಲಿಯಲ್ಲಿ ರೈತರು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ರೈತರ ಹಿತ ಕಾಪಾಡದ ಕಾಯ್ದೆಗಳನ್ನು ವಿರೋಧಿಸಬೇಕು ಎಂದು ತಿಳಿಸಿದರು.

ಕವಿ ಡಾ.ಕೆ. ವೈ ನಾರಾಯಣಸ್ವಾಮಿ, ಜಿಲ್ಲಾ ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್, ಪುರಸಭೆ ಅಧ್ಯಕ್ಷ ಎನ್.ವಿ.ಮುರಳೀಧರ್, ಮುಖಂಡ ಆರ್.ಪ್ರಭಾಕರ್, ಸಾಹಿತಿ ಮಾವೇ.ತಮ್ಮಯ್ಯ, ವೇಣುಗೋಪಾಲ ವಹ್ನಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮುನೇಗೌಡ, ತಾ.ಪಂ.ಉಪಾಧ್ಯಕ್ಷೆ ನಾಗವೇಣಿ, ಪುರಸಭ ಸದಸ್ಯ ಪರಮೇಶ್, ಇಒ ಕೃಷ್ಣಪ್ಪ, ಬಿಇಒ ಕೃಷ್ಣಮೂರ್ತಿ, ಸಿಒ ನಜೀರ್ ಸಾಬ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT