ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಣ್ಣ ಪ್ರತಿಮೆ ಸ್ಥಾಪನೆಗೆ ಒತ್ತಾಯ

ಪ್ರತಿಮೆ ತೆರವು ಖಂಡನೀಯ: ಜಿಲ್ಲಾ ಕುರುಬರ ಸಂಘದ ಆಕ್ರೋಶ
Last Updated 18 ಆಗಸ್ಟ್ 2020, 15:04 IST
ಅಕ್ಷರ ಗಾತ್ರ

ಕೋಲಾರ: ಬೆಳಗಾವಿ ಜಿಲ್ಲೆ ಪೀರನವಾಡಿ ಗ್ರಾಮದ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಪುನರ್‌ ಪ್ರತಿಷ್ಠಾಪಿಸುವಂತೆ ಒತ್ತಾಯಿಸಿ ಜಿಲ್ಲಾ ಕುರುಬರ ಸಂಘದ ಸದಸ್ಯರು ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಡಿ ಹೋರಾಡಿ ಮಡಿದ ಸಂಗೊಳ್ಳಿ ರಾಯಣ್ಣ ಸ್ಫೂರ್ತಿಯ ಚಿಲುಮೆ. ಅಧಿಕಾರಿಗಳು ಅಂತಹ ಮಹನೀಯ ವ್ಯಕ್ತಿಯ ಪ್ರತಿಮೆ ತೆರವುಗೊಳಿಸಿ ಅವಮಾನಿಸಿರುವುದು ಖಂಡನೀಯ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಿಗಳು ರಸ್ತೆ ಕಾಮಗಾರಿ ಸೋಗಿನಲ್ಲಿ ರಾಯಣ್ಣನ ಪ್ರತಿಮೆ ತೆರವು ಮಾಡಿರುವುದು ಸರಿಯಲ್ಲ. ಸಂಗೊಳ್ಳಿ ರಾಯಣ್ಣ ಹುಟ್ಟಿದ ನೆಲದಲ್ಲೇ ಅವರ ಪ್ರತಿಮೆ ಸ್ಥಾಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಅಧಿಕಾರಿಗಳು ಅಡ್ಡಿಪಡಿಸುತ್ತಿರುವುದು ನಾಚಿಕೆಗೇಡು’ ಎಂದು ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶಕ ಅಪ್ಪೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮ ಸ್ಥಳದಲ್ಲಿ ಶತಮಾನಗಳಿಂದ ಪ್ರತಿಮೆಯಿತ್ತು. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಪ್ರತಿಮೆ ತೆರವುಗೊಳಿಸಲಾಗಿದೆ. ಇದೀಗ ಪ್ರತಿಮೆ ಮರು ಸ್ಥಾಪನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಕುಂಟು ನೆಪ ಹೇಳುತ್ತಿರುವುದು ಸರಿಯಲ್ಲ’ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮುನಿಯಪ್ಪ ಕಿಡಿಕಾರಿದರು.

ಪೊಲೀಸ್‌ ದೌರ್ಜನ್ಯ: ‘ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನುಭಾವ. ಅಂತಹ ವ್ಯಕ್ತಿಯ ಪ್ರತಿಮೆ ತೆರವುಗೊಳಿಸಿ ಅಪಮಾನ ಮಾಡಲಾಗಿದೆ. ಅಧಿಕಾರಿಗಳ ಈ ಕ್ರಮ ಖಂಡಿಸಿದ ಕನ್ನಡಿಗರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ದೌರ್ಜನ್ಯ ಎಸಗಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು.

‘ರಾಜಕಾರಣಿಗಳು ಅಥವಾ ಯಾವುದೇ ಸಮುದಾಯದ ವ್ಯಕ್ತಿಗಳ ಪ್ರತಿಮೆ ನಿರ್ಮಿಸಲು ಹೋರಾಟ ಮಾಡುತ್ತಿಲ್ಲ. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನ ಪ್ರತಿಮೆ ಸ್ಥಾಪನೆಗೆ ಒತ್ತಾಯ ಮಾಡುತ್ತಿದ್ದೇವೆ. ಸರ್ಕಾರ ತಕ್ಷಣವೇ ರಾಯಣ್ಣನ ಪ್ರತಿಮೆ ಮರುಸ್ಥಾಪನೆ ಮಾಡಬೇಕು. ಇಲ್ಲದಿದ್ದರೆ ರಾಜ್ಯದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಅಧ್ಯಕ್ಷ ಎನ್.ಮುನಿರಾಜು, ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶಕಿ ಕೆ.ಎನ್.ಸರಸ್ವತಮ್ಮ, ಜಯ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್, ನಗರಸಭೆ ಸದಸ್ಯ ವಿ.ಮಂಜುನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT