ಸೋಮವಾರ, ಆಗಸ್ಟ್ 2, 2021
27 °C
ತಾಲ್ಲೂಕು ಕಚೇರಿ ಎದುರು ಎಸ್‌ಎಫ್‌ಐ ಸದಸ್ಯರ ಧರಣಿ

ಕೋಲಾರ: ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌-19 ಹಿನ್ನೆಲೆಯಲ್ಲಿ ರಾಜ್ಯದ ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಸದಸ್ಯರು ಇಲ್ಲಿ ಬುಧವಾರ ತಹಶೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಿದರು.

‘ಕೊರೊನಾ ಸೋಂಕಿನಿಂದ ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದೆ. ಜನರು ಆಹಾರ, ಬಟ್ಟೆ, ಆಶ್ರಯ ಮತ್ತು ಉದ್ಯೋಗಕ್ಕೆ ಪರಿತಪಿಸುತ್ತಿದ್ದಾರೆ. ವಿದ್ಯಾರ್ಥಿ ಸಮುದಾಯ ಸಹ ಇದಕ್ಕೆ ಹೊರತಾಗಿಲ್ಲ. ಆದರೆ, ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕಿನ ಸಂಕಷ್ಟದಿಂದ ಜನ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರಕ್ಕೆ ವಿದ್ಯಾರ್ಥಿ ಸಮುದಾಯದ ಬಗ್ಗೆ ಕಾಳಜಿಯಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಕೈಗೊಂಬೆಯಾಗಿರುವ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ಎಸ್‌ಎಫ್‌ಐ ರಾಜ್ಯ ಘಟಕದ ಕಾರ್ಯದರ್ಶಿ ವಾಸುದೇವರೆಡ್ಡಿ ಕಿಡಿಕಾರಿದರು.

‘ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಸರ್ಕಾರದ ಈ ನಡೆ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತ ಕಾಯುವ ಹುನ್ನಾರ. ಸರ್ಕಾರಕ್ಕೆ ಮಕ್ಕಳ ಸುರಕ್ಷತೆಗಿಂತ ಖಾಸಗಿ ಶಿಕ್ಷಣ ಸಂಸ್ಥೆಗಳ ರಕ್ಷಣೆಯೇ ಮುಖ್ಯವಾಗಿದೆ. ಶಿಕ್ಷಣ ಸಂಸ್ಥೆಗಳು ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ವಂತಿಗೆಗಾಗಿ ಪೋಷಕರನ್ನು ಸುಲಿಗೆ ಮಾಡುತ್ತಿವೆ’ ಎಂದು ಆರೋಪಿಸಿದರು.

ವ್ಯಾಪಾರೀಕರಣ

‘ಶಿಕ್ಷಣವು ವ್ಯಾಪಾರೀಕರಣವಾಗಿದೆ. ಶಿಕ್ಷಣ ಸಂಸ್ಥೆಗಳು ಹಣ ಸಂಪಾದನೆಗಾಗಿ ಸರ್ಕಾರದ ಮೇಲೆ ಒತ್ತಡ ತಂದು ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಜಾರಿಯಾಗುವಂತೆ ಮಾಡಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಆಟಾಟೋಪಕ್ಕೆ ಕಡಿವಾಣ ಹಾಕದೆ ಕೈಚೆಲ್ಲಿದ್ದಾರೆ’ ಎಂದು ಧರಣಿನಿರತರು ದೂರಿದರು.

‘ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಲ್ಲಾ ಪರೀಕ್ಷೆ ರದ್ದುಪಡಿಸಬೇಕು. 6 ತಿಂಗಳ ಕಾಲ ಎಲ್ಲಾ ಬಗೆಯ ಶೈಕ್ಷಣಿಕ ಶುಲ್ಕ ಮನ್ನಾ ಮಾಡಬೇಕು. ದ್ವಿತೀಯ ಪಿಯುಸಿವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಬೇಕು. ಕೇರಳ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲೂ ಪ್ರತಿ ವಿದ್ಯಾರ್ಥಿಗೆ ಉಚಿತವಾಗಿ ತಿಂಗಳಿಗೆ 10 ಕೆ.ಜಿ ಆಹಾರ ಧಾನ್ಯ ನೀಡಬೇಕು. ಆನ್‌ಲೈನ್‌ ಶಿಕ್ಷಣ ಕಡ್ಡಾಯ ಮಾಡಬಾರದು’ ಎಂದು ಒತ್ತಾಯಿಸಿದರು.

‘ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದ ದಾಖಲಾತಿಗೆ ಅನುಮತಿ ನೀಡುವ ಮುನ್ನವೇ ಶಿಕ್ಷಣ ಸಂಸ್ಥೆಗಳು ಅನಧಿಕೃತವಾಗಿ ಆನ್‌ಲೈನ್‌ನಲ್ಲಿ ತರಗತಿ ನಡೆಸುತ್ತಿವೆ. ನಿಯಮಬಾಹಿರವಾಗಿ ಪೋಷಕರಿಗೆ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿದ್ದು ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರ ಶಿಸ್ತುಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ತಾಲ್ಲೂಕು ಘಟಕದ ಕಾರ್ಯದರ್ಶಿ ಅಂಕಿತಾ, ಜಂಟಿ ಕಾರ್ಯದರ್ಶಿ ಸುಪ್ರೀಮ್, ಸದಸ್ಯೆ ರಮ್ಯಾ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು