ಭಾನುವಾರ, ಸೆಪ್ಟೆಂಬರ್ 19, 2021
29 °C
ಕಾಂಗ್ರೆಸ್‌ ಪದಾಧಿಕಾರಿಗಳ ಸಭೆ

ಕೆ.ಸಿ ವ್ಯಾಲಿ ಯೋಜನೆಗೆ ಅಡ್ಡಗಾಲು ಹಾಕಿಲ್ಲ: ಕೆ.ಎಚ್.ಮುನಿಯಪ್ಪ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಗೆ ಅಡ್ಡಗಾಲು ಹಾಕಿಲ್ಲ. ಸುಪ್ರೀಂ ಕೋರ್ಟ್‌ ಯೋಜನೆಗೆ ತಡೆಯಾಜ್ಞೆ ನೀಡಿರುವುದಕ್ಕೂ ನನಗೂ ಸಂಬಂಧವಿಲ್ಲ. ದಾರಿಹೋಕರ ನಿಂದನೆಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಎದುರಾಳಿಗಳಿಗೆ ತಿರುಗೇಟು ನೀಡಿದರು.

ಇಲ್ಲಿ ಗುರುವಾರ ನಡೆದ ಕಾಂಗ್ರೆಸ್‌ನ ಬೂತ್ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ನಾನು ಮಾಡಿದರೆ ಉತ್ತಮ ಕೆಲಸವನ್ನೇ ಮಾಡುತ್ತೇನೆ, ಇಲ್ಲವಾದರೆ ಸೆಲ್ಯೂಟ್ ಹೊಡೆದು ಸುಮ್ಮನಿರುತ್ತೇನೆ. ವಿನಾಕಾರಣ ಯಾರಿಗೂ ತೊಂದರೆ ಮಾಡಿಲ್ಲ’ ಎಂದರು.

‘ಸುಪ್ರೀಂ ಕೋರ್ಟ್ ಕೆ.ಸಿ ವ್ಯಾಲಿ ಯೋಜನೆಗೆ ತಡೆಯಾಜ್ಞೆ ನೀಡಿದ ನಂತರ ನೀರಾವರಿ ಸಚಿವರು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. ಯಾರನ್ನೋ ಯಾಮಾರಿಸಿ ರಾಜಕಾರಣ ಮಾಡುವ ಅನಿವಾರ್ಯತೆ ನನಗಿಲ್ಲ. ನೀರಾವರಿ ಯೋಜನೆಗೆ ಮುನಿಯಪ್ಪ ಅಡ್ಡಗಾಲು ಹಾಕಿದ್ದಾರೆ ಎಂದು ಹೇಳುವವರಿಗೆ ಜನರೇ ಪಾಠ ಕಲಿಸಬೇಕು’ ಎಂದು ಹೇಳಿದರು.

‘ಕೆ.ಸಿ ವ್ಯಾಲಿ ಯೋಜನೆ ಮೂಲಕ ಜಿಲ್ಲೆಗೆ ನೀರು ಹರಿಸಿದರೆ ಬರ ನಿರ್ಮೂಲನೆ ಮಾಡಬಹುದೆಂದು ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಹೇಳಿದ್ದರು. ನಂತರ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಚರ್ಚಿಸಿ ಯಾವುದೇ ಅಡೆತಡೆಯಿಲ್ಲದೆ ಯೋಜನೆಗೆ ಅನುಮೋದನೆ ಕೊಡಿಸಿದೆ. ಬಳಿಕ ಕೆ.ಆರ್.ರಮೇಶ್‌ಕುಮಾರ್‌ ಅಸಕ್ತಿ ವಹಿಸಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಲು ಕ್ರಮ ಕೈಗೊಂಡರು’ ಎಂದು ಸ್ಪಷ್ಟಪಡಿಸಿದರು.

ಸಾರ್ವಕಾಲಿಕ ದಾಖಲೆ: ‘ಕೋಲಾರ ಕ್ಷೇತ್ರದಲ್ಲಿ ನನ್ನನ್ನು 7 ಗೆಲ್ಲಿಸಿರುವುದು ಎಐಸಿಸಿಯಲ್ಲಿ ಸಾರ್ವಕಾಲಿಕ ದಾಖಲೆ. ಪಕ್ಷದಲ್ಲಿನ ಕೆಲವರು ಈ ಬಾರಿ ನನಗೆ ಟಿಕೆಟ್‌ ತಪ್ಪಿಸಲು ನಡೆಸಿದ ಪ್ರಯತ್ನ ವಿಫಲವಾಯಿತು. ಇದಕ್ಕೆಲ್ಲಾ ಜನರ ಆಶೀರ್ವಾದವೇ ಕಾರಣ’ ಎಂದರು.

‘ನಾನು ಯಾವುದೇ ವ್ಯಕ್ತಿ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ನನ್ನ ಬಳಿಗೂ ಬರುತ್ತಿದ್ದ. ಒಂದು ಪಕ್ಷ ಅವರನ್ನು ಅಭ್ಯರ್ಥಿಯಾಗಿಸಿ ಚುನಾವಣೆಗೆ ನಿಲ್ಲಲು ಅವಕಾಶ ಕೊಟ್ಟಿದೆ. ಯಾರನ್ನು ಗೆಲ್ಲಿಸಬೇಕು ಎಂಬುದು ಜನರಿಗೆ ಗೊತ್ತಿದೆ. ಜನ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು’ ಎಂದು ಸಲಹೆ ನೀಡಿದರು.

ಸಾಧನೆ ಶೂನ್ಯ: ‘ಬಿಜೆಪಿ ಸರ್ಕಾರದ ಸಾಧನೆ ಶೂನ್ಯ. ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸಿದ್ದೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ. ದೇಶದಲ್ಲಿ ಜಾತ್ಯತೀತ ಪಕ್ಷಗಳು ಮಹಾ ಚುನಾವಣೆ ಎದುರಿಸುತ್ತಿವೆ ರಾಹುಲ್ ಗಾಂಧಿ, ದೇವೇಗೌಡರು, ಸಿದ್ದರಾಮಯ್ಯ ಆಲೋಚನೆ ಮಾಡಿಯೇ ರಾಜ್ಯದ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ 8 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ’ ಎಂದು ವಿವರಿಸಿದರು.

‘ಸರಕು ಮತ್ತು ಸೇವಾ ತೆರಿಗೆ ಪದ್ಧತಿಯಿಂದ ವ್ಯಾಪರಸ್ಥರಿಗೆ ನೆಮ್ಮದಿಯಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ರೈತರ ₹ 2 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಹಕಾರಿ ಬ್ಯಾಂಕ್‌ಗಳಲ್ಲಿನ ₹ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ₹ 45 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ’ ಎಂದು ಮಾಹಿತಿ ನೀಡಿದರು.

ಕಾಳಜಿಯಿಲ್ಲ: ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಶೇ 5ರಷ್ಟು ಕೃಷಿ ಸಾಲ ಮನ್ನಾ ಮಾಡಲು ಸಾಧ್ಯವಾಗಿಲ್ಲ. ಆದರೆ, ಉದ್ಯಮಗಳ ಹಾಗೂ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದೆ. ಬಿಜೆಪಿಗೆ ರೈತರ ಬಗ್ಗೆ ಕಾಳಜಿಯಿಲ್ಲ’ ಎಂದು ಪ್ರಶ್ನಿಸಿದರು.

‘ಬಿಜೆಪಿ ಸಂಸದರೆಲ್ಲಾ ಮೋದಿಯ ಕೈಗೊಂಬೆಗಳಾಗಿದ್ದಾರೆ. ರಾಜ್ಯದ ಬಿಜೆಪಿ ಸಂಸದರು ನೆಲ ಜಲ ಸಂರಕ್ಷಣೆ ಬಗ್ಗೆ ಧ್ವನಿ ಎತ್ತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಿಲ್ಲೆಯ ನರಸಾಪುರ, ವೇಮಗಲ್ ಸುತ್ತಮುತ್ತ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾದವು. ಈಗ ನರಸಾಪುರ ಬಳಿ ಐಫೋನ್ ತಯಾರಿಕೆ ಕೈಗಾರಿಕೆ ಆರಂಭವಾಗುವ ಹಂತದಲ್ಲಿದ್ದು, ಭವಿಷ್ಯದಲ್ಲಿ 10 ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ’ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಜಿ ಸಚಿವ ನಿಸಾರ್ ಅಹಮ್ಮದ್‌, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ನಗರಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುನಿವೆಂಕಟಪ್ಪ, ಅತಾವುಲ್ಲಾ ಖಾನ್‌, ಚುನಾವಣಾ ವೀಕ್ಷಕರಾದ ಕವಿತಾ, ಮೋಹನ್‌, ನಗರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು