ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ಆಹಾರ ಬೆಲೆ ಹೆಚ್ಚಳ: ಧರಣಿ

ಕೋಚಿಮುಲ್‌ಗೆ ರಾಸುಗಳೊಂದಿಗೆ ರೈತ ಸಂಘ ಸದಸ್ಯರ ಮುತ್ತಿಗೆ
Last Updated 5 ಆಗಸ್ಟ್ 2019, 15:43 IST
ಅಕ್ಷರ ಗಾತ್ರ

ಕೋಲಾರ: ಪಶು ಆಹಾರ ಬೆಲೆ ಹೆಚ್ಚಳದ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಸೋಮವಾರ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಆಡಳಿತ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಕೋಚಿಮುಲ್‌ ಆವರಣದಲ್ಲಿ ಹಿಂಡಿ, ಬೂಸಾ ಸುರಿದು ಜಾನುವಾರುಗಳನ್ನು ಕಟ್ಟಿದ ಧರಣಿನಿರತರು, ‘ಬರ ಪರಿಸ್ಥಿತಿ ನಡುವೆಯೂ ಅವಿಭಜಿತ ಕೋಲಾರ ಜಿಲ್ಲೆಯ ರೈತರು ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಆದರೆ, ರಾಜ್ಯ ಹಾಲು ಮಹಾಮಂಡಳವು (ಕೆಎಂಎಫ್‌) ಪಶು ಆಹಾರದ ಬೆಲೆ ಹೆಚ್ಚಿಸಿ ರೈತರನ್ನು ಸಂಕಷ್ಟಕ್ಕೆ ದೂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೃಷಿ ಪ್ರಧಾನ ಜಿಲ್ಲೆಯಲ್ಲಿ ಹೈನುಗಾರಿಕೆಯು ರೈತರ ಬೆನ್ನೆಲುಬಾಗಿದೆ. ಜಿಲ್ಲೆಯಲ್ಲಿ ಮಳೆ ಇಲ್ಲದೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಪಶು ಆಹಾರ ಹಾಗೂ ಮೇವಿನ ಬೆಲೆ ಗಗನಕ್ಕೇರಿದೆ. ಮೇವಿನ ಸಮಸ್ಯೆಯಿಂದಾಗಿ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿಲ್ಲ. ಘನ ಕೊಬ್ಬಿನ ಅಂಶ (ಎಸ್‌ಎನ್‌ಎಫ್‌) ಆಧರಿಸಿ ಡೇರಿಗಳಲ್ಲಿ ಹಾಲು ಖರೀದಿ ದರ ಕಡಿಮೆ ಮಾಡಲಾಗುತ್ತಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಕುಟುಂಬ ಹಾಳು ಮಾಡುವ ಮದ್ಯದ ಬೆಲೆ ಹಾಲಿನ ದರಕ್ಕಿಂತ ಹೆಚ್ಚಿದೆ. ರೈತರು ನೀರಿನ ಸಮಸ್ಯೆ ಕಾರಣಕ್ಕೆ ಕೃಷಿಯ ಜತೆ ಹೈನೋದ್ಯಮ ನಿರ್ವಹಣೆ ಮಾಡುತ್ತಿದ್ದಾರೆ. ಬಡ್ಡಿ ಸಾಲ ಮಾಡಿ ರಾಸುಗಳನ್ನು ಖರೀದಿಸಿದ್ದಾರೆ. ಮೇವಿನ ಸಮಸ್ಯೆ, ಪಶು ಆಹಾರದ ಬೆಲೆ ಹೆಚ್ಚಳದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

ಕಾಳಜಿಯಿಲ್ಲ: ‘ಒಂದು ಲೀಟರ್ ಹಾಲು ಉತ್ಪಾದನೆಗೆ ಅಂದಾಜು ₹ 35 ವೆಚ್ಚವಾಗುತ್ತಿದೆ. ಆದರೆ, ಒಕ್ಕೂಟವು ಉತ್ಪಾದನಾ ವೆಚ್ಚಕಿಂತಲೂ ಕಡಿಮೆ ದರಕ್ಕೆ ಹಾಲು ಖರೀದಿಸಿ ರೈತರನ್ನು ಶೋಷಿಸುತ್ತಿದೆ. ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದರೂ ಸರ್ಕಾರ ನೆರವಿಗೆ ಧಾವಿಸುತ್ತಿಲ್ಲ. ಸರ್ಕಾರಕ್ಕೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಧರಣಿನಿರತರು ಕಿಡಿಕಾರಿದರು.

‘ಕೆಎಂಎಫ್‌ ಆಡಳಿತ ಮಂಡಳಿಯು ಕಚ್ಚಾ ಪದಾರ್ಥಗಳ ದರ ಏರಿಕೆ ನೆಪದಲ್ಲಿ ಏಕಾಏಕಿ ಪಶು ಆಹಾರದ ಬೆಲೆಯನ್ನು ಪ್ರತಿ ಟನ್‌ಗೆ ₹ 2 ಸಾವಿರ ಹೆಚ್ಚಳ ಮಾಡಿದೆ. ಆಡಳಿತ ಮಂಡಳಿಯು ರೈತರು ಹಾಗೂ ರೈತ ಮುಖಂಡರೊಂದಿಗೆ ಚರ್ಚಿಸದೆ ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಪಶು ಆಹಾರದ ಬೆಲೆ ಏರಿಕೆಯಿಂದ ರೈತರಿಗೆ ಆಗುವ ಸಮಸ್ಯೆ ಬಗ್ಗೆ ಕೆಎಂಎಫ್‌ ಪರಾಮರ್ಶೆ ಮಾಡಿಲ್ಲ’ ಎಂದು ಆರೋಪಿಸಿದರು.

ಆದೇಶ ಹಿಂಪಡೆಯಬೇಕು: ‘ಪಶು ಆಹಾರದ ಬೆಲೆ ಏರಿಕೆ ಆದೇಶ ಹಿಂಪಡೆಯಬೇಕು. ರೈತರ ಮೇಲಿನ ಶೋಷಣೆ ತಪ್ಪಿಸಬೇಕು. ಹಾಲು ಖರೀದಿ ದರ ಲೀಟರ್‌ಗೆ ₹ 30 ನಿಗದಿಪಡಿಸಬೇಕು. ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಪಶು ಆಹಾರ ಖರೀದಿಗೆ ಸಬ್ಸಿಡಿ ನೀಡಬೇಕು. ಹಾಲು ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಖರೀದಿ ದರ ಪರಿಷ್ಕರಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್, ಸದಸ್ಯರಾದ  ನಾಗರಾಜಗೌಡ, ರೋಜಾ, ಮಂಜುಳಾ, ಪುರುಷೋತ್ತಮ್, ವೆಂಕಟೇಶಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT