ಡಿಕೆಶಿ ಬಾಯಲ್ಲಿ ಭ್ರಷ್ಟಾಚಾರದ ಮಾತೇ? ಮುನಿರತ್ನ ವ್ಯಂಗ್ಯ

ಕೋಲಾರ: ‘ಬೇರೆ ಯಾರಾದರೂ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದರೆ ಉತ್ತರ ಕೊಡಬಹುದು. ಭ್ರಷ್ಟಾಚಾರದ ಕುರಿತು ಡಿ.ಕೆ.ಶಿವಕುಮಾರ್ ಮಾತನಾಡಿದರೆ ಏನೆಂದು ಹೇಳುವುದು. ನನಗಂತೂ ಗೊತ್ತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ವ್ಯಂಗ್ಯವಾಡಿದರು.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಶೇ 40 ಕಮಿಷನ್ ಎಂದು ವೇದಿಕೆಗಳಲ್ಲಿ ಮಾತನಾಡುವುದಲ್ಲ; ನ್ಯಾಯಾಲಯಕ್ಕೆ ಹೋಗಲಿ, ದಾಖಲೆ ಸಲ್ಲಿಸಲಿ. ಆರೋಪ ಮಾಡಿ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಪ್ರಾಯಶ್ಚಿತ ಅನುಭವಿಸಬೇಕಾಗುತ್ತದೆ’ ಎಂದರು.
ಕಾಂಗ್ರೆಸ್‌ನಲ್ಲಿ, ತಮ್ಮ ಬೆಡ್‌ರೂಂನಲ್ಲೇ ಇದ್ದವರು ಈಗ ಬಿಜೆಪಿಗೆ ಹೋಗಿ ಆರೋಪ ಮಾಡುತ್ತಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಟೀಕೆಗೆ, ‘ನಾನು ಯಾರ ಬೆಡ್‌ರೂಂನಲ್ಲೂ ಇರಲಿಲ್ಲ. ಯಾರಿದ್ದರೋ ಅವರನ್ನೇ ಕೇಳಿಕೊಳ್ಳಲಿ’ ಎಂದು ಹೇಳಿದರು.
ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಪದಾಧಿಕಾರಿ ಕೃಷ್ಣಾರೆಡ್ಡಿ ನಿವಾಸಕ್ಕೆ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ ಬಿಜೆಪಿಗೆ ಆಹ್ವಾನಿಸಿರುವ ಬಗ್ಗೆ, ‘ಈ ಬಗ್ಗೆ ನನಗೆ ಮಾಹಿತಿ ಇಲ್ಲ. ವೈಯಕ್ತಿಕ ಭೇಟಿ ಇರಬಹುದು. ತಾವು ನನ್ನ ಗಮನಕ್ಕೆ ತಂದರೂ ಸತ್ಯ ನನಗೆ ಗೊತ್ತಾಗಬೇಕಲ್ಲವೇ?’ ಎಂದು ಹಾರಿಕೆ ಉತ್ತರ ನೀಡಿದರು.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯ ಭಯ ಕಾಡುತ್ತಿದೆಯೇ ಎಂಬ ಪ್ರಶ್ನೆಗೆ, ‘ನಮ್ಮದೂ ರಾಷ್ಟ್ರೀಯ ಪಕ್ಷ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪ್ರಧಾನಿ ಮೋದಿ ಇದ್ದಾರೆ. ಹೀಗಾಗಿ, ಇಲ್ಲಿಗೆ ಯಾರು ಬರುತ್ತಾರೆ ಎಂಬ ಭಯ ನಮಗೆ ಇಲ್ಲ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.