ಮಂಗಳವಾರ, ಅಕ್ಟೋಬರ್ 15, 2019
22 °C

ಜಾಲಪ್ಪರ ಶಿಕ್ಷಣ ಸಂಸ್ಥೆಗಳಲ್ಲಿ ಐ.ಟಿ ಶೋಧ

Published:
Updated:
Prajavani

ಕೋಲಾರ: ನಗರದ ಹೊರವಲಯದ ಟಮಕ ಬಳಿಯಿರುವ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಒಡೆತನದ ಆಸ್ಪತ್ರೆ, ವೈದ್ಯಕೀಯ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಶೋಧ ನಡೆಸಿ ಹಣಕಾಸು ವ್ಯವಹಾರದ ದಾಖಲೆಪತ್ರ ಪರಿಶೀಲಿಸಿದರು.

ಬೆಳಗಿನ ಜಾವ 5 ಗಂಟೆ ಸುಮಾರಿಗೆ ಖಾಸಗಿ ಕಾರುಗಳಲ್ಲಿ ಬೆಂಗಳೂರಿನಿಂದ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ಇಡೀ ದಿನ ಪರಿಶೀಲನೆ ಮಾಡಿದರು. ಜಾಲಪ್ಪರ ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಹಣಕಾಸು ವ್ಯವಹಾರ, ಆದಾಯ, ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಅಧಿಕಾರಿಗಳು ಜಾಲಾಡಿದರು.

ಅಲ್ಲದೇ, ಸಂಸ್ಥೆಯ ಕೆಲ ಸಿಬ್ಬಂದಿಯ ವಿಚಾರಣೆ ನಡೆಸಿದರು. ಕಂಪ್ಯೂಟರ್‌ ಹಾರ್ಡ್‌ ಡಿಸ್ಕ್‌, ತೆರಿಗೆ ಪಾವತಿಗೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಅಧಿಕಾರಿಗಳು ಹೆಚ್ಚಿನ ಪರಿಶೀಲನೆಗಾಗಿ ವಶಕ್ಕೆ ತೆಗೆದುಕೊಂಡರು. ಮಾಧ್ಯಮ ಪ್ರತಿನಿಧಿಗಳು, ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪರಿಶೀಲನಾ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿರುವ ಜಾಲಪ್ಪ ಅವರ ಪುತ್ರ ರಾಜೇಂದ್ರ ಅವರ ನಿವಾಸ ಮತ್ತು ಕಚೇರಿ ಮೇಲೂ ಐ.ಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದರು. ರಾಜೇಂದ್ರ ಅವರ ನಿವಾಸದಲ್ಲಿ ಪತ್ತೆಯಾದ ಕೋಲಾರ ಅತಿಥಿಗೃಹದಲ್ಲಿನ ಲಾಕರ್‌ಗಳ ಕೀಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು. ನಂತರ ಆ ಕೀಗಳೊಂದಿಗೆ ಕೋಲಾರಕ್ಕೆ ಬಂದ ಅಧಿಕಾರಿಗಳು ಅತಿಥಿಗೃಹದಲ್ಲಿನ ಲಾಕರ್‌ಗಳನ್ನು ತೆರೆದು ಪರಿಶೀಲನೆ ಮಾಡಿದರು.

Post Comments (+)