ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಸುರಿದ ಮರುದಿನ ಈಸುಳ್ಳಿ ಘಮಲು

ಮಾಂಸಾಹಾರಿಗಳಿಗೆ ಅಚ್ಚುಮೆಚ್ಚು ರೆಕ್ಕೆಹುಳುಗಳ ಮಸಾಲೆ
Last Updated 11 ಜುಲೈ 2020, 7:33 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಬಹುತೇಕ ಮಾಂಸಾಹಾರಿಗಳು ಈಸುಳ್ಳಿ (ಈಸಿಳ್ಳು) ಎಂದು ಕರೆಯುವ ರೆಕ್ಕೆ ಹುಳುಗಳನ್ನು ಹಿಡಿದು ಹುರಿದು ತಿನ್ನುವುದು ಹಿಂದಿನಿಂದಲೂ ನಡೆದು ಬಂದಿದೆ. ಆ ಪರಂಪರೆ ಈಗಲೂ ಮುಂದುವರಿದಿದೆ.

ಸಾಮಾನ್ಯವಾಗಿ ಮಳೆ ಸುರಿದ ಮರುದಿನ ರಾತ್ರಿ ಹೊತ್ತಿನಲ್ಲಿ ಈ ಕೀಟಗಳು ಹುತ್ತಗಳಿಂದ ಹೊರಬಂದು ಹಾರಾಡುತ್ತವೆ. ಅಪರೂಪಕ್ಕೆ ಹಗಲಲ್ಲೂ ಕಾಣಿಸಿಕೊಳ್ಳುವುದುಂಟು.

ಹಿಂದೆ ಈಸುಳ್ಳಿ ಹಿಡಿಯುವವರು ಸೀಮೆ ಎಣ್ಣೆ ದೀಪದ ಪಕ್ಕದಲ್ಲಿ ಗುಣಿಯೊಂದನ್ನು ತೋಡುತ್ತಿದ್ದರು. ಬುಡ್ಡಿ ಬೆಳಕಿಗೆ ಬಂದ ಕೀಟಗಳು ಆ ಗುಣಿಯಲ್ಲಿ ಬೀಳುತ್ತಿದ್ದವು. ಆದರೆ, ಈಗ ಗುಣಿಗೆ ಬದಲಾಗಿ ಪ್ಲಾಸ್ಟಿಕ್‌ ಟಬ್‌ನಲ್ಲಿ ಸೌರದೀಪ ಇಟ್ಟು ಕೀಟ ಹಿಡಿಯಲಾಗುತ್ತಿದೆ. ಇದರಿಂದ ಕಸ ಕಡ್ಡಿ ಸೇರುವುದು ತಪ್ಪುತ್ತದೆ.

ದೊಡ್ಡ ಗೆದ್ದಲು ಹುಳುಗಳಿಗೆ ರೆಕ್ಕೆ ಬಂದರೆ ಅವನ್ನು ಈಸುಳ್ಳಿ ಎಂದು ಕರೆಯುತ್ತಾರೆ. ಅವು ರಾತ್ರಿ ಹೊತ್ತು ಹುತ್ತದಿಂದ ಹೊರಬಂದ ಕೂಡಲೆ ಬೆಳಕಿನಿಂದ ಆಕರ್ಷಿತವಾಗುತ್ತವೆ. ಲೈಟ್‌ ಕಂಬಗಳ ಸುತ್ತ ಸುತ್ತಾಡುತ್ತವೆ. ಬೆಳಕು ಕಂಡಲ್ಲಿ ಗುಂಪಾಗಿ ಹಾರಿ ಹೋಗಿ ಬೀಳುತ್ತವೆ. ಅವುಗಳನ್ನು ಹಿಡಿಯಲು ಹೋದಾಗ ಈಸುಳ್ಳಿಯಷ್ಟೇ ಸಿಗುವುದಿಲ್ಲ. ಅವುಗಳ ಜೊತೆಗೆ ವಿವಿಧ ಜಾತಿಯ ಕೀಟಗಳು ಹಾಗೂ ರೆಕ್ಕೆ ಇರುವೆಗಳು ಸೇರಿಕೊಂಡಿರುತ್ತವೆ. ಹಿಡಿದವರು ರೆಕ್ಕೆ ಉದುರಿಸಿ, ಇತರೆ ಕೀಟಗಳನ್ನು ವಿಂಗಡಿಸಿ ಹೊರಗೆ ಹಾಕುತ್ತಾರೆ.

ದೊಡ್ಡ ಪ್ರಮಾಣದಲ್ಲಿ ಸಿಕ್ಕಿದರೆ ಈಸುಳ್ಳಿಗೆ ಹದವಾಗಿ ಮಸಾಲೆ ಪುಡಿ ಬೆರೆಸಿ ಹುರಿದು ತಿನ್ನುತ್ತಾರೆ. ಕಡಿಮೆ ಪ್ರಮಾಣದಲ್ಲಿ ಸಿಕ್ಕರೆ ಅಕ್ಕಿ ಅಥವಾ ಕಳ್ಳೆ ಪೊಪ್ಪಿನೊಂದಿಗೆ ಈಸುಳ್ಳಿ ಬೆರೆಸಿ ಉಪ್ಪು, ಖಾರ, ಬೆಳ್ಳುಳ್ಳಿ ಸೇರಿಸಿ ಬಾಣಲೆಯಲ್ಲಿ ಹದವಾಗಿ ಹುರಿದು ಸೇವಿಸುತ್ತಾರೆ.

ಕೆಲವರು ಆಗಷ್ಟೇ ಹಿಡಿದ ಹಸಿ ಈಸುಳ್ಳಿಗಳನ್ನು ಹಾಗೆಯೇ ತಿನ್ನುವುದುಂಟು. ಇನ್ನು ಕೆಲವರು ಬಿಸಿಲಲ್ಲಿ ಒಣಗಿಸಿದ ಈಸುಳ್ಳಿಯನ್ನು ಅಗೆದು ಸವಿಯುತ್ತಾರ. ಒಮ್ಮೆ ಅದರ ರುಚಿ ಕಂಡವರು ಎಂದಿಗೂ ಬಿಡುವುದಿಲ್ಲ. ಹುರಿಯುವಾಗ ಬರುವ ಘಮಲು ಈಸುಳ್ಳಿ ಪ್ರಿಯರ ಬಾಯಲ್ಲಿ ನೀರೂರಿಸುತ್ತದೆ.

ಇನ್ನು ಕೆಲವರು ಹುತ್ತದಿಂದ ಈಸುಳ್ಳಿಯನ್ನು ಹಿಡಿದು ಬಟ್ಟೆಗೆ ಸುರಿದು ಅಲುಗಾಡಿಸಿ ರೆಕ್ಕೆ ಬಿಡಿಸುತ್ತಾರೆ. ಕಸ ಕಡ್ಡಿ ತೆಗೆದು ಮಾರಾಟ ಮಾಡುತ್ತಾರೆ. ಹಿಂದೆ ಒಂದು ಪಡಿ ಈಸುಳ್ಳಿಗೆ ಎರಡರಿಂದ ಮೂರು ಪಡಿ ರಾಗಿ ನೀಡುತ್ತಿದ್ದರು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ದವಸ ಧಾನ್ಯದ ವ್ಯವಹಾರ ನಿಂತಿದೆ.

ಹುತ್ತದಿಂದ ಈಸುಳ್ಳಿ ಹಿಡಿಯುವುದು ಸುಲಭದ ಮಾತಲ್ಲ. ಅದು ಸಾಂಘಿಕ ದುಡಿಮೆಯ ಫಲ. ಮೂರ್ನಾಲ್ಕು ಮಂದಿ ದಿನವಿಡೀ ಕೆಲಸ ಮಾಡಿದರೆ ಮಾತ್ರ ಹಿಡಿಯಲು ಸಾಧ್ಯ. ವ್ಯಕ್ತಿಯ ದಿನಗೂಲಿ ಲೆಕ್ಕದಲ್ಲಿ ಒಂದು ಸೇರು ಈಸುಳ್ಳಿ ₹300ರವರೆಗೆ ಮಾರಾಟವಾಗುತ್ತದೆ.

ಈಸುಳ್ಳಿ ಎಂದರೆ ಮನುಷ್ಯರಿಗೆ ಮಾತ್ರವಲ್ಲದೆ ಹಾವು, ಚೇಳು, ಮಂಡರಕಪ್ಪೆ, ಇಲಿ, ಹಲ್ಲಿ ಮುಂತಾದ ಜೀವಿಗಳಿಗೂ ಪ್ರಿಯ. ಈಸುಳ್ಳಿ ಹಿಡಿಯಲು ಹೋಗುವವರು ಇವುಗಳ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ.

ಈಸುಳ್ಳಿಯಲ್ಲಿ ಎರಡು ವಿಧ. ನಾಯಿ ಈಸುಳ್ಳಿ ಒಂದಾದರೆ, ಇನ್ನೊಂದು ದೊಡ್ಡೀಸುಳ್ಳಿ. ನಾಯಿ ಈಸುಳ್ಳಿ ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಜನ ತಿನ್ನುವುದಿಲ್ಲ. ದೊಡ್ಡೀಸುಳ್ಳಿಯನ್ನು ಮಾತ್ರ ಹಿಡಿದು ತಿನ್ನುತ್ತಾರೆ. ಮಳೆ ಕಡಿಮೆಯಾದಂತೆ ಈಸುಳ್ಳಿ ಅಪರೂಪವಾಗುತ್ತಿದೆ. ಇದರಿಂದ ಹೊಸ ತಲೆಮಾರಿನ ಜನ ಅದರ ರುಚಿಯಿಂದ ವಂಚಿತರಾಗುತ್ತಿದ್ದಾರೆ. ಆದರೆ, ಹಳೆ ತಲೆಮಾರಿಗೆ ಮಾತ್ರ ಹುರಿದ ಈಸುಳ್ಳಿ ಎಂದರೆ ಪ್ರಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT