ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಸೋಂಕಿತ ಸಾವು: 36 ಮಂದಿಗೆ ಸೋಂಕು

ಜಿಲ್ಲೆಯಲ್ಲಿ ಮುಂದುವರಿದ ಸೋಂಕಿತರ ಸಾವಿನ ಸರಣಿ
Last Updated 18 ಜುಲೈ 2020, 16:41 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸರಣಿ ಮುಂದುವರಿದಿದ್ದು, ಶನಿವಾರ ಕೆಜಿಎಫ್‌ ನಗರದ ಸೋಂಕಿತ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕರಾದ ಇವರು ಕೆಜಿಎಫ್‌ನ ಸುಭಾಷ್‌ ನಗರ ನಿವಾಸಿ. 61 ವರ್ಷದ ಈ ವ್ಯಕ್ತಿಗೆ ಕೆಲ ದಿನಗಳ ಹಿಂದೆ ಸೋಂಕು ತಗುಲಿತ್ತು. ಹೀಗಾಗಿ ಇವರನ್ನು ಜಿಲ್ಲಾ ಕೇಂದ್ರದ ಆರ್‌.ಎಲ್‌ ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಶನಿವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇದರ ಬೆನ್ನೆಲ್ಲೇ ಹೊಸದಾಗಿ 36 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 264ಕ್ಕೆ ಏರಿಕೆಯಾಗಿದೆ.

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 18 ಮಂದಿಗೆ ಸೋಂಕು ತಗುಲಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 13 ಮಂದಿಗೆ, ಸೋಂಕಿತರ ಸಂಪರ್ಕದಿಂದ 4 ವರ್ಷದ ಮಗು ಹಾಗೂ ಮಹಿಳೆಗೆ, ಹೊರ ಜಿಲ್ಲೆಗೆ ಹೋಗಿ ಬಂದಿದ್ದ ಇಬ್ಬರಿಗೆ ಸೋಂಕು ಹರಡಿದೆ. 85 ವರ್ಷದ ವಯೋವೃದ್ಧರೊಬ್ಬರಿಗೆ ಸೋಂಕು ತಗುಲಿದ್ದು, ಸೋಂಕಿನ ಮೂಲ ಪತ್ತೆಯಾಗಿಲ್ಲ.

ಮುಳಬಾಗಿಲು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ 7 ಮಂದಿಗೆ, ಹೊರ ಜಿಲ್ಲೆಗೆ ಹೋಗಿದ್ದ 22 ವರ್ಷದ ಮಹಿಳೆಗೆ ಮತ್ತು ಸೋಂಕಿತ ವ್ಯಕ್ತಿಯ ಸಂಖ್ಯೆ 51,862ರ ಸಂಪರ್ಕದಿಂದ ಮಹಿಳೆಯೊಬ್ಬರಿಗೆ ಸೋಂಕು ಬಂದಿದೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರಿಗೆ ಸೋಂಕು ಹರಡಿರುವುದು ಖಚಿತವಾಗಿದೆ. ಮಾಲೂರು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ 90 ವರ್ಷದ ವೃದ್ಧ ಮತ್ತು 39 ವರ್ಷದ ಪುರುಷರೊಬ್ಬರಿಗೆ ಸೋಂಕು ಬಂದಿದೆ.

ಕೆಜಿಎಫ್‌ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಇಬ್ಬರು ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಮಹಿಳೆಯೊಬ್ಬರಿಗೆ ಸೋಂಕು ಹರಡಿದ್ದು, ಸೋಂಕಿನ ಮೂಲ ಪತ್ತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ಮುಂದುವರಿಸಿದ್ದಾರೆ.

ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲದೇ, ಸುರಕ್ಷತಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT