ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಠ ರೋಗ ಮುಕ್ತ ಜಿಲ್ಲೆಗೆ ಕೈಜೋಡಿಸಿ: ಶಾಸಕ ಶ್ರೀನಿವಾಸಗೌಡ ಮನವಿ

Last Updated 30 ಜನವರಿ 2021, 15:05 IST
ಅಕ್ಷರ ಗಾತ್ರ

ಕೋಲಾರ: ‘ಕುಷ್ಠ ರೋಗ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ವೈದ್ಯರು ಹೆಚ್ಚು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ಪರ್ಶ್ ಕುಷ್ಠ ರೋಗ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ‘ಮಹಾತ್ಮ ಗಾಂಧೀಜಿಯ ಕನಸಾದ ಕುಷ್ಠ ರೋಗ ಮುಕ್ತ ಭಾರತ ಕಟ್ಟುವ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಕುಷ್ಠ ರೋಗ ನಿವಾರಣೆಯಾಗದಿರುವುದು ಬೇಸರದ ಸಂಗತಿ. ತರಕಾರಿ, ಸೊಪ್ಪು, ಹಾಲು, ಮೊಟ್ಟೆ, ಮೊಳಕೆ ಕಾಳು ಸೇರಿದಂತೆ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ಕಾಯಿಲೆಯಿಂದ ಬಳಲುತ್ತಿರುವವರು ಯಾವುದೇ ಸಂಕೋಚವಿಲ್ಲದೆ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಕುಷ್ಠ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ವೈದ್ಯಕೀಯ ಸಿಬ್ಬಂದಿಯು ಸೇವೆಯೆಂದು ಭಾವಿಸಬೇಕು. ಆರೋಗ್ಯ ಇಲಾಖೆಯ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಕುಷ್ಠ ರೋಗಿಗಳಿಗೆ ಅರಿವು ಮೂಡಿಸಬೇಕು. ಕುಷ್ಠ ರೋಗವನ್ನು ಭಯಾನಕ ರೋಗವೆಂದು ಬಿಂಬಿಸಲಾಗಿದೆ. ಕುಷ್ಠ ರೋಗಿಗಳನ್ನು ಕೀಳಾಗಿ ಕಾಣುವ ವ್ಯವಸ್ಥೆಯಿದೆ. ಈ ಪರಿಸ್ಥಿತಿ ಬದಲಿಸುವ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ಫೆ.13ರವರೆಗೆ ಸ್ಪರ್ಶ್ ಕುಷ್ಠ ರೋಗ ಜಾಗೃತಿ ಅಭಿಯಾನ ನಡೆಯಲಿದೆ. ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಕುಷ್ಠ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ನೆರೆ-ಹೊರೆಯವರಿಗೆ ಅಥವಾ ಸಮುದಾಯದಲ್ಲಿ ಕುಷ್ಠ ರೋಗದ ಲಕ್ಷಣ ಕಂಡುಬಂದರೆ ಅವರಿಗೆ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಬೇಕು’ ಎಂದರು.

ಸರ್ಕಾರದ ಪಣ: ‘ವಿಶ್ವ ಸಂಸ್ಥೆ ಮತ್ತು ಕೇಂದ್ರ ಸರ್ಕಾರವು 2025ರೊಳಗೆ ಭಾರತವನ್ನು ಕುಷ್ಠ ರೋಗ ಮುಕ್ತ ದೇಶವಾಗಿ ಮಾಡಲು ಪಣತೊಟ್ಟಿದೆ. ಜಿಲ್ಲೆಯಲ್ಲಿ 2020–21 ಸಾಲಿನಲ್ಲಿ 13 ಕುಷ್ಠ ರೋಗ ಪ್ರಕರಣ ಪತ್ತೆಯಾಗಿವೆ. ಕುಷ್ಠ ರೋಗಕ್ಕೆ ಅಂಟಿರುವ ಕಳಂಕ ಹಾಗೂ ತಾರತಮ್ಯ ಹೋಗಲಾಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಬದ್ದರಾಗಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು.

‘ಆಶಾ ಕಾರ್ಯಕರ್ತೆಯರು ಹೆಚ್ಚು ಕಾರ್ಯ ಕ್ಷಮತೆಯಿಂದ ಕೆಲಸ ಮಾಡಬೇಕು. ಕುಷ್ಠ ರೋಗಿಗಳ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಕುಷ್ಠ ರೋಗವು ಸಂಪೂರ್ಣ ಗುಣಪಡಿಸಬಹುದಾದ ರೋಗ ಎಂಬ ಮಾಹಿತಿಯನ್ನು ಸಮಾಜಕ್ಕೆ ನೀಡಬೇಕು. ಎಲ್ಲರಂತೆ ಕುಷ್ಠ ರೋಗಿಗಳು ಆರೋಗ್ಯಕರ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎನ್.ಎಂ.ನಾಗರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT