ಗುರುವಾರ , ಜನವರಿ 27, 2022
21 °C
ಜಾನುವಾರು ಕಾಯುವ ಪದ್ಧತಿ ಇಂದಿಗೂ ಜೀವಂತ

ಶ್ರೀನಿವಾಸಪುರ: ದೇಸಿ ದನ ಸಾಕಣೆಗೆ ಹೆಚ್ಚಿದ ಒಲವು

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಸೀಮೆ ಹಸುಗಳ ಭರಾಟೆ ನಡುವೆಯೂ ನಾಟಿ ಹಸುಗಳ ಸಾಕಾಣಿಕೆ ಮುಂದುವರಿದಿದೆ. ನಾಟಿ ಎಮ್ಮೆಗಳ ಪಾಲನೆಗೆ ಒತ್ತು ನೀಡಲಾಗಿದೆ. ನಾಟಿ ತಳಿಗಳನ್ನು ಉಳಿಸಿಕೊಳ್ಳುವ ರೈತರ ಸಂಕಲ್ಪದಿಂದ ದೇಸಿ ಗೋವಿನ ಸಂತತಿ ಜೀವಂತವಾಗಿದೆ.

ತಾಲ್ಲೂಕಿನ ಉತ್ತರ ಭಾಗದ ಗುಡ್ಡಗಾಡು ಪ್ರದೇಶದ ರೈತರು ಹಾಗೂ ಗಡಿ ಗ್ರಾಮಗಳ ಕೃಷಿಕರು ಜಮೀನು ಉಳುಮೆಗೆ ಸಾಂಪ್ರದಾಯಿಕ ನೇಗಿಲು ಬಳಸುವುದನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಬಿಟ್ಟಿಲ್ಲ. ಈ ರೈತರು ನಾಟಿ ಹಸುಗಳ ಪಾಲನೆಯನ್ನು ಮುಂದುವರಿಸಿದ್ದಾರೆ. ನಾಟಿ ಹಸು ಹಾಗೂ ಎಮ್ಮೆಗಳನ್ನು ಮೇಯಿಸಲು ಸಮೀಪದ ಕಾಡಿಗೆ ಬಿಡಲಾಗುತ್ತದೆ. ಸರತಿಯಂತೆ ಪ್ರತಿದಿನ ಗ್ರಾಮದ ಇಂತಿಷ್ಟು ವ್ಯಕ್ತಿಗಳೆಂದು ದನ ಕಾಯಲು ಹೋಗುವ ಪದ್ಧತಿ ಇನ್ನೂ ರೂಢಿಯಲ್ಲಿದೆ.

ಗುಡ್ಡಗಾಡು ಪ್ರದೇಶದಲ್ಲಿ ಹಾಲಿನ ಡೇರಿಗಳು ಸ್ಥಾಪನೆಯಾಗುವ ಮೊದಲು, ರೈತರು ಹಾಲು ಮಾರುತ್ತಿರಲಿಲ್ಲ. ಕರೆದ ಹಾಲನ್ನು ಕಾಯಿಸಿ ಮಜ್ಜಿಗೆ ಮಾಡಿ ಬೆಣ್ಣೆ ತೆಗೆಯುತ್ತಿದ್ದರು. ಬೆಣ್ಣೆಯನ್ನು ಒಂದು ಪಾತ್ರೆಗೆ ಹಾಕಿ ಸಾಂಪ್ರದಾಯಿಕ ವಿಧಾನದಲ್ಲಿ ಕಾಯಿಸಿ ತುಪ್ಪ ಮಾಡುತ್ತಿದ್ದರು. ಮಜ್ಜಿಗೆಯನ್ನು ಮನೆಯ ಮುಂದೆ ಒಂದು ಗುಡಾಣಕ್ಕೆ ಸುರಿಯುತ್ತಿದ್ದರು. ಮಜ್ಜಿಗೆ ಅಗತ್ಯವಿರುವ ಯಾರೇ ಆದರೂ ಉಚಿತವಾಗಿ ಮಜ್ಜಿಗೆ ತೆಗೆದುಕೊಂಡು ಹೋಗಬಹುದಾಗಿತ್ತು. ಕೆಲವರು ಗ್ರಾಮಗಳಿಗೆ ಹೋಗಿ ತುಪ್ಪ ಖರೀದಿಸಿ ಕೊಂಡೊಯ್ಯುತ್ತಿದ್ದರು.

ಗಂಡು ಕರುಗಳನ್ನು ಚೆನ್ನಾಗಿ ಸಾಕಿ ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದರು. ಅಗತ್ಯಕ್ಕಿಂತ ಹೆಚ್ಚಿದ್ದರೆ ಒಳ್ಳೆಯ ಬೆಲೆಗೆ ಮಾರಾಟ ಮಾಡುತ್ತಿದರು. ಹೆಣ್ಣು ಕರುಗಳನ್ನು ಇತರೇ ಹಸುಗಳ ಜತೆ ಕಾಡಿಗೆ ಮೇಯಲು ಬಿಡುತ್ತಿದ್ದರು. ಅದರ ಸಂತತಿ ತಾನೇ ತಾನಾಗಿ ಬೆಳೆಯುತ್ತಿತ್ತು.

ಈಗ ಕಾಲ ಬದಲಾಗಿದೆ. ಎಲ್ಲಾ ಕಡೆ ಹಾಲು ಹಾಗೂ ಹಾಲಿನ ಉತ್ಪನ್ನಗಳು ಮಾರಾಟವಾಗುತ್ತಿವೆ. ರೈತರು ಕರೆದ ಹಾಲನ್ನು ಸಮೀಪದ ಡೇರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಹಾಲು ಅಲ್ಲಿನ ಜನರ ಆರ್ಥಿಕಾಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸುತ್ತಿದೆ. ಸಗಣಿ, ಗಂಜಳ ಕೃಷಿ ಕ್ಷೇತ್ರದ ಫಲವತ್ತತೆ ಹೆಚ್ಚಲು ಸಹಕಾರಿಯಾಗಿದೆ.‌

ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ನಾಟಿ ಹಸುಗಳಿಗಿಂತ ಹೆಚ್ಚಾಗಿ ನಾಟಿ ಎಮ್ಮೆಗಳನ್ನು ಸಾಕಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಎಮ್ಮೆಗಳನ್ನು ಕಾಣಬಹುದಾಗಿದೆ. ಪ್ರತಿ ಕುಟುಂಬಕ್ಕೆ ಒಂದು ಎಮ್ಮೆಯಾದರೂ ಇರುತ್ತದೆ. ಸೀಮೆ ಹಸುಗಳ ಪಾಲನೆ ಜತೆಗೆ ನಾಟಿ ಗೋವಿನ ಪಾಲನೆ
ನಡೆದುಬಂದಿದೆ.

ಈ ಮಧ್ಯೆ ತಾಲ್ಲೂಕಿಗೆ ಮಲೆನಾಡು ಗಿಡ್ಡ ತಳಿ ಹಸುಗಳ ಪಾದಾರ್ಪಣೆಯಾಗಿದೆ. ಅವುಗಳ ಜತೆಗೆ ಪುಂಗನೂರು ಗಿಡ್ಡ ಹಸುಗಳನ್ನೂ ಸಾಕಲಾಗುತ್ತಿದೆ. ಮೇವಿನ ಸಮಸ್ಯೆ ಹೆಚ್ಚಿದಂತೆ ಕಡಿಮೆ ಮೇವು ತಿನ್ನುವ ಚಿಕ್ಕಗಾತ್ರದ ಹಸುಗಳ ಪಾಲನೆಗೆ ಮಣೆ ಹಾಕಲಾಗುತ್ತಿದೆ. ಸೀಮೆ ಎಮ್ಮೆಗಳ ಜಾಗವನ್ನು ನಾಟಿ ಎಮ್ಮೆಗಳು ಆಕ್ರಮಿಸಿಕೊಳ್ಳುತ್ತಿವೆ. 

ತಾಲ್ಲೂಕಿನಲ್ಲಿ 2018-19ರ ಜಾನುವಾರು ಗಣತಿಯಂತೆ ಒಟ್ಟು 36,758 ನಾಟಿ ದನಗಳಿವೆ. ಆ ಪೈಕಿ ನಾಟಿ ಹಸುಗಳ ಸಂಖ್ಯೆ 6,597 ಹಾಗೂ ನಾಟಿ ಎಮ್ಮೆಗಳ ಸಂಖ್ಯೆ 5,879.

‘ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಮಿಶ್ರತಳಿ ಜಾನುವಾರು ಪಾಲನೆ ಕಡಿಮೆಯಾಗುತ್ತಿದೆ. ರೈತರು ಸ್ಥಳೀಯ ದನಗಳ ಪಾಲನೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಇದರಿಂದ ಸ್ಥಳೀಯ ಹಸು ಹಾಗೂ ಎಮ್ಮೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ’ ಎಂದು ತಾಲ್ಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎನ್. ಮಂಜುನಾಥರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.