ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಕ ಭ್ರಷ್ಟಾಷಾರ: ಕಾಮಗಾರಿ ಅಕ್ರಮದ ತನಿಖೆಗೆ ಒತ್ತಾಯ

ದಸಂಸ–ಆರ್‌ಪಿಐ ಸದಸ್ಯರ ಆರೋಪ
Last Updated 16 ಆಗಸ್ಟ್ 2021, 15:32 IST
ಅಕ್ಷರ ಗಾತ್ರ

ಕೋಲಾರ: ಗ್ರಾಮ ಪಂಚಾಯಿತಿಗಳ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ಸಿಬಿಐ ಅಥವಾ ಲೋಕಾಯುಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ) ಮತ್ತು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಸದಸ್ಯರು ಇಲ್ಲಿ ಸೋಮವಾರ ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ ಮಾಡಿದರು.

‘ಗ್ರಾ.ಪಂ ಅಧ್ಯಕ್ಷರು, ಪಿಡಿಒಗಳು ಅಭಿವೃದ್ಧಿ ಕಾಮಗಾರಿಗಳ ಸೋಗಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಕಾಮಗಾರಿಗಳಿಗೆ ಬಿಡುಗಡೆಯಾದ ಸಾರ್ವಜನಿಕರ ತೆರಿಗೆ ಹಣ ಭ್ರಷ್ಟರ ಜೇಬು ಸೇರುತ್ತಿದೆ. ಭ್ರಷ್ಟ ಅಧಿಕಾರಿಗಳಿಂದ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ಗ್ರಾಮಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿ ಹಣ ದೋಚುತ್ತಿದ್ದಾರೆ. ಸಾಕಷ್ಟು ಕಡೆ ಕಾಮಗಾರಿ ನಡೆಸದಿದ್ದರೂ ಗುತ್ತಿಗೆದಾರರಿಗೆ ಬಿಲ್‌ ನೀಡಲಾಗಿದೆ. ಲಂಚಬಾಕ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ರಾಜಪ್ಪ ಆರೋಪಿಸಿದರು.

‘ಭ್ರಷ್ಟ ಅಧಿಕಾರಿಗಳಿಂದ ಸರ್ಕಾರದ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ನರೇಗಾ ಕಾಮಗಾರಿಗಳಲ್ಲಿ ನಿಯಮಬಾಹಿರವಾಗಿ ಯಂತ್ರೋಪಕರಣ ಬಳಸಲಾಗುತ್ತಿದೆ. ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ. ಒಂದೇ ಕಾಮಗಾರಿಗೆ ಮೂರ್ನಾಲ್ಕು ಬಾರಿ ಬಿಲ್ ಮಂಜೂರು ಮಾಡಲಾಗಿದೆ’ ಎಂದು ದೂರಿದರು.

ತನಿಖೆ ಆಗಬೇಕು: ‘ತಾಲ್ಲೂಕಿನ ಮೈಲಾಂಡಹಳ್ಳಿಯಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಜಾಗ ಗುರುತಿಸಿ ಗ್ರಾ.ಪಂನ ಎಸ್ಸಿ–ಎಸ್ಟಿ ಶೇ 25ರ ಅನುದಾನದಲ್ಲಿ ಹಣ ಮಂಜೂರು ಮಾಡಬೇಕು. ಮುದುವತ್ತಿ ಗ್ರಾ.ಪಂ ವ್ಯಾಪ್ತಿಯ ಲಕ್ಷ್ಮೀಪುರದಲ್ಲಿ ಅಂಬೇಡ್ಕರ್ ಭವನ ಕಾಮಗಾರಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಆಗಬೇಕು. ಕೂತಾಂಡಹಳ್ಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕು. ಚಿನ್ನಾಪುರ ಗ್ರಾಮದಲ್ಲಿ ಅರ್ಧಕ್ಕೆ ನಿಂತಿರುವ ನೀರಿನ ಘಟಕದ ಕಾಮಗಾರಿ ಪುನರಾರಂಭಿಸಬೇಕು’ ಎಂದು ಪತ್ರಿಭಟನಾಕಾರರು ಒತ್ತಾಯಿಸಿದರು.

‘ಕಾಮಗಾರಿಗಳಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಸೇವೆಯಿಂದ ಅಮಾನತು ಮಾಡಬೇಕು. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಕಾಮಗಾರಿಗಳಲ್ಲಿ ದುರ್ಬಳಕೆ ಆಗಿರುವ ಹಣವನ್ನು ಅಧಿಕಾರಿಗಳಿಂದಲೇ ವಸೂಲು ಮಾಡಬೇಕೆಂದು’ ಎಂದು ಆಗ್ರಹಿಸಿದರು.

ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನಾ ಎಂ.ಚಂದ್ರಶೇಖರ್, ಜಿಲ್ಲಾ ಸಂಚಾಲಕ ಶಂಕರ್, ಖಜಾಂಚಿ ಮಣಿ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT