ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ನಿಗದಿ ಮಾಡಲು ಒತ್ತಾಯ

ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದಿಂದ ಧರಣಿ
Last Updated 2 ಜುಲೈ 2019, 13:11 IST
ಅಕ್ಷರ ಗಾತ್ರ

ಕೋಲಾರ: ರೇಷ್ಮೆ ಗೂಡಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಸದಸ್ಯರು ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆ ಎದುರು ಮಂಗಳವಾರ ಧರಣಿ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ಸಿ.ವಿ.ನಾರಾಯಣಸ್ವಾಮಿ ಮಾತನಾಡಿ, ‘ರೇಷ್ಮೆ ಕೃಷಿ ಮತ್ತು ಉದ್ದಿಮೆಯಲ್ಲಿ ಸ್ಥಿರತೆ ಕಾಪಾಡಲು ಹಾಗೂ ರೇಷ್ಮೆ ಕೃಷಿಕರನ್ನು ರಕ್ಷಿಸಲು ಡಾ.ಎಂ.ಎಸ್.ಸ್ವಾಮಿನಾಥನ್ ಶಿಫಾರಸಿನಂತೆ ವೈಜ್ಞಾನಿಕ ಉತ್ಪಾದನಾ ವೆಚ್ಚ ಮತ್ತು ಶೇ.50ರಷ್ಟು ಲಾಭವಾಗಿ ಸೇರಿಸಿ ರೇಷ್ಮೆ ಗೂಡಿನ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಕಚ್ಚಾ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ.31ಕ್ಕೆ ಹೆಚ್ಚಿಸಬೇಕು. ಆಂತರಿಕವಾಗಿ ರೇಷ್ಮೆ ಗೂಡು, ಕಚ್ಚಾ ರೇಷ್ಮೆ ದರಗಳು ಏರುಪೇರು ಆಗದಂತೆ ಆಮದು ರಫ್ತು ನೀತಿಯನ್ನು ರೂಪಿಸಬೇಕು. ನೇಪಾಳ, ಬಾಂಗ್ಲಾ ಮತ್ತಿತರೆ ದೇಶಗಳ ಮೂಲಕ ಭಾರತಕ್ಕೆ ಕಳ್ಳಸಾಗಾಣಿಕೆಯಲ್ಲಿ ಬರುತ್ತಿರುವ ರೇಷ್ಮೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ರೇಷ್ಮೆ ಒಟ್ಟು ಉತ್ಪಾದನೆ ಆಂತರಿಕ ಬಳಕೆ ರಫ್ತು ಆಮದು ಕಚ್ಚಾ ರೇಷ್ಮೆ ಬಳಕೆಯ ಸ್ವರೂಪ, ಕೊರತೆ ಇತ್ಯಾದಿ ಮಾಹಿತಿ ಸಂಗ್ರಹಿಸಲು ಕಾಲಮಿತಿಯೊಳಗೆ ಒಂದು ಸಮರ್ಥ ಸಂಸ್ಥೆಗೆವಹಿಸಬೇಕು. ಜಿಲ್ಲೆಯಲ್ಲಿ ಹೆಚ್ಚು ರೇಷ್ಮೆ ಬೆಳೆಗಾರರಿದ್ದು ಅಂತರಾಷ್ಟ್ರೀಯ ಗಯಣಮಟ್ಟದ ರೇಷ್ಮೆ ಉತ್ಪಾದನೆ ಮಾಡಲು ಸೌಕರ್ಯ ಕಲ್ಪಿಸಬೇಕು. ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದರು.

ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಾಬೀರ್‌ಪಾ ಷ ಮಾತನಾಡಿ, ‘ಲಕ್ಷಾಂತರ ಬಂಡವಾಳ ಹೂಡಿ ರೇಷ್ಮೆ ನೂಲು ಬಿಚ್ಚಾಣಿಕಾ ಘಟಕ ಸ್ಥಾಪಿಸಿದ್ದೇವೆ, ಈಗ ಗೂಡು ಸಿಗುತ್ತಿಲ್ಲ. ಬೆಲೆ ಇಲ್ಲ ಎಂದು ರೈತರು ಕೂಡ ರೇಷ್ಮೆ ಬೆಳೆಯುತ್ತಿಲ್ಲ. ರಾಜ್ಯದಲ್ಲಿ ಸುಮಾರು 6000ಕ್ಕೂ ಹೆಚ್ಚು ರೀಲರ್‌ಗಳು ಬೇರೆ ಕೆಲಸ ಆಯ್ದುಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಿಂದೆ ರೇಷ್ಮೆ ಗೂಡು ಸಿಬಿಗೆ ಕೆಜಿಗೆ ₨ 600ರಿಂದ ₨750 ಹಾಗೂ ಮಿಶ್ರತಳಿ ಗೂಡಿಗೆ ₨ 450ರಿಂದ ₨ 520 ಇತ್ತು. ಅಂದು ಚೈನಾ ಕಚ್ಚಾ ರೇಷ್ಮೆಗೆ ₨ 5,000 ಇತ್ತು, ಸ್ಥಳೀಯ ರೇಷ್ಮೆಗೆ ₨ 4,500 ಇತ್ತು. ಆಮದು ಸುಂಕ ಶೇ 31ರಿಂದ ಶೆ. 15ಕ್ಕೆ ಇಳಿದ ನಂತರ ಧಾರಣೆ ಕಡಿಮೆಯಾಗಿದೆ. ಚೈನಾ ರೇಷ್ಮೆ ₨ 3,200 ಕುಸಿದರೆ ಸ್ಥಳೀಯ ರೇಷ್ಮೆ ₨ 2,500ರಿಂದ ₨ 2,700ಕ್ಕೆ ಇಳಿದಿದೆ. ರೀಲರ್ಸ್ ಕಡೆಯಿಂದ ರೈತರಿಗೆ ಮೋಸ ಆಗುತ್ತಿಲ್ಲ. ಕಚ್ಚಾ ರೇಷ್ಮೆ ಮಾರಾಟಕ್ಕೇ ನಾವು ಅಲೆಯುವಂತಾಗಿದೆ’ ಎಂದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್.ಗೋಪಾಲಪ್ಪ, ಕಾರ್ಯದರ್ಶಿ ಬಿ.ಎಂ.ಶಂಕರೇಗೌಡ. ರೇಷ್ಮೆ ಬೆಳೆಗಾರರಾದ ನಾರಾಯಣಸ್ವಾಮಿ, ರಮೇಶ್, ರೈತ ಸಂಘ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT