ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ

Last Updated 15 ಆಗಸ್ಟ್ 2021, 15:52 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕು ಹಾಗೂ ನಗರದ ವಿವಿಧೆಡೆ ಸರ್ಕಾರಿ ಕಚೇರಿಗಳು ಮತ್ತು ಸಂಘ ಸಂಸ್ಥೆಗಳ ಆವರಣದಲ್ಲಿ ಭಾನುವಾರ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ‘ಹಲವು ಮಹನೀಯರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಈ ಮಹನೀಯರ ಸಂಘಟಿತ ಹೋರಾಟ ಮತ್ತು ಗಡಿಯಲ್ಲಿ ಸೈನಿಕರು ಮಾತೃಭೂಮಿ ರಕ್ಷಣೆಗೆ ನಿರಂತರವಾಗಿ ಮಾಡುತ್ತಿರುವ ಸೇವೆಯು ನಮಗೆ ಆದರ್ಶವಾಗಬೇಕು’ ಎಂದು ಹೇಳಿದರು.

‘ದೇಶದ ಕಾನೂನಿನ ಅಡಿ ಜನರಿಗೆ ಸೌಲಭ್ಯ ಒದಗಿಸುವ ಜವಾಬ್ದಾರಿಯನ್ನು ಸರ್ಕಾರಿ ನೌಕರರು ನಿರ್ವಹಿಸುತ್ತಿದ್ದೇವೆ. ಇದು ನಮ್ಮ ಸೌಭಾಗ್ಯ. ಶೋಷಿತರಿಗೆ, ಬಡವರಿಗೆ ಸೇವೆ ತಲುಪಿಸುವ ಮೂಲಕ ಅವರ ಹಕ್ಕುಗಳ ರಕ್ಷಣೆಗೆ ನೌಕರರು ಜಾಗೃತಿ ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

ಸಂಕಲ್ಪ ದಿನ: ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಬಜರಂಗದಳದ ವತಿಯಿಂದ ಶನಿವಾರ ಮಧ್ಯರಾತ್ರಿ ಅಖಂಡ ಭಾರತ ಸಂಕಲ್ಪದಿನ ಆಚರಿಸುವ ಮೂಲಕ ಭಾರತಾಂಬೆಗೆ ಪೂಜೆ ಸಲ್ಲಿಸಲಾಯಿತು.

‘ಅಖಂಡ ಭಾರತ ಎಲ್ಲರ ಆಶಯವಾಗಿದೆ. ಭಾರತದ ವಿಭಜನೆಯಾದ ಈ ದಿನವನ್ನು ಮರೆಯಲು ಸಾಧ್ಯವಿಲ್ಲ. ಧರ್ಮಾಧಾರಿತವಾಗಿ ದೇಶ ವಿಭಜಿಸಿದ್ದರಿಂದ ಎಲ್ಲರಿಗೂ ನೋವು ಉಂಟಾಗಿದೆ. ದೇಶ ವಿಭಜಿಸುವ ದುಷ್ಟ ಕಾರ್ಯ ನಡೆಯುತ್ತಲೇ ಇದೆ’ ಎಂದು ಬಜರಂಗದಳ ಮುಖಂಡ ಬಾಲಾಜಿ ವಿಷಾದಿಸಿದರು.

‘ದೇಶವನ್ನು ಬೆಂಬಿಡದೆ ಕಾಡುತ್ತಿರುವ ಭಯೋತ್ಪಾದನೆಯ ಬೇರುಗಳನ್ನು ಕಿತ್ತೆಸೆಯುವ ಮೂಲಕ ಭಾರತಾಂಬೆಗೆ ಗೌರವ ನೀಡುವ ಕೆಲಸವಾಗಬೇಕು. ಈ ಕಾರ್ಯದಲ್ಲಿ ಹಗಲಿರುಳು ದುಡಿಯುತ್ತಿರುವ ಸೈನಿಕರನ್ನು ಗೌರವಿಸಬೇಕು ಮತ್ತು ಪ್ರೋತ್ಸಾಹಿಸಬೇಕು’ ಎಂದರು.

ಸ್ವಾವಲಂಬಿ ಬದುಕು: ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರತಿ ಕುಟುಂಬಕ್ಕೂ ಆರ್ಥಿಕ ನೆರವು ನೀಡುವ ಸಂಕಲ್ಪದೊಂದಿಗೆ ಸಹಕಾರ ಕ್ಷೇತ್ರವನ್ನು ಜನರ ಸ್ವಾವಲಂಬಿ ಬದುಕಿಗೆ ಆಸರೆಯಾಗಿಸುವ ಧ್ಯೇಯವಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ಬ್ಯಾಂಕ್‌ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಮಹಾತ್ಮ ಗಾಂಧೀಜಿ, ನೆಹರೂ ಅವರು ಸಹಕಾರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಭವಿಷ್ಯದಲ್ಲಿ ಸಹಕಾರ ರಂಗ ಜನರ ಸ್ವಾವಲಂಬಿ ಬದುಕಿಗೆ ಆಸರೆಯಾಗಲಿ ಎಂಬುದು ಅವರ ಉದ್ದೇಶವಾಗಿತ್ತು. ಸಹಕಾರ ರಂಗ ಪ್ರೋತ್ಸಾಹಿಸಿದ ಮಹನೀಯರ ಆದರ್ಶ ಪಾಲಿಸುವ ಮೂಲಕ ಪ್ರತಿ ಕುಟುಂಬವೂ ಸಹಕಾರ ಸಂಘದ ಸದಸ್ಯತ್ವ ಪಡೆಯಬೇಕು’ ಎಂದರು.

ಶಾಲೆ ಆರಂಭವಾಗಲಿ: ‘ಕೋವಿಡ್ ಆತಂಕ ದೂರವಾಗಿ ಶಾಲೆ ಆರಂಭವಾಗಲಿ’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮುನಿಯಪ್ಪ ಆಶಿಸಿದರು.

ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ‘ಪ್ರತಿ ವರ್ಷ ಸಡಗರದಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೆವು. ಆದರೆ, ಈ ಬಾರಿ ಕೋವಿಡ್ ಅಡ್ಡಿಯಾಗಿದೆ. ಕೋವಿಡ್‌ ದೇಶದಿಂದ ತೊಲಗಿ ಶಾಲೆಗಳು ಮೊದಲಿನಂತೆ ಆರಂಭವಾಗಬೇಕು’ ಎಂದು ಹೇಳಿದರು.

ಭಾರತೀಯರ ಜವಾಬ್ದಾರಿ: ‘ಹೋರಾಟಗಾರರ ತ್ಯಾಗ ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ದೇಶವನ್ನು ಸಾರ್ವಭೌಮ ರಾಷ್ಟ್ರವಾಗಿಸುವ ಜವಾಬ್ದಾರಿ ಪ್ರತಿ ಭಾರತೀಯರ ಮೇಲಿದೆ. ಈ ಕರ್ತವ್ಯಕ್ಕೆ ಕಿಂಚಿತ್ತೂ ಲೋಪ ಬಾರದಂತೆ ನಡೆದುಕೊಳ್ಳಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ರಾಮಕೃಷ್ಣಪ್ಪ ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ‘ಸ್ವಾತಂತ್ರ್ಯೋತ್ಸವ ತೋರಿಕೆಯ ಆಚರಣೆ ಆಗಬಾರದು. ದೇಶಾಭಿಮಾನ ಹೃದಯಂತರಾಳದಲ್ಲಿ ಮೂಡಬೇಕು. ಪ್ರತಿ ಪ್ರಜೆಯೂ ದೇಶಾಭಿಮಾನ ಮೈಗೂಡಿಸಿಕೊಂಡಾಗ ಮಾತ್ರ ಸ್ವಾತಂತ್ರ್ಯ ದಿನದ ಆಚರಣೆ ಸಾರ್ಥಕವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT