ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮೂಲಸೌಕರ್ಯ ಮರೀಚಿಕೆ, ನಿವಾಸಿಗಳು ಹೈರಾಣ

ಮಾರುತಿ ವೀರಾಂಜನೇಯ ನಗರ ವಸತಿ ಸಮುಚ್ಚಯದಲ್ಲಿ ಸಮಸ್ಯೆಗಳ ಸರಮಾಲೆ
Last Updated 22 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಕೋಲಾರ: ರಾಜೀವ್ ಆವಾಸ್‌ ಯೋಜನೆಯಡಿ ನಗರದ ಮಾರುತಿ ವೀರಾಂಜನೇಯ ನಗರದಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದೆ.

ನಗರಸಭೆಯ 29ನೇ ವಾರ್ಡ್‌ ವ್ಯಾಪ್ತಿಯ ಈ ನಗರದ ಕೊಳೆಗೇರಿಯ ಗುಡಿಸಲುಗಳಲ್ಲಿ ವಾಸವಾಗಿದ್ದ 100ಕ್ಕೂ ಹೆಚ್ಚು ಕುಟುಂಬಗಳನ್ನು 2015ರಲ್ಲಿ ಖಾಲಿ ಮಾಡಿಸಲಾಗಿತ್ತು. ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಈ ಕುಟುಂಬಗಳಿಗೆ ರಾಜೀವ್‌ ಆವಾಸ್‌ ಯೋಜನೆಯಡಿ ವಸತಿ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿತ್ತು.

ಮನೆ ನಿರ್ಮಾಣಕ್ಕಾಗಿ ಗುಡಿಸಲು ತೆರವುಗೊಳಿಸಿದ್ದರಿಂದ ಸ್ಥಳೀಯರು ಸಮೀಪದಲ್ಲೇ ರಸ್ತೆ ಬದಿಯಲ್ಲಿ ತಾತ್ಕಾಲಿಕವಾಗಿ ಶೆಡ್‌ ಹಾಕಿಕೊಂಡು ವಾಸವಿದ್ದರು. ಮತ್ತೆ ಕೆಲವರು ಅಕ್ಕಪಕ್ಕದ ಬಡಾವಣೆಗಳ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು.

ಬೆಂಗಳೂರಿನ ಡಿಇಸಿ ಇನ್ಫ್ರಾಸ್ಟ್ರಕ್ಚರ್‌ ಆ್ಯಂಡ್ ಪ್ರಾಜೆಕ್ಟ್ಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಏಜೆನ್ಸಿಯು ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಗುತ್ತಿಗೆ ಪಡೆದು ಮಾರುತಿ ವೀರಾಂಜನೇಯ ನಗರದಲ್ಲಿ ವಸತಿ ಸಮುಚ್ಚಯ ನಿರ್ಮಿಸಿದೆ. ಒಟ್ಟು 10 ಬ್ಲಾಕ್‌ನ ವಸತಿ ಸಮುಚ್ಚಯದಲ್ಲಿ 120 ಮನೆಗಳಿವೆ. ಮನೆ ನಿರ್ಮಾಣ ವೆಚ್ಚದಲ್ಲಿ ಶೇ 50ರಷ್ಟನ್ನು ಕೇಂದ್ರ ಸರ್ಕಾರ ಮತ್ತು ಶೇ 40ರಷ್ಟನ್ನು ರಾಜ್ಯ ಸರ್ಕಾರ ಭರಿಸಿದೆ. ಉಳಿದ ಶೇ 10ರಷ್ಟು ಹಣವನ್ನು ಫಲಾನುಭವಿಗಳು ಕಟ್ಟಿದ್ದಾರೆ.

ಕೊಳೆಗೇರಿ ಅಭಿವೃದ್ಧಿ ಮಂಡಳಿಯು ನಿಯಮಾನುಸಾರ ಮಾರುತಿ ವೀರಾಂಜನೇಯನಗರ ವಸತಿ ಸಮುಚ್ಚಯದ ಮನೆಗಳ ಕಾಮಗಾರಿ ಗುಣಮಟ್ಟ ಪರಿಶೀಲಿಸಿ ನಗರಸಭೆಗೆ ಹಸ್ತಾಂತರಿಸಬೇಕಿತ್ತು. ಬಳಿಕ ನಗರಸಭೆಯು ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ಫಲಾನುಭವಿ ಕುಟುಂಬಗಳು ಮನೆಗಳಿಗೆ ಬಂದು ವಾಸ್ತವ್ಯ ಹೂಡಿವೆ.

ಸಮುಚ್ಚಯದಲ್ಲಿನ ಜನಸಂಖ್ಯೆ ಸುಮಾರು 600 ಇದೆ. ನೀರಿನ ಸಮಸ್ಯೆ ಗಂಭೀರವಾಗಿದೆ. ಸಮುಚ್ಚಯದ ಪ್ರತಿ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ನಲ್ಲಿಯಲ್ಲಿ ನೀರು ಬಂದು ವರ್ಷಗಳೇ ಕಳೆದಿವೆ. ಸಮುಚ್ಚಯ ಆವರಣದಲ್ಲಿನ ಕೊಳವೆ ಬಾವಿಯಲ್ಲಿ ನೀರು ಬತ್ತಿದೆ. ಸ್ಥಳೀಯರು ಟ್ಯಾಂಕರ್‌ ನೀರು ಆಶ್ರಯಿಸುವಂತಾಗಿದೆ.

ವಸತಿ ಸಮುಚ್ಚಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ನಗರಸಭೆಯಿಂದ ಉಚಿತವಾಗಿ ಟ್ಯಾಂಕರ್‌ ನೀರು ಪೂರೈಸುತ್ತಿಲ್ಲ. ಹೀಗಾಗಿ ಸ್ಥಳೀಯರು ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ಹಣ ಕೊಟ್ಟು ನೀರು ಖರೀದಿಸುತ್ತಿದ್ದಾರೆ. 15 ಲೀಟರ್‌ ಕುಡಿಯುವ ನೀರಿಗೆ ₹ 10 ಇದೆ. ಪ್ರತಿ ಲೋಡ್‌ ಟ್ಯಾಂಕರ್‌ ನೀರಿಗೆ ₹ 500 ಇದೆ. ಕುಟುಂಬಗಳು ದುಡಿಮೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುತ್ತಿವೆ. ಇಲ್ಲಿ ಬಡ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ನೀರು ಖರೀದಿಸುವುದು ಆರ್ಥಿಕವಾಗಿ ಕಷ್ಟವಾಗಿದೆ.

ವಿದ್ಯುತ್‌ ಸೌಲಭ್ಯವಿಲ್ಲ: ವಸತಿ ಸಮುಚ್ಚಯಕ್ಕೆ ವಿದ್ಯುತ್‌, ಬೀದಿ ದೀಪ ಸೌಲಭ್ಯ ಕಲ್ಪಿಸಿಲ್ಲ. ನಿವಾಸಿಗಳು ಸಮೀಪದ ವಿದ್ಯುತ್ ಕಂಬದಿಂದ ತಾತ್ಕಾಲಿಕವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಮನೆಗಳಿಗೆ ವಿದ್ಯುತ್‌ ಮೀಟರ್‌ ಅಳವಡಿಸಿಲ್ಲ. ಹೀಗಾಗಿ ನಿವಾಸಿಗಳು ವಿದ್ಯುತ್‌ ಶುಲ್ಕ ಪಾವತಿಸುತ್ತಿಲ್ಲ. ಬೀದಿ ದೀಪವಿಲ್ಲದ ಕಾರಣ ಕೆಲ ನಿವಾಸಿಗಳು ಸ್ವಂತ ಹಣದಲ್ಲಿ ಮನೆ ಮುಂದೆ ವಿದ್ಯುತ್‌ ದೀಪ ಅಳವಡಿಸಿಕೊಂಡಿದ್ದಾರೆ. ಬೀದಿ ದೀಪ ಹಾಕುವಂತೆ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಬೀದಿ ದೀಪವಿಲ್ಲದ ಕಾರಣ ಸ್ಥಳೀಯರು ರಾತ್ರಿ ಮನೆಯಿಂದ ಹೊರ ಬರಲು ಭಯಪಡುವ ಸ್ಥಿತಿ ಇದೆ. ಕಳ್ಳರು ಪರಿಸ್ಥಿತಿ ಲಾಭ ಪಡೆದು ಕೈಚಳಕ ತೋರುತ್ತಿದ್ದಾರೆ. ಕಳವು ಪ್ರಕರಣಗಳು ಹೆಚ್ಚುತ್ತಿವೆ.

ನೈರ್ಮಲ್ಯ ಸಮಸ್ಯೆ: ಸಮುಚ್ಚಯದಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಸಂಪೂರ್ಣ ಹಳಿ ತಪ್ಪಿದೆ. ಪೌರ ಕಾರ್ಮಿಕರು ಮನೆಗಳ ಬಳಿ ಬಂದು ಕಸ ಸಂಗ್ರಹಿಸುವುದಿಲ್ಲ. ಮತ್ತೊಂದೆಡೆ ಸಮುಚ್ಚಯದಲ್ಲಿ ಕಸ ಸಂಗ್ರಹಣೆ ತೊಟ್ಟಿಗಳನ್ನು ನಿರ್ಮಿಸಿಲ್ಲ. ಹೀಗಾಗಿ ಸ್ಥಳೀಯರು ಸಮುಚ್ಚಯದ ಪಕ್ಕದ ರಾಜಕಾಲುವೆಯಲ್ಲಿ, ಖಾಲಿ ನಿವೇಶನದಲ್ಲಿ ಹಾಗೂ ರಸ್ತೆ ಬದಿಯಲ್ಲಿ ಕಸ ಸುರಿಯುತ್ತಿದ್ದಾರೆ.

ರಾಜಕಾಲುವೆ, ಖಾಲಿ ನಿವೇಶನ ಮತ್ತು ರಸ್ತೆ ಬದಿಯಲ್ಲಿ ಕಸ ರಾಶಿಯಾಗಿ ಬಿದ್ದಿದೆ. ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಕಸದ ರಾಶಿ ಬಳಿ ಹಂದಿ, ಬೀದಿ ನಾಯಿ, ನೊಣ, ಸೊಳ್ಳೆ ಕಾಟ ಹೆಚ್ಚಿದೆ. ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಈಗಾಗಲೇ ಹಲವರು ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಿದ್ದಾರೆ.

ಕಸದ ರಾಶಿ ಬಳಿ ಬರುವ ಬೀದಿ ನಾಯಿಗಳು ಮಕ್ಕಳನ್ನು ಕಚ್ಚಿ ಗಾಯಗೊಳಿಸಿರುವ ಪ್ರಕರಣಗಳು ಆಗಾಗ್ಗೆ ವರದಿ ಆಗುತ್ತಿದೆ. ಹೀಗಾಗಿ ಪೋಷಕರು ಮಕ್ಕಳನ್ನು ಹೊರಗೆ ಕಳುಹಿಸಲು ಭಯಪಡುವಂತಾಗಿದೆ.

ಪೌರ ಕಾರ್ಮಿಕರು ಮನೆಗಳ ಯುಜಿಡಿ ಪೈಪ್‌ ಮತ್ತು ಮ್ಯಾನ್‌ಹೋಲ್‌ಗಳನ್ನು ಹಲವು ತಿಂಗಳಿಂದ ಸ್ವಚ್ಛಗೊಳಿಸಿಲ್ಲ. ಇದರಿಂದ ಯುಜಿಡಿ ಪೈಪ್‌ ಮತ್ತು ಮ್ಯಾನ್‌ಹೋಲ್‌ ಕಟ್ಟಿಕೊಂಡು ಮಲಮೂತ್ರ, ಕೊಳಚೆ ನೀರು ಹೊರಗೆ ಹರಿಯುತ್ತಿದೆ. ಮಳೆಗಾಲದಲ್ಲಿ ಕೊಳಚೆ ನೀರು ನೆಲ ಅಂತಸ್ತಿನ ಮನೆಗಳಿಗೆ ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸುತ್ತದೆ. ಮೂಲಸೌಕರ್ಯ ಸಮಸ್ಯೆ ನಡುವೆಯೂ ಜೀವನ ಸಾಗಿಸುತ್ತಿರುವ ಸ್ಥಳೀಯರು ಹೈರಾಣಾಗಿದ್ದಾರೆ.

ಹಕ್ಕುಪತ್ರ ಕೊಟ್ಟಿಲ್ಲ
ನಗರಸಭೆ ಮಾಹಿತಿ ಪ್ರಕಾರ ವಸತಿ ಸಮುಚ್ಚಯದ 120 ಮನೆಗಳಲ್ಲಿ 100 ಮನೆಗಳಲ್ಲಿ ಅರ್ಹ ಕುಟುಂಬಗಳು ನೆಲೆಯೂರಿವೆ. ಈ ಕುಟುಂಬಗಳಿಗೆ ಈವರೆಗೂ ಹಕ್ಕುಪತ್ರ ಕೊಟ್ಟಿಲ್ಲ. ಹಕ್ಕುಪತ್ರ ಇಲ್ಲದ ಕಾರಣ ಕುಟುಂಬಗಳಲ್ಲಿ ಆತಂಕ ಮನೆ ಮಾಡಿದೆ.

ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ಮನೆ ಖಾಲಿ ಮಾಡಿಸುವ ಭೀತಿಯಲ್ಲೇ ಕುಟುಂಬಗಳು ದಿನ ದೂಡುತ್ತಿವೆ. ಸಮುಚ್ಚಯದಲ್ಲಿನ 20 ಮನೆಗಳನ್ನು ಫಲಾನುಭವಿಗಳಲ್ಲದ ಅನರ್ಹರು ಅತಿಕ್ರಮಿಸಿಕೊಂಡಿಸಿದ್ದಾರೆ. ಈ ಕುಟುಂಬಗಳು ಹಣ ಕಟ್ಟದಿದ್ದರೂ ಮನೆಯಲ್ಲಿ ನಿಯಮಬಾಹಿರವಾಗಿ ವಾಸ್ತವ್ಯ ಮುಂದುವರಿಸಿವೆ. ಇದರಿಂದ ಅರ್ಹ ಕುಟುಂಬಗಳಿಗೆ ವಂಚನೆಯಾಗಿದೆ. ಮನೆಗೆ ಕಟ್ಟಿದ ಹಣವೂ ಇಲ್ಲದೆ, ಇತ್ತ ಮನೆಯೂ ಸಿಗದೆ ಅರ್ಹ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ಈ ಕುಟುಂಬಗಳು ಮನೆಗಾಗಿ ನಗರಸಭೆ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಅಲೆದರೂ ಪ್ರಯೋಜನವಾಗಿಲ್ಲ.

ರಾಜಕಾರಣಿಗಳ ರಕ್ಷಣೆ
ಒಂದೇ ಕುಟುಂಬದ ನಾಲ್ಕೈದು ಮಂದಿ ತಲಾ ಒಂದೊಂದು ಮನೆಯಲ್ಲಿ ವಾಸವಿದ್ದಾರೆ. ಮಗ, ಮಗಳು, ಪತಿ, ಪತ್ನಿ ಹೀಗೆ ಒಬ್ಬೊಬ್ಬರು ಒಂದೊಂದು ಮನೆ ಅತಿಕ್ರಮಿಸಿಕೊಂಡಿದ್ದಾರೆ. ಅರ್ಹ ಫಲಾನುಭವಿಗಳು ನಿಯಮಾನುಸಾರ ಮನೆ ಹಂಚಿಕೆ ಮಾಡುವಂತೆ ದುಂಬಾಲು ಬಿದ್ದಿದ್ದು, ನಗರಸಭೆ ಅಧಿಕಾರಿಗಳಿಗೆ ಅತಿಕ್ರಮಣದಾರರನ್ನು ಮನೆಯಿಂದ ಹೊರ ಕಳುಹಿಸುವುದು ದೊಡ್ಡ ತಲೆ ನೋವಾಗಿದೆ. ಕೆಲ ರಾಜಕಾರಣಿಗಳು ಅತಿಕ್ರಮಣದಾರರ ರಕ್ಷಣೆಗೆ ನಿಂತಿದ್ದು, ಅಧಿಕಾರಿಗಳ ಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.

*
ವಸತಿ ಸಮುಚ್ಚಯದಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದೆ. ಸ್ಥಳೀಯರ ಸಮಸ್ಯೆ ಕೇಳುವವರಿಲ್ಲ. ನಗರಸಭೆ ಅಧಿಕಾರಿಗಳಿಗೆ ಸಮುಚ್ಚಯದ ನಿವಾಸಿಗಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ.
–ವೆಂಕಟರಾಜು, ವಸತಿ ಸಮುಚ್ಚಯ ನಿವಾಸಿ

*
ಸಮುಚ್ಚಯದ ಕೆಲ ಮನೆಗಳನ್ನು ಅನರ್ಹ ಕುಟುಂಬಗಳು ಅತಿಕ್ರಮಿಸಿಕೊಂಡಿವೆ. ಅರ್ಹ ಕುಟುಂಬಗಳು ಬಾಡಿಗೆ ಮನೆಯಲ್ಲಿವೆ. ಅನರ್ಹ ಕುಟುಂಬಗಳನ್ನು ಮನೆಯಿಂದ ಹೊರ ಕಳುಹಿಸಬೇಕು.
–ಮಂಜುನಾಥ್‌, ವಸತಿ ಸಮುಚ್ಚಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT