ಬುಧವಾರ, ಮಾರ್ಚ್ 29, 2023
24 °C
ತಡವಾಗಿ ಬಂದ ನಾಯಕರು

'ಪ್ರಜಾಧ್ವನಿ' ಸಮಾವೇಶ: ಹೆಚ್ಚು ಜನ ಸೇರಿಸದ್ದಕ್ಕೆ ಡಿ.ಕೆ.ಶಿವಕುಮಾರ್ ಗರಂ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಸೋಮವಾರ ನಡೆದ ‘ಪ್ರಜಾಧ್ವನಿ’ ಕಾಂಗ್ರೆಸ್‌ ಸಮಾವೇಶಕ್ಕೆ ನಿರೀಕ್ಷಿತ ಸಂಖ್ಯೆಯಲ್ಲಿ ಜನರನ್ನು ಸೇರಿಸದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗರಂ ಆಗಿದ್ದು ಕಂಡುಬಂತು.

ನಗರ ಹೊರವಲಯದ ಟಮಕದಲ್ಲಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ವೇದಿಕೆಯಲ್ಲಿಯೇ ಈ ಸಂಬಂಧ ಪರೋಕ್ಷವಾಗಿ ಅಸಮಾಧಾನ ಕೂಡ ವ್ಯಕ್ತಪಡಿಸಿದರು.

‘ಯಾತ್ರೆಯು ಎಲ್ಲಿ ಹೋದರೂ ಹೆಚ್ಚಿನ ಜನರು ಸೇರುತ್ತಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್‌ನ ಒಬ್ಬ ಶಾಸಕ ಇಲ್ಲ. ಒಂದು ಲಕ್ಷಕ್ಕೂ ಅಧಿಕ ಜನ ಸೇರಿದ್ದರು’ ಎಂದರು.

ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ. ಕೆ.ಶ್ರೀನಿವಾಸಗೌಡ ಜೆಡಿಎಸ್‌ನಿಂದ ಗೆದ್ದಿದ್ದರೂ ಈಗ ಕಾಂಗ್ರೆಸ್‌ ಜೊತೆ ಇದ್ದಾರೆ. ಮುಳಬಾಗಿಲಿನ ಪಕ್ಷೇತರ ಶಾಸಕ ಈಗ ಕಾಂಗ್ರೆಸ್‌ ಸೇರಿದ್ದಾರೆ. ಅಲ್ಲದೇ, ವಿಧಾನ ಪರಿಷತ್‌ನ ಇಬ್ಬರು ಸದಸ್ಯರಿದ್ದಾರೆ.

ಸಾಮಾನ್ಯವಾಗಿ ಕಾಂಗ್ರೆಸ್ ಸಮಾವೇಶ ನಡೆದಾಗ ಹೆಚ್ಚು ಜನರನ್ನು ಸೇರಿಸುವ ಕೊತ್ತೂರು ಮಂಜುನಾಥ್ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಈ ಬಾರಿ ಮೌನವಾಗಿದ್ದಾರೆ. ‌ಗೋವಿಂದಗೌಡ ಸಮಾವೇಶದಿಂದ ದೂರವೇ ಉಳಿದರು. ಇನ್ನು ವೇದಿಕೆಯಲ್ಲಿದ್ದ ಕೊತ್ತೂರು ಮಂಜುನಾಥ್‌ ಅವರಿಗೆ ಕ್ಷೇತ್ರ ಇನ್ನೂ ನಿರ್ಧಾರವಾಗಿಲ್ಲ.

ಈ ನಡುವೆ, ಸಮಾವೇಶಕ್ಕೆಂದು ಬೆಂಗಳೂರಿನಿಂದ ಹೊರಟಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ಇತರ ಮುಖಂಡರು ನರಸಾಪುರಕ್ಕೆ ಬಂದು ಅಲ್ಲಿನ ಸ್ವಾತಿ ಹೋಟೆಲ್‌ನಲ್ಲಿ ಒಂದು ಗಂಟೆ ಕಾದರು. ‘ಸಮಾವೇಶದಲ್ಲಿ ಜನರು ಇನ್ನೂ ಭರ್ತಿ ಆಗಿಲ್ಲ’ ಎಂಬ ಸಂದೇಶ ಅವರಿಗೆ ಹೋಯಿತು. ಜೊತೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಡಿದ್ದ ಕೆ.ಎಚ್‌.ಮುನಿಯಪ್ಪ ಅವರ ಆಗಮನಕ್ಕಾಗಿ ಕಾಯುತ್ತಿದ್ದರು ಎಂಬುದು ತಿಳಿದುಬಂದಿದೆ.

12 ಗಂಟೆಗೆ ಕಾರ್ಯಕ್ರಮಕ್ಕೆ ಮಧ್ಯಾಹ್ನ 1.40ಕ್ಕೆ ವೇದಿಕೆಗೆ ‘ಪ್ರಜಾಧ್ವನಿ’ ಬಸ್ಸಿನಲ್ಲಿ ಬಂದರು. ನಂತರ 3.40ಕ್ಕೆ ಕಾರ್ಯಕ್ರಮ ಮುಗಿಸಿ ವೇಮಗಲ್‌ನಲ್ಲಿ ವಿ.ಆರ್‌.ಸುದರ್ಶನ್‌ ಅವರ ನಿವಾಸದಲ್ಲಿ ಊಟ ಮಾಡಿ ಚಿಕ್ಕಬಳ್ಳಾಪುರಕ್ಕೆ ತೆರಳಿದರು.

ಜಿಲ್ಲಾ ಸಮಾವೇಶದಲ್ಲಿ ಸುಮಾರು 15 ಸಾವಿರ ಜನ ಸೇರಿದ್ದರು ಎಂಬುದಾಗಿ ಅಂದಾಜಿಸಲಾಗಿದೆ. ಬಹುತೇಕರು ಬಂಗಾರಪೇಟೆ ಹಾಗೂ ಮಾಲೂರಿನಿಂದ ಬಂದಿದ್ದರು. 50 ಸಾವಿರಕ್ಕೂ ಅಧಿಕಾರ ಜನರನ್ನು ಸೇರಿಸುವುದಾಗಿ ಸ್ಥಳೀಯ ಮುಖಂಡರು ಹಾಗೂ ಸಮಾವೇಶದ ಉಸ್ತುವಾರಿಗಳು ಭಾನುವಾರ ಹೇಳಿದ್ದರು.

ಕೋಲಾರದಲ್ಲಿ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯ ಅವರ ವಿಚಾರದ ಬಗ್ಗೆಯೂ ಡಿ.ಕೆ.ಶಿವಕುಮಾರ್‌ ವೇದಿಕೆಯಲ್ಲಿ ಮಾತನಾಡಲಿಲ್ಲ. ಪ್ರಮುಖರು ಭಾಷಣ ಮಾಡುವಾಗ ವೇದಿಕೆಯಲ್ಲಿ ಕುಳಿತವರು ನಿದ್ದೆಯಲ್ಲಿ ತೊಡಗಿದ್ದರು. ಜಿಲ್ಲಾ ಸಮಾವೇಶವಾಗಿದ್ದರೂ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯಿಂದಾಗಿ ಕುತೂಹಲ ಮೂಡಿಸಿತ್ತು.

ಬಣ ಮುಖಂಡರ ‘ಅಂತರ’
ಶಾಸಕ ಕೆ.ಆರ್.ರಮೇಶ್ ಕುಮಾರ್ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ವೇದಿಕೆಯಲ್ಲಿದ್ದರೂ ಎಂದಿನಂತೆ ಪರಸ್ಪರ ಮಾತನಾಡಲಿಲ್ಲ. ಬೆಂಬಲಿಗರು ವೇದಿಕೆಯಲ್ಲೂ ಅಂತರ ಕಾಯ್ದುಕೊಂಡರು.

ಮುನಿಯಪ್ಪ‌ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾ ಮೈಕ್‌ ಬಳಿ ಕರೆಸಿ ಮಾತನಾಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು