ಕೋಲಾರ: ‘ರೇಷ್ಮೆ ಹುಳುವಿನ ಆಸರೆ ಸಸ್ಯವಾದ ಹಿಪ್ಪುನೇರಳೆಗೆ ಥ್ರಿಪ್ಸ್ ಹಾಗೂ ಮೈಟ್ಸ್ ಎಂಬ ರಸಹೀರುವ ಕೀಟಗಳ ಹಾವಳಿ ಶುರುವಾಗಿದೆ. ಇದರಿಂದ ಸೊಪ್ಪಿನ ಇಳುವರಿ ಕುಂಠಿತವಾಗಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ರೇಷ್ಮೆ ಕೃಷಿ ವಿಜ್ಞಾನಿ ಕೆ.ಆರ್.ಶಶಿಧರ್ ಹೇಳಿದರು.
ತಾಲ್ಲೂಕಿನ ಖಾಜಿಕಲ್ಲಹಳ್ಳಿ, ದಿನ್ನೆಹೊಸಹಳ್ಳಿ ಮತ್ತು ಪುರಹಳ್ಳಿ ಗ್ರಾಮದಲ್ಲಿನ ಹಿಪ್ಪುನೇರಳೆ ತೋಟಗಳನ್ನು ಮಂಗಳವಾರ ವೀಕ್ಷಿಸಿ ಮಾತನಾಡಿ, ‘ರೇಷ್ಮೆ ಬೆಳೆಗಾರರು ಈಗಾಗಲೇ ಗೂಡಿನ ಧಾರಣೆ ಕುಸಿತದಿಂದ ಕಂಗೆಟ್ಟಿದ್ದಾರೆ’ ಎಂದು ತಿಳಿಸಿದರು.
‘ಖಾಜಿಕಲ್ಲಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಶೇ 90ರಷ್ಟು ಹಿಪ್ಪು ನೇರಳೆ ತೋಟಗಳಿಗೆ ಕೀಟಗಳ ಹಾವಳಿ ಎದುರಾಗಿದೆ. ಕೋವಿಡ್-19 ಸಂದರ್ಭದಲ್ಲಿ ರೇಷ್ಮೆಗೂಡಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತರಿಗೆ ಸೊಪ್ಪಿನ ಇಳುವರಿಯಲ್ಲಿ ಹಾಗೂ ಗುಣಮಟ್ಟದ ಸೊಪ್ಪು ಉತ್ಪಾದನೆಯಲ್ಲೂ ಹಿನ್ನಡೆಯಾಗಿದೆ’ ಎಂದರು.
‘ಥ್ರಿಪ್ಸ್ ಕೀಟದ ಮರಿ ಹಾಗೂ ಪ್ರೌಢ ಹುಳುಗಳು ಎಲೆಗಳ ಕೆಳ ಭಾಗದಲ್ಲಿ ಇದ್ದುಕೊಂಡು ಸೊಪ್ಪನ್ನು ಕೆರೆದು ನಂತರ ಹೊರ ಸೂಸುವ ರಸ ಕುಡಿಯುತ್ತವೆ. ಕೆರೆದಿರುವ ಜಾಗದಲ್ಲಿ ಬಿಳಿ ಬಣ್ಣದ ಮಚ್ಚೆಗಳು ಉಂಟಾಗಿ ಕ್ರಮೇಣ ಕಂದು ಬಣ್ಣಕ್ಕೆ ತಿರುಗಿ ಎಲೆಗಳು ಒಣಗುತ್ತವೆ. ಕೆಲವೊಮ್ಮೆ ಎಲೆಗಳು ದೋಣಿಯಾಕಾರ ಹೊಂದುತ್ತವೆ’ ಎಂದು ಮಾಹಿತಿ ನೀಡಿದರು.
‘ಕೀಟದ ಹಾವಳಿ ನಿಯಂತ್ರಣಕ್ಕೆ ತೋಟದಲ್ಲಿ ತುಂತುರು ನೀರಾವರಿ ಅಥವಾ ರೈನ್ ಗನ್ ಅಳವಡಿಸಬೇಕು. ನೀರಿನ ರಭಸಕ್ಕೆ ಕೀಟಗಳು ಕೊಚ್ಚಿ ಹೋಗುತ್ತವೆ. ಕಟಾವು ಮಾಡಿದ 12ರಿಂದ 15 ದಿನದಲ್ಲಿ ಶೇ 0.1ರಷ್ಟು ರೋಗರ್ (ಪ್ರತಿ ಲೀಟರ್ ನೀರಿಗೆ 3 ಮಿ.ಲೀ) ಕೀಟನಾಶಕ ಬೆರೆಸಿ ಸಿಂಪಡಿಸಬೇಕು’ ಎಂದು ವಿವರಿಸಿದರು.
ಸಲ್ಫರ್ ಪುಡಿ: ‘ಜೈವಿಕ ನಿಯಂತ್ರಣವಾಗಿ ಪರಭಕ್ಷಕ ಕೀಟವಾದ ಹಸಿರು ಲೇಸ್‍ವಿಂಗ್ (ಕ್ರೈಸೋಪ) ಕಾರ್ಡ್ ರೂಪದ ಚಿಟ್ಟೆ ಮೊಟ್ಟೆಯನ್ನು 7 ದಿನಗಳ ಅಂತರದಲ್ಲಿ ಎರಡು ಬಾರಿ ಬಿಡುಗಡೆಗೊಳಿಸಿ ಥ್ರಿಪ್ಸ್ ಕೀಟ ನಿಯಂತ್ರಿಸಬಹುದು. ತೋಟ ಕಟಾವಾದ 30 ದಿನದ ಬಳಿಕ ಸಿರಿಬೂಸ್ಟ್ ಪೋಷಣ್ ಸಿಂಪಡಿಸಬೇಕು. ಕೀಟನಾಶಕ ಸಿಂಪಡಣೆಯ 20 ದಿನಗಳ ನಂತರ ರೇಷ್ಮೆ ಹುಳುಗಳಿಗೆ ಸೊಪ್ಪು ನೀಡಬಹುದು’ ಎಂದು ಹೇಳಿದರು.
‘ಸೊಪ್ಪು ಕೊಯ್ಯುವ ಹಂತಕ್ಕೆ ಬಂದಿದ್ದರೆ ಶೇ 3ರಷ್ಟು ಸಲ್ಫರ್ ಪುಡಿಯನ್ನು ನೀರಿನಲ್ಲಿ ಬೆರೆಸಿ ಗಿಡದ ಎಲ್ಲಾ ಭಾಗಗಳು ನೆನೆಯುವಂತೆ ಪ್ರಮುಖವಾಗಿ ಎಲೆಯ ಕೆಳ ಭಾಗದಲ್ಲಿ ಸಿಂಪಡಿಸಬೇಕು. ಮೈಟ್ಸ್ (ನುಸಿ ಪೀಡೆ) ಕೀಟದ ಮೊಟ್ಟೆಯು ಗೋಲಾಕಾರವಾಗಿದ್ದು, ಬಿಳಿಯ ಬಣ್ಣ ಹೊಂದಿರುತ್ತದೆ. ಮರಿ ಹುಳು ಅಂಡಾಕಾರವಾಗಿದ್ದು, ಬಿಳಿ ಬಣ್ಣ ಹೊಂದಿರುತ್ತದೆ. ಪ್ರೌಢ ಕೀಟವು ದೊಡ್ಡದಾಗಿ ಅಂಡಾಕಾರ ಇಲ್ಲವೇ ಅಗಲವಾಗಿದ್ದು, ಹಳದಿ ಅಥವಾ ಕೆಂಪು ಬಣ್ಣ ಹೊಂದಿರುತ್ತದೆ’ ಎಂದು ತಿಳಿಸಿದರು.
ಅಧಿಕಾರಿಗಳು ಹಾಗೂ ತಜ್ಞರು ರೇಷ್ಮೆ ಬೆಳೆಗಾರರೊಂದಿಗೆ ಗುಂಪು ಚರ್ಚೆ ನಡೆಸಿದರು. ಅಲ್ಲದೇ, ತೋಟಗಳಿಗೆ ಭೇಟಿ ಕೊಟ್ಟು ಕೀಟಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ನೀಡಿದರು.ವೇಮಗಲ್ ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿ ಚಂದ್ರಶೇಖರ್‌ಗೌಡ, ರೇಷ್ಮೆ ವಲಯಾಧಿಕಾರಿ ಎನ್.ವಾಸು ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.