ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಹಿನ್ನೆಲೆ: ಬಡವರಿಗೆ ಇಂದಿರಾ ಕ್ಯಾಂಟೀನ್‌ ಆಸರೆ

ಉಚಿತವಾಗಿ ಆಹಾರ ವಿತರಣೆ
Last Updated 12 ಮೇ 2021, 14:41 IST
ಅಕ್ಷರ ಗಾತ್ರ

ಕೋಲಾರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಂಗಳವಾರ (ಮೇ 11) ಬೆಳಗಿನ ಪಾಳಿಯಿಂದಲೇ ಉಚಿತವಾಗಿ ಆಹಾರ ವಿತರಣೆ ಆರಂಭಿಸಲಾಗಿದೆ.

ಕೂಲಿ ಕಾರ್ಮಿಕರು, ಹಮಾಲಿಗಳು, ಭಿಕ್ಷುಕರು, ನಿರ್ಗತಿಕರು ತುತ್ತಿನ ಚೀಲ ತುಂಬಿಸಿಕೊಳ್ಳಲು ಇಂದಿರಾ ಕ್ಯಾಂಟೀನ್‌ಗಳತ್ತ ಮುಖ ಮಾಡಿದ್ದು, ಉಚಿತ ಆಹಾರಕ್ಕೆ ಬೇಡಿಕೆ ಹೆಚ್ಚಿದೆ. ಇಂದಿರಾ ಕ್ಯಾಂಟೀನ್‌ಗಳು ಲಾಕ್‌ಡೌನ್‌ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರ ಹಸಿವು ನೀಗಿಸುತ್ತಿವೆ.

ಕೋಲಾರ, ಬಂಗಾರಪೇಟೆ ಮತ್ತು ಶ್ರೀನಿವಾಸಪುರ ತಾಲ್ಲೂಕು ಕೇಂದ್ರ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 3 ಇಂದಿರಾ ಕ್ಯಾಂಟೀನ್‌ಗಳಿವೆ. ಲಾಕ್‌ಡೌನ್‌ನಿಂದ ಬಡ ಜನರಿಗೆ ಸಮಸ್ಯೆಯಾಗದಂತೆ ಪ್ರತಿನಿತ್ಯ ಉಚಿತವಾಗಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಕೊಡುವಂತೆ ಸರ್ಕಾರ ಸೋಮವಾರ (ಮೇ 10) ಆದೇಶ ಹೊರಡಿಸಿತ್ತು. ಈ ಆದೇಶ ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಂಗಳವಾರದಿಂದಲೇ ಜಾರಿಯಾಗಿದೆ.

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಇದೀಗ ಇಂದಿರಾ ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗಳಲ್ಲಿ ಆಹಾರದ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿದಂತೆ ಒಟ್ಟಾರೆ 3 ಕ್ಯಾಂಟೀನ್‌ಗಳಿಂದ ದಿನಕ್ಕೆ ಸುಮಾರು 1,500 ಮಂದಿ ಆಹಾರದ ಪಾರ್ಸೆಲ್‌ ತೆಗೆದುಕೊಳ್ಳುತ್ತಿದ್ದಾರೆ.

ನಿರ್ಗತಿಕರು, ಕಾರ್ಮಿಕರು, ಬಡ ಜನರು, ಅಸಹಾಯಕರು ಹೋಟೆಲ್‌ಗಳಿಗೆ ಹೋಗಿ ದುಬಾರಿ ಹಣ ಕೊಟ್ಟು ಊಟ ಮಾಡುವ ಸ್ಥಿತಿಯಲ್ಲಿಲ್ಲ. ಇಂತಹವರಿಗೆ ನೆರವಾಗುವ ದೃಷ್ಟಿಯಿಂದ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಆಹಾರ ನೀಡಲಾಗುತ್ತಿದೆ. ಕೋಲಾರದ ಕ್ಯಾಂಟೀನ್‌ನಲ್ಲಿ ದಿನಕ್ಕೆ (3 ಹೊತ್ತು ಸೇರಿ) ಸರಾಸರಿ 1,010 ಮಂದಿ, ಬಂಗಾರಪೇಟೆ ಕ್ಯಾಂಟೀನ್‌ನಲ್ಲಿ 220 ಮತ್ತು ಶ್ರೀನಿವಾಸಪುರ ಕ್ಯಾಂಟೀನ್‌ನಲ್ಲಿ 250 ಮಂದಿ ಆಹಾರ ಪಡೆಯುತ್ತಿದ್ದಾರೆ.

ಮುಚ್ಚಿದ ಹೋಟೆಲ್‌: ಲಾಕ್‌ಡೌನ್‌ ನಡುವೆಯೂ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸೆಲ್‌ ಸೇವೆಗೆ ಅವಕಾಶ ನೀಡಲಾಗಿದೆ. ಆದರೂ ಮಾಲೀಕರು ಹೋಟೆಲ್‌ಗಳ ಬಾಗಿಲು ತೆರೆಯುವ ಮನಸ್ಸು ಮಾಡುತ್ತಿಲ್ಲ. ವಹಿವಾಟು ಕುಸಿತದ ಕಾರಣಕ್ಕೆ ಜಿಲ್ಲೆಯಲ್ಲಿ ಬಹುಪಾಲು ಹೋಟೆಲ್‌ಗಳು ಮುಚ್ಚಿವೆ. ಹೋಟೆಲ್‌ಗಳ ಮೇಲೆ ಅವಲಂಬಿತರಾಗಿರುವ ಜನರು ಸಹ ಈಗ ಇಂದಿರಾ ಕ್ಯಾಂಟೀನ್‌ಗಳಿಗೆ ಬರುತ್ತಿದ್ದಾರೆ.

‘ಸರ್ಕಾರದ ಆದೇಶದಂತೆ ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಜನರಿಗೆ ಉಚಿತವಾಗಿ ಆಹಾರ ವಿತರಿಸಲಾಗುತ್ತಿದೆ. ಜನರ ಸಂಖ್ಯೆಗೆ ಅನುಗುಣವಾಗಿ ಕ್ಯಾಂಟೀನ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸಿದ್ಧಪಡಿಸಲಾಗುತ್ತಿದೆ’ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಮಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT