ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಮರ ಕಡಿತ: ಕ್ರಮಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ಕ್ಯಾಸಂಬಳ್ಳಿ ಹೋಬಳಿಯ ಕರಡಗಾನಹಳ್ಳಿ ಗ್ರಾಮದ ಸರ್ವೆ ನಂ. 27ರಲ್ಲಿ ಬೆಳೆದಿರುವ ಮರಗಳನ್ನು ಅನುಮತಿ ಪಡೆಯದೆ ಅಕ್ರಮವಾಗಿ ಕಟಾವು ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೆರೆಯಲ್ಲಿ ಅರಣ್ಯ ಇಲಾಖೆಯು ಬೇವು, ಹೊಂಗೆ, ಜಾಲಿ ಮರಗಳನ್ನು ಬೆಳೆಸಿದೆ. ಮಡಿವಾಳ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್ ನರೇಗಾ ಯೋಜನೆಯಡಿ ಕಾಮಗಾರಿ ನಡೆಸುವಾಗ ಮರಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೆ ಕಟಾವು ಮಾಡಿದ್ದಾರೆ. ಮರಗಳ ಮೌಲ್ಯ ಸುಮಾರು ₹ 50 ಸಾವಿರ ಆಗಿದೆ. 40 ಮರಗಳು ಧರೆಗುರುಳಿವೆ ಎಂದು ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮರಗಳ ಕಟಾವು ಮಾಡಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗಿತ್ತು. ಆದರೆ, ಅನುಮತಿ ಪಡೆಯದೆ ಗ್ರಾಮ ಪಂಚಾಯಿತಿಗೆ ಪತ್ರ ಕೊಟ್ಟು ಮರ ಕಡಿದಿದ್ದಾರೆ. ಆದ್ದರಿಂದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ್ ಮತ್ತು ಪೂಜ ಅವರು ಆ. 4ರಂದು ಕೆರೆಯ ಅಂಚಿನಲ್ಲಿರುವ ಮರಗಳನ್ನು ಕಡಿದು ಅದರಲ್ಲಿ ಬರುವ ಹಣವನ್ನು ಗ್ರಾಮ ಪಂಚಾಯಿತಿಗೆ ಕಟ್ಟಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಕರಡಗಾನಹಳ್ಳಿಯ ಕೆರೆ ಕಟ್ಟೆ ಶಿಥಿಲವಾಗಿದ್ದು, ಅದರ ದುರಸ್ತಿ ಮಾಡಬೇಕಾಗಿದೆ. ಕೆರೆಯ ತೂಬನ್ನು ಸಹ ದುರಸ್ತಿ ಮಾಡದೆ ಇರುವುದರಿಂದ ಕೆರೆ ನೀರು ಪೋಲಾಗುತ್ತಿದೆ.

ದುರಸ್ತಿಗೆ ಅಡ್ಡವಾಗಿರುವ ಮರಗಳನ್ನು ಕಡಿದು ಅದರಲ್ಲಿ ಬಂದ ಹಣವನ್ನು ಪಂಚಾಯಿತಿಗೆ ಕಟ್ಟುವುದಾಗಿ ತಿಳಿಸಿದ್ದಾರೆ. ಅದರಂತೆ ₹ 4,800 ಪಂಚಾಯಿತಿಗೆ ಕಟ್ಟಿದ್ದಾರೆ ಎಂದು ಗ್ರಾ. ಪಂ. ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.